Advertisement

ಕೋವಿಡ್‌ ಸಂದರ್ಭದಲ್ಲಿ ಗೋವಾ ಜನತೆ ಸಹಕಾರ ಅಪಾರ: ಪ್ರಧಾನಿ ಮೋದಿ

03:45 PM Sep 19, 2021 | Team Udayavani |

ಪಣಜಿ: ಕೋವಿಡ್ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಗೋವಾ ರಾಜ್ಯದ ಜನತೆ ಉತ್ತಮ ಸಹಕಾರ ನೀಡಿದ್ದಾರೆ. ಇದರಿಂದಾಗಿ ಗೋವಾದಲ್ಲಿ ಶೇ 100 ರಷ್ಟು ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿದೆ. ನನ್ನ ಮಿತ್ರ ಹಾಗೂ ಆಧುನಿಕ ಗೋವಾದ ಶಿಲ್ಪಕಾರ ದಿ. ಮನೋಹರ್ ಪರೀಕರ್ ರವರು ಇಂದು ಇದ್ದಿದ್ದರೆ ಎದೆ ತಟ್ಟಿ ಅಭಿಮಾನ ಪಡುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

Advertisement

ಪ್ರಧಾನಿ ನರೇಂದ್ರ ಮೋದಿಯವರು ಗೋವಾದಲ್ಲಿನ ಕೋವಿಡ್ ಯೋಧರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ- ಗೋವಾದಲ್ಲಿ ಭಾರಿ ಮಳೆಯಿಂದಾಗಿ ನೆರೆ ಬಂದು ಸಂಕಷ್ಟ ಎದುರಾದ ಪರಿಸ್ಥಿತಿಯಲ್ಲಿಯೂ ಕೂಡ ಲಸಿಕಾಕರಣದಲ್ಲಿ ಜನತೆ ತೋರಿರುವ ಆಸಕ್ತಿ ಕೌತುಕಾಸ್ಪದವಾಗಿದೆ. ಆರೋಗ್ಯ ಇಲಾಖೆಯ ಕರ್ಮಚಾರಿಗಳ ಪ್ರಯತ್ನದಿಂದಾಗಿ ಗೋವಾದಲ್ಲಿ ಶೇ 100 ರಷ್ಟು ಕೋವಿಡ್ ಲಸಿಕೆ ನೀಡಲು ಸಾಧ್ಯವಾಗಿದೆ. ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಸ್ವತಃ ತಾವು ಡಾಕ್ಟರ್ ಆಗಿರುವುದರಿಂದ ಗೋವಾದಲ್ಲಿ ಕೋವಿಡ್‌  ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ. ರಾಜ್ಯದಲ್ಲಿನ ಮಂತ್ರಿಗಳು, ಶಾಸಕರು, ಸಂಸದರು, ಸಂಬಂಧಿತ ಖಾತೆಯ ಅಧಿಕಾರಿ ಮತ್ತು ಕರ್ಮಚಾರಿಗಳಿಂದಾಗಿ ಗೋವಾದಲ್ಲಿ ಶೇ 100 ರಷ್ಟು ಲಸಿಕೆ ಪೂರ್ಣಗೊಳ್ಳಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಗೋವಾ ರಾಜ್ಯವು ವಿವಿಧತೆಯಿಂದ ಕೂಡಿದ ರಾಜ್ಯವಾಗಿದೆ. ಪಶ್ಚಿಮ ಹಾಗೂ ಪೂರ್ವ ದೇಶಗಳ ಸಂಗಮವನ್ನು ಇಲ್ಲಿ ಕಾಣಬಹುದಾಗಿದೆ. ಗೋವಾದಲ್ಲಿ ಲಸಿಕೆಯ ವಿಷಯದಲ್ಲಿ ಜನರಲ್ಲಿ ಇದ್ದ ತಪ್ಪು ತಿಳುವಳಿಕೆಯನ್ನು ದೂರಗೊಳಿಸಿ ಹೆಚ್ಚು ಹೆಚ್ಚು ಜನರ ಬಳಿ ಲಸಿಕೆ ತಲುಪಿಸಲು ಕೋವಿಡ್ ಯೋಧರು ಮಾಡಿದ ಕೆಲಸ ಉಲ್ಲೇಖನೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಈ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಆರೋಗ್ಯ ಕರ್ಮಚಾರಿಗಳು, ಕೋವಿಡ್ ಯೋಧರು, ಮುಖ್ಯಮಂತ್ರಿ ಪ್ರಮೋದ ಸಾವಂತ್, ಕೇಂದ್ರ ಮಂತ್ರಿ ಶ್ರೀಪಾದ ನಾಯ್ಕ, ಉಪಮುಖ್ಯಮಂತ್ರಿ ಬಾಬು ಕವಳೇಕರ್, ಆರೋಗ್ಯಮಂತ್ರಿ ವಿಶ್ವಜಿತ್ ರಾಣೆ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next