ಮೈಸೂರು: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಭಾರೀ ಗೋಲ್‌ಮಾಲ್ ನಡೆದಿದ್ದು, ಬಿಜೆಪಿ ಮತದಾರರನ್ನು ಗುರಿಯಾಗಿಸಿಕೊಂಡಿರುವ ಸ್ಥಳೀಯ ಕಾಂಗ್ರೆಸ್ ಶಾಸಕ ಎಂ.ಕೆ.ಸೋಮಶೇಖರ್ ಮತದಾರರ ಪಟ್ಟಿಯನ್ನು ತಿರುಚಿಸಿದ್ದಾರೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ಆರೋಪಿಸಿದರು.
ಬೂತ್ ಕ್ಯಾಪcರಿಂಗ್ ಮಾಡುವುದರಲ್ಲಿ ಕಾಂಗ್ರೆಸ್ ಪಿತಾಮಹ. ಹೀಗಾಗಿ ರಾಜ್ಯದಲ್ಲಿ ಚುನಾವಣೆ ಘೋಷಣೆಗೂ ಮೊದಲೇ ಮತಪಟ್ಟಿಯಲ್ಲಿ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಪರಿಷ್ಕೃತ ಮತದಾರರಪಟ್ಟಿಯಲ್ಲಿ ಬದುಕಿರುವವರನ್ನು ಸತ್ತಿದ್ದಾರೆಂದು ಬದಲಿಸಿದ್ದಾರೆ. ತರಾತುರಿಯಲ್ಲಿ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಈ ಲೋಪ ಕಂಡುಬಂದಿದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಯಾವ ಕ್ಷೇತ್ರ ಹಾಗೂ ಬೂತ್‌ಗಳಲ್ಲಿ ಬಿಜೆಪಿಗೆ ಹೆಚ್ಚು ಮತಬಂದಿದೆ ಅಂತಹ ಕಡೆ ಮತದಾರರ ಪಟ್ಟಿ ತಿರುಚಿದ್ದಾರೆ ಎಂದು ಆರೋಪಿಸಿದ ಅವರು, ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ತಮ್ಮ ಪಕ್ಷದ ಶಾಸಕರು ಮತದಾರರ ಪಟ್ಟಿ ತಿರುಚುತ್ತಿರುವ ಬಗ್ಗೆ ಏಕೆ ಮೌನವಹಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮತದಾರರ ಪಟ್ಟಿಯಲ್ಲಿನ ಅಕ್ರಮ ಕೇವಲ ನಗರದ ಕೆ.ಆರ್.ಕ್ಷೇತ್ರ ಮಾತ್ರವಲ್ಲದೆ, ಎನ್.ಆರ್.ಕ್ಷೇತ್ರ, ಚಾಮರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೂ ನಡೆದಿರುವ ದಾಖಲೆ ಲಭ್ಯವಾಗಿದೆ. ಅಲ್ಲದೆ ರಾಜ್ಯದ ಎಲ್ಲಾ 224 ವಿಧಾನಸಬಾ ಕ್ಷೇತ್ರಗಳಲ್ಲೂ ಈ ರೀತಿಯ ಅಕ್ರಮ ನಡೆದಿರುವ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕಿದೆ ಎಂದು ಒತ್ತಾಯಿಸಿದರು.
ತಾನೇ ಸಿಎಂ ಆಗಿದ್ದಾರೆ: ನಗರದ 3 ವಿಧಾನಸಭಾ ಕ್ಷೇತ್ರಕ್ಕೂ ತಾನೇ ಮುಖ್ಯಮಂತ್ರಿ ಎಂದುಕೊಂಡಿರುವ ಶಾಸಕ ಎಂ.ಕೆ.ಸೋಮಶೇಖರ್, ಕೆ.ಆರ್.ಕ್ಷೇತ್ರದ 4794, ಚಾಮರಾಜ ಕ್ಷೇತ್ರದ 5,642 ಮತ್ತು ಎನ್.ಆರ್.ಕ್ಷೇತ್ರದ 3,416 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಹೇಳಿದರು. ಇದಕ್ಕೆ ಪಾಲಿಕೆ ತಹಶೀಲ್ದಾರ್ ಅಸ್ಲಾಂ ಸಹಕರಿಸಿದ್ದಾರೆ.
ಹೀಗಾಗಿ ಮತದಾರರಪಟ್ಟಿಯನ್ನು ತಿರುಚಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದಂತೆ ಅವರು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಆಗಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ನಗರ ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್, ಬಿಜೆಪಿ ಮುಖಂಡ ರಾಜೇಂದ್ರ ಇದ್ದರು.