Advertisement
ಅದು ತನುವರಳಿದ ಕಾಲ ಚಂಚಲ ಮನಸ್ಸು ಹೊಸತನ ಬಯಸಿತ್ತು! ಒಂದಿಷ್ಟು ವನಸಂಚಾರ ಮಾಡುವ ಉದ್ದೇಶದಿಂದಲೇ ಕುದುರೆಯೇರಿ ಹೊರಟವಳಿಗೆ ಪ್ರಕೃತಿ ನವ ಚೈತನ್ಯವನ್ನು ಉಣ್ಣಿಸಿತ್ತು. ವನಾಂತರದಲ್ಲಿ ಪಾರ್ಥ ಮಹಾಶಯ ಭೇಟಿಯಾಗಿದ್ದ! ಅವನು ತೋರಿದ ಶಬ್ದವೇಧಿಯ ಕೌಶಲ್ಯದಿಂದಲೇ ಆತ ಅರ್ಜುನನೆಂದು ಗುರುತಿಸಿದ್ದೆ. ಮನಸ್ಸು ಹರುಷದಿಂದ ಕುಣಿದಾಡಿತು. ಶರವೇಗದಲ್ಲಿ ಕುದುರೆಯೋಡಿಸಿಕೊಂಡು ಅರಮನೆಗೆ ಬಂದವಳೇ ನನ್ನಪ್ಪ ಚಿತ್ರವಾಹನರನ್ನು ಕುರಿತು- ‘ಪಿತಾಶ್ರೀ ಪಾರ್ಥ ಮಹಾಶಯರು ನಮ್ಮ ಮಣಿಪುರಕ್ಕೆ ಬಂದಿದ್ದಾರೆ. ಇಂದು ನಾನವರನ್ನು ಭೇಟಿ ಮಾಡಿದೆ’ ಎಂದೆ. ನಾನು ಪಾರ್ಥನ ಬಗ್ಗೆ ಮೊದಲಿನಿಂದಲೇ ಆಕರ್ಷಣೆ ಬೆಳೆಸಿಕೊಂಡವಳು ಎಂಬುದನ್ನು ಅರಿತಿದ್ದ ತಂದೆಯವರು ಹರ್ಷಗೊಂಡು, “ಹೌದೇ? ವಿಚಾರಿಸೋಣ’ ಎಂದರು.
Related Articles
Advertisement
ಪಾರ್ಥನದು ಬೇರೊಂದು ವರಸೆ: “ಅದಾಗದು ಮಹಾರಾಜ. ಚಿತ್ರಾಂಗದೆಗೆ ಮನಸೋತಿದ್ದೇನೆ ಎಂಬುದು ನಿಜ. ಆದರೆ ನಾನು ಇಲ್ಲಿಯೇ ನಿಲ್ಲುವವನಲ್ಲ. ಇಂದ್ರಪ್ರಸ್ಥ ನನ್ನ ನಿರೀಕ್ಷೆಯಲ್ಲಿರುತ್ತದೆ. ಕೇವಲ 3 ವರ್ಷಗಳ ಕಾಲ ನಾನು ಇಂದ್ರಪ್ರಸ್ಥದಿಂದ ಹೊರಗುಳಿಯಬೇಕಿದೆ. ತೀರ್ಥಕ್ಷೇತ್ರಗಳ ದರ್ಶನಾಕಾಂಕ್ಷಿಯಾಗಿ ಹೊರಟ ನಾನು ಮಾರ್ಗಮಧ್ಯದಲ್ಲಿ ಮಣಿಪುರಕ್ಕೂ ಬಂದಿದ್ದೆ. ಇಲ್ಲಿ ಬಂದ ಮೇಲೆ ನನ್ನ ತೀರ್ಥಯಾತ್ರೆಯ ಫಲ ಬೇರೊಂದು ರೀತಿಯಲ್ಲಿ ಸಫಲವಾಯಿತು’ ಎಂದು, ನನ್ನ ಕಡೆ ನೋಡಿ ಕಣ್ಣು ಹೊಡೆದ. ನಾಚಿಕೆಯಿಂದ ನನ್ನ ಕೆನ್ನೆ ಕೆಂಪೇರಿತು.
ಅಪ್ಪ ಶಾಂತಚಿತ್ತರಾಗಿ ಪಾರ್ಥನ ಮಾತನ್ನು ಕೇಳುತ್ತಿದ್ದರು: “ಮಗಳಿಗೆ ದೀರ್ಘ ಕಾಲದ ದಾಂಪತ್ಯ ಸುಖ ಸಿಗುವುದಿಲ್ಲವಲ್ಲ ಎಂಬ ನೋವು ನನಗಿದೆ. ಆದರೆ ನೀನು ಆಕೆಯ ಆಯ್ಕೆ. ಅವಳ ಆಯ್ಕೆಯನ್ನು ನಾನು ಪ್ರಶ್ನಿಸುವುದಿಲ್ಲ. ಇಷ್ಟು ವರ್ಷಗಳ ಕಾಲ ಆಕೆಯ ಯಾವುದೇ ಆಯ್ಕೆಯನ್ನು ನಾನು ಪ್ರಶ್ನಿಸಿದವನೇ ಅಲ್ಲ. ಮೂರು ವರ್ಷಗಳ ಕಾಲವಾದರೂ ಇಲ್ಲಿಯೇ ಇದ್ದುಬಿಡು ಎಂದು ಕೇಳಬಹುದಷ್ಟೇ?’ ಎಂದರು ಅಪ್ಪ.
ಅದೆಷ್ಟು ಸಂತಸದ ದಿನಗಳು! ಉದರದೊಳಗೊಂದು ಜೀವವು ಅಂಕುರಿಸಿತ್ತು! ಪಾರ್ಥ ಹೊರಟು ಹೋಗಿದ್ದ. ಅವನು ಹೊರಟು ಹೋದ ಮೇಲೆ ನನ್ನನ್ನು ಖನ್ನತೆ ಆವರಿಸಿತು. ತೊಳಲಾಡಿಬಿಟ್ಟೆ. ಮಣಿಪುರದ ಪ್ರಜೆಗಳು ತಲೆಗೊಂದರಂತೆ ಮಾತನಾಡಿದರು. ನಾನು ಪಾರ್ಥನೊಡನೆ ಗಾಂಧರ್ವ ವಿವಾಹವಾದ ಮತ್ತು ಆತನ ಸಂತಾನ ನನ್ನ ಉದರದಲ್ಲಿ ಕೊನರಿದ ಸತ್ಯ ಗುಟ್ಟಾಗೇನೂ ಉಳಿದಿರಲಿಲ್ಲ. ಆದರೂ ಕಥೆ ಕಟ್ಟುವವರಿಗೆ ಕೊರತೆ ಇರಲಿಲ್ಲ.
ನಾಗಲೋಕದ ಉಲೂಪಿ ಅಕ್ಕನಾಗಿ ಒದಗಿ ಬಂದಿದ್ದಳು. ನನ್ನ ಮತ್ತು ಪಾರ್ಥನ ಮೊದಲ ಭೇಟಿಯ ನಂತರ ಪಾರ್ಥ ಅಲ್ಪಕಾಲ ನಾಗಲೋಕಕ್ಕೂ ಭೇಟಿ ಕೊಟ್ಟಿದ್ದನೆಂಬ ವಿಷಯ ಉಲೂಪಿಯಿಂದ ತಿಳಿಯಿತು. ಆದರೆ ಈಗ ಪಾರ್ಥ ನಮ್ಮ ಜೊತೆಯಿಲ್ಲದೆ ಇಬ್ಬರೂ ಸಮಾನ ದುಃಖೀಗಳಾಗಿ¨ªೆವು; ವಿರಹದುರಿಯಲ್ಲಿ ಬೇಯುತ್ತಿದ್ದೆವು.
ದಿನತುಂಬಿದ ನಂತರ ಮಗರಾಯ ಹುಟ್ಟಿದ್ದ. ಕಂದನ ಕೇಕೆ ಮಣಿಪುರದ ಅರಮನೆಯಲ್ಲಿ ಪ್ರತಿಧ್ವನಿಸಿತ್ತು. ನನ್ನಪ್ಪ ಚಿತ್ರವಾಹನನ ಆನಂದಕ್ಕೆ ಎಣೆಯಿರಲಿಲ್ಲ. ನಮ್ಮೆಲ್ಲರ ಕಣ್ಮಣಿಯಾಗಿ ಬಬ್ರುವಾಹನ ಬೆಳೆಯತೊಡಗಿದ. ಅರಮನೆಯಲ್ಲಿ ಸಂಭ್ರಮವೋ ಸಂಭ್ರಮ!
ಉಲೂಪಿಯು ಬಬ್ರುವಾಹನನನ್ನು ಬೆಳೆಸುವ ಸರ್ವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಳು. ಮಗನ ಬೆಳವಣಿಗೆಯಲ್ಲಿ ತನ್ನ ವಿರಹದ ನೋವನ್ನು ಮರೆತಿದ್ದಳು. ಮಗನಿಗೂ ತನ್ನ ದೊಡ್ಡಮ್ಮನೆಂದರೆ ಬಲುಪ್ರೀತಿ. ಆದರೆ ನನಗೆ ವೈರಾಗ್ಯವಂಟಿತ್ತು! ಅರಮನೆಯ ಬದುಕನ್ನು ತ್ಯಜಿಸಿ ತಪಸ್ವಿನಿಯಂತೆ ಬದುಕುತ್ತಿದ್ದೆ. ವಿರಹದುರಿಯ ತಾಪ ನನ್ನೆದೆಯನ್ನು ಸುಡುತ್ತಿತ್ತು. ಬಬ್ರುವಾಹನನನ್ನು ನೋಡಿದಾಗಲೆಲ್ಲ ಪಾರ್ಥನೇ ನೆನಪಾಗುತ್ತಿದ್ದ. ಪಾರ್ಥನ ಸಾನ್ನಿಧ್ಯಕ್ಕಾಗಿ ಮನಸ್ಸು ಹಾತೊರೆಯುತ್ತಿತ್ತು.
ದೀಪದ ಶಾಖಕ್ಕೆ ತನ್ನ ರೆಕ್ಕೆಗಳು ಸುಡುತ್ತವೆಂದು ಪತಂಗವೊಂದಕ್ಕೆ ಗೊತ್ತಿರುತ್ತದೆಯೇ? ಆದರೂ ಪತಂಗವೇಕೆ ದೀಪವನ್ನೇ ಅರಸಿ ಹೋಗುತ್ತದೆ? ನನ್ನ ಬದುಕಿನ ವಿಷಯವೂ ಹೀಗೇ ಆಗಿತ್ತು. ಪಾರ್ಥನ ಬಗ್ಗೆ ಆಕರ್ಷಣೆಯಿತ್ತು ಎನ್ನುವುದು ಸತ್ಯ. ಆದರೆ ನಾಳಿನ ಬದುಕಿನ ಬಗೆಗೆ ನನಗೆ ಕಲ್ಪನೆಯಿರಲಿಲ್ಲ. ಪಾರ್ಥ ದೀರ್ಘಾವಧಿಗೆ ಮಣಿಪುರದಲ್ಲಿ ಉಳಿಯಲಾರ ಎಂಬ ವಿಷಯ ಗೊತ್ತಿದ್ದೂ ಪಾರ್ಥನನ್ನು ಮೆಚ್ಚಿದ್ದೆ, ವರಿಸಿದ್ದೆ.
ಬೆಳೆದು ನಿಂತ ಮಗ ಮಣಿಪುರಕ್ಕೆ ಸಮರ್ಥ ಉತ್ತರಾಧಿಕಾರಿಯಾದಾಗ ತಂದೆ ತೃಪ್ತರಾಗಿದ್ದರು. ನನಗೆ ಮಾತ್ರ ಪ್ರತಿ ಕ್ಷಣ ಪಾರ್ಥ ನೆನಪಾಗುತ್ತಿದ್ದ. ಬಬ್ರುವಾಹನ ಮತ್ತೆ ಮತ್ತೆ ತನ್ನಪ್ಪನ ಬಗೆಗೆ ಪ್ರಶ್ನೆ ಕೇಳುತ್ತಿದ್ದ. “ಅಮ್ಮಾ ಅಪ್ಪನೇಕೆ ನಮ್ಮೊಂದಿಗಿಲ್ಲ? ನಮ್ಮನ್ನು ಕಂಡರೆ ಅವರಿಗೆ ಇಷ್ಟವಿಲ್ಲವೇ? ಅವರೇಕೆ ನಮ್ಮನ್ನು ನೋಡಲು ಬರುವುದಿಲ್ಲ? ನಾವಾದರೂ ಅವರನ್ನು ನೋಡಿಕೊಂಡು ಬರಲು ಹೋಗಬಹುದಿತ್ತಲ್ಲವೇ? ನಮ್ಮ ಬಗ್ಗೆ ಅವರೂರಿನಲ್ಲಿ, ಅವರ ಮನೆಯಲ್ಲಿ ಹೇಳಿಕೊಳ್ಳಲು ಅವರಿಗೇನು ಭಯವೇ? ನನ್ನ ಹುಟ್ಟಿನ ಹಿನ್ನೆಲೆಯನ್ನು ಹೇಳಮ್ಮಾ’ ಈ ರೀತಿಯಲ್ಲಿ ಮಗ ಸದಾ ಕಾಡುತ್ತಿದ್ದ.
ಪಾರ್ಥನ ಬಗ್ಗೆ ಮಗನಿಗೆ ಉತ್ತರಿಸುವಾಗ ಗಂಟಲ ಸೆರೆಯುಬ್ಬುತ್ತಿತ್ತು. “ನಿನ್ನಪ್ಪ ಪುರುಷೋತ್ತಮ- ವೀರಾಧಿವೀರ. ದಯವಿಟ್ಟು ಮತ್ತೆ ಮತ್ತೆ ಪ್ರಶ್ನಿಸಬೇಡ ಕುಮಾರ’ ಎಂದಿದ್ದೆ ಒಮ್ಮೆ. ನನ್ನ ಕಣ್ಣೀರನ್ನು ನೋಡಿದ ಮಗ ಮತ್ತೆ ಆ ಬಗ್ಗೆ ಕೇಳಲೇ ಇಲ್ಲ. “ಪಾರ್ಥಾ ನಿನ್ನ ಅಗಲಿಕೆಯ ನೋವು ಸುಡುತ್ತಿರುವುದು ನನ್ನ ಮತ್ತು ಉಲೂಪಿಯ ಹೃದಯವನ್ನು ಮಾತ್ರವಲ್ಲ. ನಮ್ಮ ಮಗನ ಬಾಳನ್ನೂ ಸುಡುತ್ತಿದೆ. ಒಮ್ಮೆ ಬರಲಾರೆಯಾ… ಮನಸ್ಸು ಚೀರಿ ಚೀರಿ ಹೇಳುತ್ತಿದೆ. ಒಂದಲ್ಲಾ ಒಂದು ದಿನ ನನ್ನ ಅಂತರಂಗದ
ಧ್ವನಿ ಪಾರ್ಥನನ್ನು ತಲುಪುವುದೆಂದು ಭಾವಿಸಿ ಕಾಯುತ್ತಿರುವೆ. “ನನ್ನ ನಿರೀಕ್ಷೆ ಹುಸಿಯಾಗದಿರಲಿ…’ ಎಂದು ಭಗವಂತನಲ್ಲಿ ಬೇಡುತ್ತಿರುವೆ. ಕಾಯುವಿಕೆಗಿಂತ ಅನ್ಯ ತಪವಿಲ್ಲ ಅಲ್ಲವೇ
-ಸುರೇಖಾ ಭೀಮಗುಳಿ