Advertisement

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

05:32 PM Jan 07, 2022 | Team Udayavani |

ಜ್ಯೋತಿಷ್ಯ ಶಾಸ್ತ್ರವು ಸೌರಮಂಡಲದಲ್ಲಿ ಗ್ರಹಗಳ ಚಲನೆಯ ಮೇಲಿನ ಅಧ್ಯಯನವಾಗಿದೆ. ಭವಿಷ್ಯದ ಫಲಗಳನ್ನು ದಶಾ ಕಾಲ ಮತ್ತು ಭುಕ್ತಿಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇನ್ನೂ ಮುಂದುವರೆದು ಗೋಚಾರದ ಫಲಗಳನ್ನು ಸೇರಿಸಿ, ಭವಿಷ್ಯದ ಆಗು ಹೋಗುಗಳನ್ನು ಇನ್ನೂ ಕರಾರುವಕ್ಕಾಗಿ ನಿರ್ಧರಿಸಬಹುದು.

Advertisement

ಗೋಚಾರ ಅಂದರೆ ಗ್ರಹಗಳ ಚಲನೆ. ಗ್ರಹಗಳನ್ನು ಗೋಲ ಎಂದೂ ಕರೆಯುತ್ತಾರೆ. ಚಾರ ಅಂದರೆ ಚಲನೆ. ಆದ ಕಾರಣ ಗ್ರಹಗಳ ಚಲನೆಯನ್ನು ಗೋಚಾರ ಎಂದೂ ಅದರ ಫಲಗಳನ್ನು ಗೋಚಾರ ಫಲ ಎಂದೂ ಕರೆಯುತ್ತಾರೆ.

ಗೋಚಾರದ ಫಲಗಳನ್ನು ಜನ್ಮರಾಶಿಯನ್ನು ಆಧಾರವಾಗಿಟ್ಟುಕೊಂಡು ಹೇಳಲಾಗುತ್ತದೆ. ಇನ್ನು ಕೆಲವು ಜ್ಯೋತಿಷ್ಯರು ಲಗ್ನದ ಮೂಲಕವೂ ಗೋಚಾರದ ಫಲಗಳನ್ನು ಹೇಳುವುದಿದೆ. ಗೋಚಾರದ ಫಲಗಳನ್ನು ಹೇಳುವಾಗ, ನವಗ್ರಹಗಳ ಗೋಚಾರದ ಫಲಗಳನ್ನು ಹೇಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಕೇವಲ ಗುರು ಮತ್ತು ಶನಿ ಗ್ರಹಗಳ ರಾಶಿ ಪರಿವರ್ತನೆಯನ್ನು ಹೆಚ್ಚಾಗಿ ವೈಭವೀಕರಿಸುತ್ತಾರೆ. ಅದಕ್ಕೆ ಕಾರಣಗಳೂ ಇವೆ.

ಚಂದ್ರ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗಲು ಕೇವಲ 2 ¼ (ಎರಡು ಕಾಲು ದಿನ) ದಿನ ತೆಗೆದುಕೊಳ್ಳುತ್ತದೆ. ರವಿ ರಾಶಿ ಪರಿವರ್ತನೆ ಪ್ರತಿ ಒಂದು ತಿಂಗಳಿಗೊಮ್ಮೆ ನಡೆಯುತ್ತದೆ. ಅಂದರೆ ಸಂಕ್ರಾಂತಿಯಂದು ಇನ್ನು ಕುಜ, ಬುಧ, ಶುಕ್ರ ಗ್ರಹಗಳು ಹೆಚ್ಚು ಕಮ್ಮಿ 30ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತದೆ. ಬುಧ, ಶುಕ್ರಗ್ರಹಗಳು ಯಾವಾಗಲು ಸೂರ್ಯನಿಂದ ಒಂದು ರಾಶಿ ಮುಂದೆ ಅಥವಾ ವಕ್ರಿಯಾದಾಗ ಒಂದು ರಾಶಿ ಹಿಂದೆ ಇರುತ್ತದೆ. (ಶುಕ್ರ ಹೆಚ್ಚೆಂದರೆ ಸೂರ್ಯನಿಂದ 3 ರಾಶಿ ಮುಂದೆ ಅಥವಾ ವಕ್ರಿಯಾದಾಗ ಎರಡು ರಾಶಿ ಹಿಂದೆ ಸರಿಯುತ್ತದೆ)

ರಾಹುಕೇತು ಒಂದು ರಾಶಿ ಪರಿವರ್ತನೆಯಾಗಲು 18 ತಿಂಗಳು ತೆಗೆದುಕೊಂಡರೆ, ಗುರು ಗ್ರಹವು ರಾಶಿ ಪರಿವರ್ತನೆಗೆ 12 ತಿಂಗಳು ತೆಗೆದುಕೊಳ್ಳುತ್ತದೆ. ಇನ್ನು ಶನಿ ಗ್ರಹ ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ. ಸೂರ್ಯನಿಗೆ ಒಂದು ಸುತ್ತು ಬರಲು ಅದು ತೆಗೆದುಕೊಳ್ಳುವ ಸಮಯ 30 ವರ್ಷಗಳು. ಅಂದರೆ ಒಂದು ರಾಶಿ ಪರಿವರ್ತನೆಗೆ 30 ತಿಂಗಳು (2 ½ ವರ್ಷ) ತೆಗೆದುಕೊಳ್ಳುತ್ತದೆ.

Advertisement

ಈ ನವಗ್ರಹಗಳಲ್ಲಿ, ಒಂದೊಂದು ಗ್ರಹಗಳು ಜನ್ಮರಾಶಿಯಿಂದ ಶುಭ ಮತ್ತು ಅಶುಭ ಫಲಗಳನ್ನು ಕೊಡುತ್ತದೆ.

ಉದಾಹರಣೆಗೆ:

ಜನ್ಮರಾಶಿಯಿಂದ ಗೋಚಾರದ ಚಂದ್ರನು, 1, 3, 6, 10, 11ನೇ ಮನೆಗಳಲ್ಲಿ ಶುಭ ಫಲಗಳನ್ನೂ, ರವಿಯು 3, 6, 10, 11ನೇ ಸ್ಥಾನಗಳಲ್ಲಿ ಶುಭ ಫಲಗಳನ್ನು, ಕುಜ ಗ್ರಹವು, 3, 6, 10, 11ನೇ ಸ್ಥಾನಗಳಲ್ಲಿ,

ಬುಧ ಗ್ರಹವು 2, 4, 6, 8, 10, 11ನೇ ಸ್ಥಾನಗಳಲ್ಲಿ, ಶುಕ್ರ ಗ್ರಹವು 1, 2, 3, 4, 5, 8, 9, 11, 12ನೇ ಸ್ಥಾನಗಳಲ್ಲಿ, ಗುರು ಗ್ರಹವು 2, 5, 7, 9, 11ನೇ ಸ್ಥಾನಗಳಲ್ಲಿ, ಶನಿ ಗ್ರಹವು 3, 6, 11ನೇ ಸ್ಥಾನಗಳಲ್ಲಿ ಮತ್ತು ರಾಹು, ಕೇತು ಗ್ರಹಗಳು, ಜನ್ಮರಾಶಿಯಿಂದ 3, 6, 10, 11ನೇ ಸ್ಥಾನಗಳಲ್ಲಿ ಶುಭ ಫಲಗಳನ್ನು ನೀಡುತ್ತದೆ.

ಈ ನವಗ್ರಹಗಳಲ್ಲಿ ಗುರು ಗ್ರಹವು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷಗಳ ಕಾಲ ಇರುವುದರಿಂದ ಜನ್ಮ ರಾಶಿಯಿಂದ (ಜಾತಕದಲ್ಲಿ ಚಂದ್ರ ಇರುವ ರಾಶಿಯಿಂದ) ಗೋಚಾರದಲ್ಲಿ 2, 5, 7, 9, 11ನೇ ಮನೆಗಳಲ್ಲಿ ಸಂಚಾರ ಮಾಡುವಾಗ ಅತ್ಯಂತ ಶುಭ ಫಲಗಳನ್ನು ನೀಡುತ್ತಾನೆ. ಅದನ್ನು ಗುರುಬಲದ ಸಮಯ ಎಂದೂ ಕರೆಯುತ್ತಾರೆ.

ಅದೇ ರೀತಿ ಶನಿಯು ಒಂದು ರಾಶಿಯಲ್ಲಿ 30 ತಿಂಗಳು (2 ½ ವರ್ಷ)  ಸಂಚಾರ ಮಾಡುವಾಗ, ಶನಿಯ ಶುಭ ಫಲಗಳಿಂದ ಅಶುಭ ಫಲಗಳ ಬಗ್ಗೆ ಹೆಚ್ಚಿಗೆ ವಿಶ್ಲೇಷಣೆಯನ್ನು ಮಾಡಲಾಗುತ್ತದೆ.

ಉದಾಹರಣೆಗೆ:

ಜನ್ಮರಾಶಿಯಿಂದ 12, 1, 2ನೇ ರಾಶಿಗಳಲ್ಲಿ ಶನಿ ಸಂಚಾರದ ಸಮಯವನ್ನು ಸಾಡೇಸಾತಿ (ಏಳುವರೆ ವರ್ಷ) ಎಂದೂ, ಜನ್ಮ ರಾಶಿಯಿಂದ 8ನೇ ರಾಶಿಯನ್ನು ಅಷ್ಟಮ ಶನಿ ಎಂದೂ, ಜನ್ಮ ರಾಶಿಯಿಂದ 4ನೇ ರಾಶಿಯನ್ನು ಅರ್ಧ ಅಷ್ಟಮ ಎಂದೂ ವಿಶ್ಲೇಷಣೆ ಮಾಡುತ್ತಾರೆ.

ಈ ನವಗ್ರಹಗಳು ಜನ್ಮ ರಾಶಿಯಿಂದ 11ನೇ ಮನೆಯಲ್ಲಿ ಸಂಚಾರ ಮಾಡುವಾಗ ಶುಭ ಫಲಗಳನ್ನು ನೀಡುತ್ತದೆ. ಅದಕ್ಕೆ 11ನೇ ಮನೆಯನ್ನು ಲಾಭ ಸ್ಥಾನ ಎಂದೂ, ಸರ್ವಾಭಿಷ್ಠ ಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿ ಒಂದು ವಿಷಯವನ್ನು ಗಣನೆಗೆ ತೆಗೆದುಕೊಳ್ಳಬೇಕು, ಅದೇನೆಂದರೆ ಯಾವುದೇ ಜಾತಕನಿಗೆ, ಸ್ವಕ್ಷೇತ್ರ, ಉಚ್ಛ ಕ್ಷೇತ್ರ, ಪಂಚ ಮಹಾಪುರುಷ ಯೋಗದ ದಶಾ ಕಾಲ ನಡೆಯುವ ಸಂದರ್ಭದಲ್ಲಿ, ಗೋಚಾರದ ಯಾವುದೇ ಅಶುಭ ಫಲಗಳು ಅಷ್ಟೊಂದು ಪರಿಣಾಮ ಬೀರುವುದಿಲ್ಲ. ಅಶುಭ ದಶಾಕಾಲ, 6, 8, 12, ಅಧಿಪತಿಗಳ ದಶಾಕಾಲದಲ್ಲಿ ಗೋಚಾರದ ಅಶುಭ ಫಲಗಳು ಒಟ್ಟಾಗಿ ಜಾತಕನು ತುಂಬಾ ಕಷ್ಟ, ನಷ್ಟ, ರೋಗ, ಸಾಲ ಇತ್ಯಾದಿ ಬಾಧೆಗಳನ್ನು ಅನುಭವಿಸಬೇಕಾಗುತ್ತದೆ.

ರವೀಂದ್ರ. ಎ ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶಾರದ, ಜ್ಯೋತಿಷ್ಯ ವಿಶ್ಲೇಷಕರು ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next