Advertisement

ಮಳೆ ಕೊಡುವ ದೇವರು

09:15 AM Jun 16, 2019 | keerthan |

ಸಮುದ್ರದ ನೀರು ಆವಿಯಾಗಿ, ಮೋಡದಲ್ಲಿ ಶೇಖರಗೊಂಡು, ಅಲ್ಲಿ ರಾಸಾಯನಿಕ ಕ್ರಿಯೆ ಏರ್ಪಟ್ಟು, ಮಳೆ ಸುರಿಯುತ್ತೆ ಅನ್ನೋದು ವಿಜ್ಞಾನ. “ಮಳೆಗೂ ಒಬ್ಬ ದೇವರಿದ್ದಾನೆ. ಆತನನ್ನು ಆರಾಧನೆಯಿಂದ ಸಂಪ್ರೀತ ಗೊಳಿಸಿದರೆ, ಬಯಸಿದ ಕ್ಷಣದಲ್ಲಿ ಮಳೆ ಧರೆಗಿಳಿಯುತ್ತೆ’ ಎನ್ನುವುದು ಧಾರ್ಮಿಕ ನಂಬಿಕೆ. ವಿಜ್ಞಾನವೂ ತನ್ನ ಕಂಗಳನ್ನು ಉಜ್ಜಿಕೊಂಡು ನೋಡುವಂತೆ ಮಾಡಿವೆ, ಈ ನೆಲದ ಭಕ್ತಿ- ಭಾವಗಳು. ನಾಡಿನ ಅಲ್ಲಲ್ಲಿ ಮಳೆಯನ್ನು ಕರುಣಿಸಲೆಂದೇ ಹತ್ತಾರು ದೇವರುಗಳಿವೆ. ಮುಂಗಾರು ವಿಳಂಬವಾಗುತ್ತಿರುವ ಈ ಹೊತ್ತಿನಲ್ಲಿ ಆ ದೇವರನ್ನೆಲ್ಲ ಒಂದೆಡೆ ಕೂರಿಸಿ ನೆನೆದಾಗ…

Advertisement

ಶೃಂಗೇರಿ
ಆ ದೇವ ಪೂಜೆಗೆ ಸಂಪ್ರೀತನಾಗಿ ಒಮ್ಮೆ ತಥಾಸ್ತು ಅಂದುಬಿಟ್ಟರೆ, ನಾಡಿಗೆಲ್ಲ ಮಳೆ! ಶೃಂಗೇರಿ ಸಮೀಪದ ಕಿಗ್ಗಾದ ಋಷ್ಯಶೃಂಗೇಶ್ವರನಿಗೆ ಆ ಕಾರಣಕ್ಕಾಗಿಯೇ ನಾಡಿನ ಜನ ಕರೆಯುವುದು, “ಮಳೆದೇವರು’ ಎಂದು. ಸಸ್ಯ ಶ್ಯಾಮಲೆಯ ಮಲೆನಾಡಿನ ಒಂದು ಮೂಲೆಯಲ್ಲಿ ಕುಳಿತ ಈ ಮಳೆ ದೇವರು, ಯಾವತ್ತೂ ಭಕ್ತರ ನಂಬಿಕೆಯನ್ನು ಸುಳ್ಳು ಮಾಡಿದವನಲ್ಲ. ಈ ಊರಿಗೆ ಇರುವುದು ಪುರಾತನ ಚೆಲುವು. ಶೃಂಗೇರಿಯಿಂದ ಪಶ್ಚಿಮಕ್ಕೆ 8 ಕಿ.ಮೀ. ಕ್ರಮಿಸಿದರೆ, ನಂದಿನಿ ನದಿಯ ತೀರದಲ್ಲಿ, ಕಿಗ್ಗಾ ಎಂಬ ಪುಟಾಣಿ ಊರು ಕಾಣಿಸುತ್ತದೆ. ನಾಡಿಗೆ ಮಳೆಯನ್ನು ಕರುಣಿಸುವ ಈ ಊರಿಗೆ ಪುರಾಣದ ಕಳೆಯಿದೆ.

ತಪಃಶಕ್ತಿಯಿಂದ ಮಳೆ…
ಅಯೋಧ್ಯಾ ಮಹಾರಾಜ ದಶರಥನು ತನ್ನ ಉಪಪತ್ನಿಗೆ ಕೆಟ್ಟ ನಕ್ಷತ್ರದಲ್ಲಿ ಜನಿಸಿದ ಮಗು ಶಾಂತಾಳನ್ನು ಕುಲಗುರುಗಳಾದ ವಸಿಷ್ಟರ ಆದೇಶದಂತೆ ಅಂಗ ದೇಶದ ದೊರೆ ರೋಮ ಪಾದನಿಗೆ ದತ್ತು ನೀಡಿರುತ್ತಾರೆ. ಶಾಂತಾಳ ಜನ್ಮ ನಕ್ಷತ್ರದ ಕೆಟ್ಟ ಪರಿಣಾಮದಿಂದಾಗಿ ಅಂಗ ದೇಶದಲ್ಲಿ ಭೀಕರಕ್ಷಾಮ ತಲೆದೋರುತ್ತದೆ. ಯಾವುದೇ ಯಜ್ಞ- ಯಾಗ- ಪೂಜಾದಿಗಳು ಫ‌ಲ ನೀಡದೇ, 12 ವರ್ಷಗಳ ಸುದೀರ್ಘ‌ ಕಾಲದ ಭೀಕರ ಕ್ಷಾಮವು ತನ್ನ ರೌದ್ರ ನರ್ತನವನ್ನು ಮುಂದುವರಿಸುತ್ತದೆ. ಎಲ್ಲೆಂದರಲ್ಲಿ ಸಾವು- ನೋವು, ಅಶಾಂತಿ- ಅರಾಜಕತೆ, ಹಸಿವಿನ ಆಕ್ರಂದನ ಮುಗಿಲು ಮುಟ್ಟುತ್ತದೆ.

ಇಂಥ ಸಂಕಷ್ಟ ಕಾಲದಲಿ, ತ್ರಿಲೋಕ ಸಂಚಾರಿ ನಾರದ ಮುನಿಗಳು ಅಂಗ ದೇಶಕ್ಕೆ ಆಗಮಿಸುತ್ತಾರೆ.ಕ್ಷಾಮದಿಂದ ಕಂಗೆಟ್ಟಿದ್ದ ರೋಮಪಾದನು ನಾರದರನ್ನು ಸತ್ಕರಿಸಿ, ಕ್ಷಾಮ ನಿವಾರಣೆಗೆ ಸಲಹೆ ಪಡೆಯುತ್ತಾನೆ. ನೈಷ್ಟಿಕ ಬ್ರಹ್ಮಚಾರಿ ಋಷ್ಯಶೃಂಗರ ಪಾದಸ್ಪರ್ಶದಿಂದ ದೇಶವು ಪಾವನಗೊಳ್ಳುತ್ತದೆ ಎಂದು ನಾರದರು ಸಲಹೆ ನೀಡುತ್ತಾರೆ. ಅದರಂತೆ ರಾಜನು ಋಷ್ಯಶೃಂಗರನ್ನು ತನ್ನ ದೇಶಕ್ಕೆ ಬರಮಾಡಿ  ಕೊಳ್ಳುತ್ತಾನೆ. ಋಷ್ಯಶೃಂಗರ ಪ್ರವೇಶದಿಂದ ಒಳ್ಳೆಯದೇ ಘಟಿಸುತ್ತದೆ. ತನ್ನ ದತ್ತುಪುತ್ರಿ ಶಾಂತಾಳನ್ನು ಋಷ್ಯಶೃಂಗರಿಗೆ ಕೊಟ್ಟು ವಿವಾಹ ಮಾಡುತ್ತಾನೆ. ಋಷ್ಯಶೃಂಗರ ತಪಃಶಕ್ತಿಯಿಂದ
ದೇಶಕ್ಕೆ ಉತ್ತಮ ಮಳೆ- ಬೆಳೆಯಾಗುತ್ತದೆ.

ಮಳೆ ಬರಿಸ್ತಾನೆ, ಮಳೆ ನಿಲ್ಲಿಸ್ತಾನೆ..!
ಋಷ್ಯಶೃಂಗನೆದುರು ಮಳೆಗೆ ಪ್ರಾರ್ಥನೆಯಿಟ್ಟರೆ, ಅದು ಶೀಘ್ರ ಕೈಗೂಡುವುದೆಂಬ ನಂಬಿಕೆ ಈಗಲೂ ನಿಜವಾಗುತ್ತಿದೆ. ಅನಾವೃಷ್ಟಿ ನಿವಾರಣೆ ಮತ್ತು ಸುವೃಷ್ಟಿಗಾಗಿ ರುದ್ರಹೋಮ ಮತ್ತು ಪರ್ಜನ್ಯ ಜಪಾದಿಗಳು ಇಲ್ಲಿನ ವಿಶೇಷ. ಹಾಗೆಯೇ ಜೋರು ಮಳೆಯಾಗಿ, ಬೆಳೆ ಸಂಕಷ್ಟ ಎದುರಾದರೂ, ಋಷ್ಯಶೃಂಗನೇ ಅದನ್ನು ನಿಯಂತ್ರಿಸುತ್ತಾನೆ. ಶ್ರೀ ಶಾಂತಾ ಸಮೇತ ಋಷ್ಯಶೃಂಗೇಶ್ವರನಿಗೆ ಶೃಂಗೇರಿ ಜಗದ್ಗುರುಗಳು ಶ್ರೀಮುಖ ಸಹಿತ ಕಳುಹಿಸಿ ಗಂಧ ವಿಶೇಷವನ್ನು ಸಮರ್ಪಿಸಿ, ಅತಿವೃಷ್ಟಿಯನ್ನು ನಿವಾರಿಸುವ ಪೂಜೆ ಕೈಗೊಳ್ಳಲಾಗುತ್ತದೆ.

Advertisement

ಮಡಿಕೇರಿ
ಇಗ್ಗುತಪ್ಪ , ಮಳೆ ಕೊಡಪ್ಪಾ…
ಕರ್ನಾಟಕದ ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗು. ಅಲ್ಲಿ ಚೆನ್ನಾಗಿ ಮಳೆಯಾದರೆ, ಕಾವೇರಿ ಮೈದುಂಬಿ ಹರಿಯುತ್ತಾಳೆ. ಕಾವೇರಿ ಹರಿದರೆ, ಕರ್ನಾಟಕ ನಗುತ್ತದೆ. ಇಂತಿಪ್ಪ ಕೊಡಗಿನಲ್ಲಿ ಮಳೆ ಬೆಳೆಯನ್ನು ರಕ್ಷಿಸುತ್ತಿರುವುದು ಇಗ್ಗುತಪ್ಪ ಸ್ವಾಮಿ ಎಂಬುದು ಇಲ್ಲಿನವರ ನಂಬಿಕೆ. ಅವರ ಪಾಲಿಗೆ ಇಗ್ಗುತಪ್ಪ ಸ್ವಾಮಿ, ‘ಮಳೆ ದೇವರು’! ಮಳೆ ಬಾರದಿದ್ದಾಗ ಸ್ವಾಮಿಯಲ್ಲಿ ಪ್ರಾರ್ಥಿಸಿದರೆ, ವರುಣ ಫ‌ಲ ನಿಶ್ಚಿತ. ಮಳೆಯ ಆರ್ಭಟ ಹೆಚ್ಚಿದಾಗ ‘ಶಾಂತವಾಗು ಸ್ವಾಮಿ’ ಅಂತಲೂ ಪೂಜಿಸುತ್ತಾರೆ. ಅವರ ನಂಬಿಕೆಯನ್ನು ಸ್ವಾಮಿ ಎಂದಿಗೂ ಹುಸಿ ಮಾಡಿಲ್ಲವಂತೆ. ಅಷ್ಟೇ ಅಲ್ಲದೆ, ಸುಗ್ಗಿಯ ವೇಳೆ ಮೊದಲು ಇಗ್ಗುತಪ್ಪ ದೇಗುಲದಲ್ಲಿ ಭತ್ತದ ತೆನೆಯನ್ನು ಕೊಯ್ದು ಪೂಜೆ ಸಲ್ಲಿಸಿದ ನಂತರವೇ, ಜಿಲ್ಲೆಯ ಉಳಿದೆಡೆ ತೆನೆಯನ್ನು ಕೊಯ್ಯುವುದು. ಇಗ್ಗುತಪ್ಪ ದೇವಾಲಯ ಇರುವುದು ಮಡಿಕೇರಿ ತಾಲೂಕಿನ ಪುಟ್ಟ ಹಳ್ಳಿಯಾದ ಕಕ್ಕಬೆಯಿಂದ 3 ಕಿ.ಮೀ. ದೂರದ ಪಾಡಿ ಬೆಟ್ಟದ ತಪ್ಪಲಿನಲ್ಲಿ. ಈ ದೇಗುಲವು 1810ರಲ್ಲಿ ರಾಜಾ ಲಿಂಗ ರಾಜೇಂದ್ರರಿಂದ ನಿರ್ಮಿಸಲ್ಪಟ್ಟಿದ್ದು, ಕೇರಳ ವಾಸ್ತುಶಿಲ್ಪ ಶೈಲಿಯನ್ನು ಹೋಲುತ್ತದೆ. ಇಗ್ಗುತ್ತಪ್ಪ ಇಲ್ಲಿ ಶಿವಲಿಂಗದ ರೂಪದಲ್ಲಿದ್ದು, ನಾಗನ ಹೆಡೆಯಿಂದ ಆವರಿಸಿದೆ.

ಕಲ್ಪತರು ನಾಡಿನ ಭಕ್ತಿಕಳೆ
ಇತ್ತೀಚಿನ ವರ್ಷಗಳಲ್ಲಿ ಕಲ್ಪತರು ನಾಡಿನಲ್ಲಿ ಬರದ ಸಮಸ್ಯೆ ಜನರನ್ನು ಕಂಗಾಲಾಗಿಸಿದೆ. ಮಳೆದೇವರ ಪೂಜೆ, ಕರಗಲ್ಲು ಪೂಜೆ, ಅನ್ನ ಸಂತರ್ಪಣೆ… ಹೀಗೆ ದೇವರನ್ನು ಸಂಪ್ರೀತಗೊಳಿಸಲು ನಾನಾ ಪ್ರಯತ್ನಗಳು ನಡೆಯುತ್ತಲಿವೆ. ಜೋಡಿ ಕತ್ತೆಗಳಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿ, ಅನ್ನ ಸಂತರ್ಪಣೆ ಮಾಡುವುದು, ಶಿವನ ದೇವಾಲಯಗಳಲ್ಲಿ ಅಭಿಷೇಕ, ಹೋಮ  ಹವನ ಕೈಗೊಳ್ಳುವುದು, ‘ಅಜ್ಜಿ ಹಬ್ಬ’ ಎಂದು ಬೇವಿನ ಮರಕ್ಕೆ ಒಬ್ಬಟ್ಟಿನ ಅಡುಗೆ ಮಾಡಿ ಎಡೆ ಇಟ್ಟು ಪೂಜೆ ಸಲ್ಲಿಸುವುದು, ಮಣ್ಣಿನಿಂದ ಸಾಂಕೇತಿಕವಾಗಿ ಮಳೆರಾಯನನ್ನು ಮಾಡಿ, ಅದನ್ನು ಹೊತ್ತು ಮೆರವಣಿಗೆ ಮಾಡುವುದು, ಮುಂತಾದ ಸಂಪ್ರದಾಯಗಳು ಈ ಭಾಗದಲ್ಲಿ ಚಾಲ್ತಿಯಲ್ಲಿದೆ.

ಗುಳೇದಗುಡ್ಡ
ಹೊಟ್ಟೆ ತಂಪಾದರೆ, ನೆಲವೂ ತಂಪು ಜನರ ಹೊಟ್ಟೆ ತಂಪು ಮಾಡಿದ್ರೆ, ನೆಲವೂ ತಂಪಾಗುತ್ತೆಂಬ ನಂಬಿಕೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಚಾಲ್ತಿಯಲ್ಲಿದೆ. ಗುಡ್ಡದ ಮೇಲಿನ ಬಸವಣ್ಣನ ದೇಗುಲದಲ್ಲಿ ಮಳೆಗಾಗಿ ಪ್ರತಿವರ್ಷ ಅನ್ನ ಸಂತರ್ಪಣೆ ಆಯೋಜನೆಗೊಳ್ಳುತ್ತದೆ. ಗುಡ್ಡದ ಬಸವೇಶ್ವರರಿಗೆ ಪೂಜೆ, ಅಭಿಷೇಕ ನೆರವೇರಿಸಿ, ದೇವರಿಗೆ ಎಡೆ ಮಾಡಿ, ವರುಣ ದೇವನಿಗಾಗಿ ಪ್ರಾರ್ಥಿಸಲಾಗುತ್ತದೆ. ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯುತ್ತದೆ. ಶ್ರೀ ಗುಡ್ಡದ ಬಸವೇಶ್ವರ ಗೆಳೆಯರ ಬಳಗ, ಪ್ರತಿವರ್ಷ ಅನ್ನಸಂತರ್ಪಣೆ ಆಯೋಜಿಸುತ್ತಾ ಬಂದಿದೆ.

ಗಾಳಿ ಕೆರೆ ಮುಂದೆ ವರುಣನಿಗೆ ಮೊರೆ
“ಮಲೆನಾಡಾ? ಅಲ್ಲಿ ಮಳೇಗೆ ಏನ್‌ ಕಮ್ಮಿ ಮಾರೇ’ ಎಂದು ಹೇಳುವವರಿದ್ದಾರೆ. ಆದರೆ, ಈಗ ಮಲೆನಾಡಿನಲ್ಲೂ ಮಳೆ ಅಪರೂಪ. ಇಂಥ ವೇಳೆ ಚಿಕ್ಕಮಗಳೂರು ಜಿಲ್ಲೆಯ ಕಾ ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವುದಿಲ್ಲ. “ಗಾಳಿಕೆರೆ’ಗೆ ಪೂಜಿಸಿ ಬಂದರೆ, ಮುಂದಿನದ್ದೆಲ್ಲವನ್ನೂ ಆ ವರುಣದೇವನೆ, ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ಅವರಿಗೆ. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಸ್ಫಟಿಕ ಶುಭ್ರದ ಈ ಕೆರೆಗೆ ಮಳೆ ದೇವನನ್ನು ಓಲೈಸಿಕೊಳ್ಳುವ ಶಕ್ತಿಯಿದೆ ಎಂದು ಇಲ್ಲಿನ ಜನ ನಂಬಿದ್ದಾರೆ. ಪ್ರತಿವರ್ಷ ಮಾ.31ಕ್ಕೆ “ಹೂಮಳೆ’ ಎಂದೇ ಕರೆಯಲ್ಪಡುವ ರೇವತಿ ಮಳೆ ಆರಂಭವಾಗುತ್ತದೆ. ಈ ಮಳೆ ಕೈ ಕೊಟ್ಟು ಅಶ್ವಿ‌ನಿ ಮಳೆಯೂ ಬರದಿದ್ದರೆ, ಆಗ ಗಾಳಿ ಕೆರೆಗೆ ತೆರಳಿ ಅಲ್ಲಿ ಮಳೆಗಾಗಿ ಪ್ರಾರ್ಥಿಸಲಾಗುತ್ತದೆ. ನಂತರ, ಕೆರೆಯ ನೀರನ್ನು ಮನೆಗೆ ತಂದು ದೇವರಿಗೆ ಅಭಿಷೇಕ ಮಾಡಿ, ಪ್ರಾರ್ಥನೆ ಸಲ್ಲಿಸಿದರೆ ವರುಣ ದೇವ ಕೃಪೆ ತೋರುತ್ತಾನೆ ಎಂಬ ನಂಬಿಕೆ ಕಾ ಬೆಳೆಗಾರರಲ್ಲಿದೆ.

ದಾವಣಗೆರೆ
ಮಳೆಗಾಗಿ ಸಂತೆ…
ಇದೊಂದು ಅಪರೂಪದ ಸಂತೆ. ದೇವರೆದುರೇ ನಡೆಯುವ ಐದು ದಿನಗಳ ವ್ಯಾಪಾರ. ಭರ್ಜರಿ ಕಾಸು ಬರಲಿಯೆಂಬ ಉದ್ದೇಶಕ್ಕೆ ನಡೆಯುವ ಸಂತೆ ಇದಲ್ಲ. ದೇವರ ಮುಂದಿನ ಮೈದಾನದಲ್ಲಿ ಕುಳಿತು, ತರಕಾರಿ  ಕಾಳುಕಡ್ಡಿ ಮಾರಿದರೆ, ಆ ಮೇಘರಾಯ ಬೇಗ ಮಳೆ ಸುರಿಸುತ್ತಾನಂತೆ. ದಾವಣಗೆರೆಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದ ಎದುರಿನ ವಿಶಿಷ್ಟ ಆಚರಣೆಯ ದೃಶ್ಯವಿದು. ದುಗ್ಗಮ್ಮ ಇಲ್ಲಿನ ಜನರ ಪಾಲಿಗೆ ‘ಮಳೆಯ ದೇವತೆ’. ಅವಳ ಮುಂದೆ ವಾರದ ಸಂತೆ ಏರ್ಪಡಿಸುವ ಪದ್ಧತಿ, ಬಹಳ ಹಿಂದಿನಿಂದಲೂ ಇಲ್ಲಿ ನಡೆದುಬಂದಿದೆ. ಹಾಗೆ ಸಂತೆ ನಡೆದಾಗಲೆಲ್ಲ, ಈ ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಜೂ.9ರಿಂದ ಜು.7 (ಪ್ರತಿ ಭಾನುವಾರ)ರ ಅವಧಿಯಲ್ಲಿ ಐದು ವಾರ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಮುಂದೆ ವಾರದ ಸಂತೆ ನಡೆಯುತ್ತಿದ್ದು, ಭಕ್ತರ ಮಳೆಯ ನಿರೀಕ್ಷೆ ಗರಿಗೆದರಿದೆ.

ರಾಮನಗರ
ಸಿದ್ದೇಶ್ವರನ ಆಶೀರ್ವಾದ
ಈ ಜಲಸಿದ್ದೇಶ್ವರ ವರುಣನಿಗೆ ಬಹಳ ಹತ್ತಿರ. ಇವನನ್ನು ಭಕ್ತಿಯಿಂದ ಆರಾಧಿಸಿದರೆ, ಮಳೆ ಧರೆಗಿಳಿಯುತ್ತೆ ಎನ್ನುವ ನಂಬಿಕೆ ರಾಮನಗರದ ಭಾಗದ ಜನರಲ್ಲಿದೆ. ರಾಮನಗರದ ವಾಯುವ್ಯ ದಿಕ್ಕಿಗೆ ನಾಲ್ಕು ಕಿ.ಮೀ. ಕ್ರಮಿಸಿದರೆ, ಜಲಸಿದ್ದೇಶ್ವರ ಬೆಟ್ಟ ಸಿಗುತ್ತದೆ. ಇಲ್ಲಿನ ಗುಹಾಂತರ ದೇಗುಲದಲ್ಲಿ ಜಲಸಿದ್ದೇಶ್ವರನ ಸನ್ನಿಧಾನವಿದೆ. ಬಂಡೆಯ ಒಳಗಿನ 11 ರಂಧ್ರಗಳ ಮೂಲಕ ಹರಿಯುವ ನೀರು, ಕೆಳಗಿನ ಹನ್ನೊಂದು ಲಿಂಗಾಕಾರದ ಉಬ್ಬುಗಳ ಮೇಲೆ ಪ್ರೋಕ್ಷಣೆಯಾಗುವುದು, ಈ ಬೆಟ್ಟದ ವೈಶಿಷ್ಟ್ಯ. ಇದೇ ಕಾರಣದಿಂದ ಈ ಬೆಟ್ಟಕ್ಕೆ ‘ಜಲಸಿದ್ದೇಶ್ವರ ಬೆಟ್ಟ’ ಎಂದು ಹೆಸರು ಬಂದಿದೆ. ನೀರಿನಿಂದ ಪ್ರೋಕ್ಷಣೆಯಾಗುವ ಕಾರಣ, ಜಲಸಿದ್ದೇಶ್ವರನನ್ನು ಮಳೆಯ ದೇವರು ಎಂದೇ ಕರೆಯುತ್ತಾರೆ. ಮಳೆ ಬಾರದ ಸಮಯದಲ್ಲಿ ಭಯ ಭಕ್ತಿಯಿಂದ ಅಭಿಷೇಕ, ವಿಶೇಷ ಪೂಜೆ ಮುಂತಾದ ಧಾರ್ಮಿಕ ಕೈಂಕರ್ಯಗಳು ನಡೆಯುತ್ತವೆ.

ಅಜ್ಜಿಯಮ್ಮನ ನೆನೆದರೆ, ಬಿಸಿಲೂರು ತಂಪು
ಬಿಸಿಲು, ಬರವೆಂದರೆ ಕೋಟೆಯ ನಾಡು ಚಿತ್ರದುರ್ಗ ಈಗಲೂ ಬೆಚ್ಚುತ್ತದೆ. ಮಳೆಗೆ ಹೆಚ್ಚು ಕಾತರಿಸುವ ಇಲ್ಲಿನ ಜನತೆಗೆ ‘ಅಜ್ಜಿಯಮ್ಮ’ ಎಂದರೆ ಆಯಿತು, ನಿಂತ ನೆಲ ತಂಪಾದಂತೆ. ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಮಳೆಗಾಗಿಯೇ ಅಜ್ಜಿಯಮ್ಮನನ್ನು ಆರಾಧಿಸುತ್ತಾರೆ. ಇದು ಇಲ್ಲಿ ಶತಮಾನಗಳಿಂದ ನಡೆದುಬಂದ ಪದ್ಧತಿ. ಊರ ಜನರೆಲ್ಲ ತಮ್ಮ ಮನೆಗಳಲ್ಲಿ ಸಣ್ಣದ್ದೊಂದು ಮಡಿಕೆಯನ್ನು ಮೊರದಲ್ಲಿರಿಸಿ, ಅದಕ್ಕೆ ಹಸಿರು ರವಿಕೆ, ಹಸಿರು ಬಳೆ ಇಟ್ಟು, ಅಜ್ಜಿ  ಅಮ್ಮ ಎಂದು ಸಿಂಗರಿಸಿ, ಪೂಜಿಸುತ್ತಾರೆ. ಈ ದೇವರಿಗೆ ಮನೆಯಲ್ಲಿಯೇ ಹೋಳಿಗೆ ಮಾಡಿ ನೈವೇದ್ಯವನ್ನೂ ಇಡುತ್ತಾರೆ. ನಂತರ ದೇವರನ್ನು ಮೊರದ ಸಮೇತ ಗ್ರಾಮದೇವತೆ ದುರ್ಗಾಂಬಿಕಾ ದೇವಿಯ ದೇಗುಲಕ್ಕೆ ತೆರಳಿ, ದೇವಿಯ ಜೊತೆ ಊರಿನ ಹೊರಗಿ ರುವ ಬೇವಿನ ಮರವೊಂದರ ಬಳಿ ಹೋಗಿ, ಮೊರದಲ್ಲಿ ತಂದ ಅಜ್ಜಿ ಯಮ್ಮನನ್ನು ಇರಿಸಿ, ಪೂಜಿಸಿ ಹಿಂದಿರುಗುವ ಹೊತ್ತಿಗೆ ಜೋರು ಮಳೆ ಸುರಿಯುತ್ತದೆ.

ಬಂಟ್ವಾಳ
ಎಳನೀರು ಕುಡಿದು, ಮಳೆನೀರು ಕೊಡುವ ಶಿವ
ಜಡೆಯಲ್ಲಿ ಗಂಗೆಯನ್ನು ಧರಿಸಿಟ್ಟುಕೊಂಡ ಶಿವನಿಗೆ, ವರುಣನನ್ನು ಧರೆಗಿಳಿಸುವುದು ದೊಡ್ಡ ಮಾತಲ್ಲ. ಆ ಕಾರಣಕ್ಕೇ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕಾರಿಂಜೇಶ್ವರನ ಮುಂದೆ, ‘ಮಳೆ ಸುರಿಸಪ್ಪಾ…’ ಎಂದು ಪ್ರಾರ್ಥಿಸಿದರೆ, ವರುಣ ಓಡೋಡಿ ಬರುತ್ತಾನೆ! ಹಚ್ಚ ಹಸಿರಿನ ಮಧ್ಯೆ ಇರುವ ಶ್ರೀಕಾರಿಂಜೇಶ್ವರ ದೇಗುಲ, ಲಕ್ಷಾಂತರ ಭಕ್ತರ ಶ್ರದ್ಧಾ ಕೇಂದ್ರ. ಬೆಟ್ಟದ ತುದಿಯಲ್ಲಿರುವ ಈಶ್ವರ ಪಾರ್ವತಿ ದೇವಸ್ಥಾನಕ್ಕೆ ದೊಡ್ಡ ಇತಿಹಾಸವಿದೆ. ಊರಿನ ಯಾವುದೇ ಕಾರ್ಯ­ಕ್ರಮಕ್ಕೂ ಮೊದಲು ಕಾರಿಂಜೇಶ್ವರ­ನನ್ನು ಪ್ರಾರ್ಥಿಸುವ ಜನ, ಮಳೆಗೂ ಶಿವನ ಮೊರೆ ಹೋಗುತ್ತಾರೆ. ಸಮಯಕ್ಕೆ ಸರಿಯಾಗಿ ಮಳೆಯಾಗದೇ, ನೀರಿನ ಕೊರತೆಯಾದಾಗ ಸುತ್ತಲ ಗ್ರಾಮಸ್ಥರೆಲ್ಲಾ ಎಳನೀರಿನ ಅಭಿಷೇಕದ ಮೂಲಕ ಮಳೆಗಾಗಿ ಪ್ರಾರ್ಥಿಸುತ್ತಾರೆ. ಮಳೆಯ ಕೊರತೆಯಾದ ಪ್ರತಿವರ್ಷವೂ ಇದು ನಡೆಯುತ್ತದೆ. ಈ ವರ್ಷವೂ ಶಿವನಿಗೆ ಎಳನೀರಿನ ಅಭಿಷೇಕ ನಡೆದಿದೆ. ತುತ್ತ ತುದಿಯಲ್ಲಿ ವಿರಾಜಮಾನನಾಗಿರುವ ಶಿವನಿಗೆ 355ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಿ, ಊರ ಜನರು ಮಳೆಗಾಗಿ ಪ್ರಾರ್ಥಿಸುವ ಆ ದೃಶ್ಯವೇ ಮನೋಹರ. ಶಿವನನ್ನು ಪ್ರಾರ್ಥಿಸಿದ ಕೆಲವೇ ದಿನಗಳಲ್ಲಿ ಇಲ್ಲಿ ಮಳೆಯಾದ ಉದಾಹರಣೆಗಳು ಸಾಕಷ್ಟಿವೆ.

ಮೇಘರಾಜನ ಓಲೈಕೆಗೆ ಗುಮಟೆ ಪಾಂಗ್‌
ಸಂಗೀತಕ್ಕೂ ದೇವರು ಸ್ಪಂದಿಸುತ್ತಾನೆ. ಮಳೆಯನ್ನು ಸುರಿಸುತ್ತಾನೆ. ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಬೆಳಂಬಾರದ ಹಂದಗೋಡ ಗ್ರಾಮದಲ್ಲಿ ಈ ಅಪರೂಪದ ದೃಶ್ಯ ಘಟಿಸುತ್ತದೆ. ಗ್ರಾಮದ ಶಕ್ತಿದೇವತೆ ಜಟಕ ನಾಗಚೌಡೇಶ್ವರಿ ದೇಗುಲದ ಎದುರು ಗುಮಟೆ ಪಾಂಗ್‌ ನುಡಿಸಿದರೆ, ವರುಣನ ಕೃಪೆಯಾಗು ತ್ತದಂತೆ. ಮಳೆ ವಿಳಂಬವಾದರೆ, ಹಾಲಕ್ಕಿ ಒಕ್ಕಲಿಗರು, ಹೀಗೆ ಗುಮಟೆ ಪಾಂಗ್‌ ನುಡಿಸುತ್ತಾರೆ. ‘ಈ ವರ್ಷ ಮಳೆ ಹಿಡಿದಿಲ್ಲ. ಅದಕ್ಕಾಗಿ ಈ ಬಾರಿ ದೇವರ ಮೊರೆ ಹೋಗ­ಬೇಕಾಯಿತು’ ಎನ್ನುತ್ತಾರೆ, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಬೊಮ್ಮು ಗೌಡ.

ಲಿಂಗ ಮುಳುಗಿಸುವ ಹೊತ್ತು…
ಕೋಲಾರದ ಕೋಟೆ ಭಾಗದಲ್ಲಿರುವ ಪುರಾತನ ಶ್ರೀ ಸೋಮೇಶ್ವರ ದೇವಾಲಯದ ಈಶ್ವರ ಲಿಂಗವನ್ನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಸಿ, ಇಡೀ ದಿನ ಕುಂಭಾಭಿಷೇಕ ಮಾಡಿದರೆ ಈಶ್ವರ ಸಂಪ್ರೀತನಾಗಿ, ಗಂಗೆಯನ್ನು ಮಳೆಯ ರೂಪದಲ್ಲಿ ಹರಿಸುತ್ತಾನೆಂಬುದು ಇಲ್ಲಿನವರ ನಂಬಿಕೆ. ಇದೇ ರೀತಿ, 3600 ವರ್ಷಗಳ ಇತಿಹಾಸವಿರುವ ಅಂತರಗಂಗೆ ಬೆಟ್ಟದ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯದಲ್ಲಿಯೂ ಮಳೆಗಾಗಿ ಕುಂಭಾಭಿಷೇಕ, ಶತ ರುದ್ರಾಭಿಷೇಕ ಮತ್ತು ಪರ್ಜನ್ಯ ಜಪ ನಡೆಯುತ್ತದೆ.

ಶಿವಮೊಗ್ಗ
‘ಸಂಕಟ ಬಂದಾಗ ವೆಂಕಟರಮಣ’ ಎಂಬಂತೆ ಮಳೆ ಬಾರದಿದ್ದರೆ ಶಿವಮೊಗ್ಗದ ಜನಕ್ಕೆ ನೆನಪಾಗುವುದು ಬಿಳಿಕಲ್ಲು ರಂಗನಾಥಸ್ವಾಮಿ, ಬಸವಣ್ಣ ಹಾಗೂ ಕೆಂಚರಾಯ ದೇವರು. ಶಿವಮೊಗ್ಗ ಹಾಗೂ ಲಕ್ಕವಳ್ಳಿ ಮಧ್ಯೆಯ ಜಂಕ್ಷನ್‌ ಬಳಿ ಇರುವ ಬಿಳಿಕಲ್ಲು ರಂಗನಾಥಸ್ವಾಮಿ, ಸುತ್ತಮುತ್ತಲ 28 ಹಳ್ಳಿಗಳಿಗೆ ಆರಾಧ್ಯದೈವ. ನೂರಾರು ವರ್ಷಗಳ ಇತಿಹಾಸವುಳ್ಳ ರಂಗನಾಥಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರೆ, ಮಳೆ ಬರುತ್ತೆ ಎಂಬುದು ಜನರ ನಂಬಿಕೆ. ಒಂದು ವರ್ಷ ಮಳೆ ಬಾರದಿದ್ದರೆ ಗ್ರಾಮಸ್ಥರ ತೀರ್ಮಾನದಂತೆ ಪೂಜೆ ನೆರವೇರುತ್ತದೆ. ಬಿಳಿಕಲ್ಲು ಗುಡ್ಡದಲ್ಲಿರುವ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿ, ಸಿಹಿ ನೈವೇದ್ಯ ಮಾಡಿದ ನಂತರ ಪಕ್ಕದ ಗುಡ್ಡದಲ್ಲಿರುವ ಬಸವಣ್ಣ ಸ್ವಾಮಿಗೆ ಆರಾಧನೆ ನಡೆಯುತ್ತದೆ. ಅಲ್ಲಿಂದ ನೇರವಾಗಿ ಬಿಳಿಕಲ್ಲು ಗುಡ್ಡದ ಕೆಳಭಾಗದಲ್ಲಿರುವ ಕೆಂಚರಾಯನಿಗೆ ಪೂಜೆ ಸಲ್ಲಿಸುವಷ್ಟರಲ್ಲಿ ಮಳೆ ಬಂದೇ ಬರುತ್ತದೆ ಎಂಬುದು ಭಕ್ತರ ನಂಬಿಕೆ. ಸಿಂಗನಮನೆ ಜಿ.ಪಂ. ವ್ಯಾಪ್ತಿಯ 28 ಹಳ್ಳಿಗಳು, ‘ಸಂಸ್ಕೃತ ಗ್ರಾಮ’ವೆಂದೇ ಹೆಸರಾದ ಮತ್ತೂರು, ಕಡೆಕಲ್ಲು, ಕಾಚಿನಕಟ್ಟೆಯ ಜನರೂ ಇಲ್ಲಿ ಭಕ್ತಿಭಾವ ಮೆರೆಯುತ್ತಾರೆ. ರಂಗನಾಥಸ್ವಾಮಿ ಹಾಗೂ ಬಸವಣ್ಣನಿಗೆ ಸಿಹಿ ತಿನಿಸುಗಳ ನೈವೇದ್ಯ ಮಾಡಿದರೆ, ಕೆಂಚರಾಯಸ್ವಾಮಿಗೆ ಮಾಂಸ ನೈವೇದ್ಯ ಮಾಡುತ್ತಾರೆ. ತಾವು ಅಂದುಕೊಂಡಂತೆ ಮಳೆ  ಬೆಳೆಯಾದರೆ ಗೌಳಿಗರು ಗಿಣ್ಣು, ಒಕ್ಕಲಿಗರು ಕಡುಬು, ಇತರೆ ಜನಾಂಗದವರು ತಮ್ಮ ಸಂಪ್ರದಾಯದಂತೆ ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ.

ಉತ್ತರ ಕರ್ನಾಟಕ ಭಾಗ
ಗುರ್ಜಿ ಆಡುವ ಸಂಭ್ರಮ
ಗುರ್ಜಿ ಒಕ್ಕಲಿಗರಿಗೆ ಮಳೆ ತರುವ ಸಂಪ್ರದಾಯದ ದೇವರು. ಪ್ರತಿವರ್ಷ ಭಾದ್ರಪದ  ಆಶ್ವಿ‌ೕಜ ಮಾಸಗಳಲ್ಲಿ ಉ.ಕ.ದ ಹಳ್ಳಿಗಳಲ್ಲಿ ಮಳೆಯಾಗದೇ ಇದ್ದಾಗ ಗುರ್ಜಿ ಆಡುವುದು ಸಾಮಾನ್ಯ. ಗುರ್ಜಿ ಆಡಿ ಹೋದ ಏಳೆಂಟು ದಿನಗಳಲ್ಲಿ ಮಳೆ ಬರುತ್ತದೆ ಎಂಬ ಬಲವಾದ ನಂಬಿಕೆ ಇಲ್ಲಿನ ಜನರಲ್ಲಿದೆ.ರೊಟ್ಟಿ ಬೇಯಿಸುವ ಹೆಂಚಿನ ಮೇಲೆ ಸಗಣಿಯಿಂದ ಗುರ್ಜಿ ತಯಾರಿಸಿ (ಮೂರ್ತಿ ತರಹ) ಗರಿಕೆಯಿಂದ ಶೃಂಗರಿಸುತ್ತಾರೆ. ಅದನ್ನು ಹೆಂಚಿನ ಮೇಲಿಟ್ಟುಕೊಂಡು, ತಲೆಯ ಮೇಲೆ ಹೊತ್ತುಕೊಂಡು ಗ್ರಾಮದ ಓಣಿಗಳಲ್ಲಿ ತಿರುಗುತ್ತಾರೆ. ಆಗ ಮನೆಯವರು ತಂಬಿಗೆಯಲ್ಲಿ ನೀರು ತಂದು ಗುರ್ಜಿಯ ಮೇಲೆ ಸುರಿಯುತ್ತಾರೆ. ನೀರು ಹಾಕುವಾಗ ಗುರ್ಜಿ ಹೊತ್ತುಕೊಂಡ ಮಕ್ಕಳು ಗರಗರನೇ ತಿರುಗುತ್ತಾರೆ. ಆಗ ಪಕ್ಕದಲ್ಲಿನ ಯುವಕರು, ಮಕ್ಕಳು, ಮಹಿಳೆಯರು ಸೇರಿ ಗುರ್ಜಿಯ ಜಾನಪದ ಹಾಡು ಹಾಡುತ್ತಾರೆ. ನಂತರ ಗುರ್ಜಿಯಿಂದ ಸಂಗ್ರಹಿಸಿ ಗಿರಣಿಯಲ್ಲಿ ಜೋಳ ಒಡೆಯಿಸುತ್ತಾರೆ. ಊರ ದೇಗುಲದ ಆವರಣದಲ್ಲಿಯೇ ಜೋಳದ ನುಚ್ಚು  ಸಾರು ತಯಾರಿಸಿ ಮೇಘರಾಜನಿಗೆ ಪೂಜೆ, ಪುನಸ್ಕಾರ ಮಾಡುತ್ತಾರೆ.

ಮೈಸೂರು
ಮಳೆ’ ಮಾವುಕಲ್ಲೇಶ್ವರ
ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕೋಗಿಲವಾಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯದ ಮಾವುಕಲ್ಲೇಶ್ವರ ಬೆಟ್ಟದಲ್ಲಿ ಸಾವಿರಾರು ವರ್ಷಗಳ ಐತಿಹ್ಯವಿರುವ ದೇವಾಲಯವೊಂದಿದೆ. ಇಲ್ಲಿರುವ ಲಿಂಗ ರೂಪದ ಮಾವುಕಲ್ಲೇಶ್ವರ, ಹಲವು ಗ್ರಾಮಗಳ ರೈತರ ಪಾಲಿನ ಮಳೆ ದೇವರು. ಪಿರಿಯಾಪಟ್ಟಣ, ಕೋಗಿಲವಾಡಿ, ಚೌತಿ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ ರೈತರು ಹಾಗೂ ಕೊಡಗಿನ ಗಡಿ ಭಾಗದ ಗ್ರಾಮಗಳಾದ ಸಿದ್ದಾಪುರ, ತಿತಿಮತಿ, ಗೋಣಿಕೊಪ್ಪ, ಕುಶಾಲನಗರ ಮುಂತಾದ ಹಳ್ಳಿಯ ರೈತರು ಇಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ, ಒಂದು ರಾತ್ರಿ ಅಲ್ಲಿಯೇ ತಂಗಿ, ಬೆಳಗ್ಗೆ ದೇವರಿಗೆ ಕೋಳಿ ಬಲಿ ನೀಡಿ, ‘ದೇವರೇ, ಮಳೆ ಹೊಯ್ಯಿಸಪ್ಪಾ’ ಎಂದು ಬೇಡಿಕೊಳ್ಳುವುದು ರೂಢಿಯಲ್ಲಿದೆ. ಒಂದೊಂದು ಗ್ರಾಮಸ್ಥರು ಮನೆಗೊಬ್ಬರಂತೆ ವಾರದಲ್ಲಿ ಒಮ್ಮೆ ಈ ಬೆಟ್ಟಕ್ಕೆ ತೆರಳಿ ಹರಕೆ ಅರ್ಪಿಸುವುದು ವಿಶೇಷ. ಕಾಡಂಚಿನಿಂದ 14 ಕಿ.ಮೀ. ದೂರವಿರುವ ದೇಗುಲ ತಲುಪಲು ವ್ಯವಸ್ಥಿತ ರಸ್ತೆ, ವಾಹನ ಸಂಪರ್ಕ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next