ಕಲಬುರಗಿ: ಕರ್ನಾಟಕದಿಂದ ವಲಸೆ ಬಂದಿರುವ ಲಂಬಾಣಿ ಸಮುದಾಯದವರಿಂದ ಗೋವಾ ರಾಜ್ಯ ವರ್ಚಸ್ಸು ಕಳೆದುಕೊಳ್ಳುತ್ತಿದೆ ಎಂದು ಗೋವಾ ಪ್ರವಾಸೋದ್ಯಮ ಖಾತೆ ಸಚಿವ ಮನೋಹರ ಅಜಗಾಂವ್ಕರ ಅವರು ನೀಡಿರುವ ಹೇಳಿಕೆ ವಿರೋಧಿಸಿ ಜೆಡಿಎಸ್ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಎದುರ ಗುರುವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳ ಮೂಲಕ ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನೆಕಾರರು, ಕರ್ನಾಟಕದಿಂದ ವಲಸೆ ಬಂದಿರುವ ಲಂಬಾಣಿಗರಿಂದ ಗೋವಾ ಪ್ರವಾಸೋದ್ಯಮ ಪ್ರಗತಿಗೆ ಹೊಡೆತ ಬೀಳುತ್ತಿದೆ. ಇದರಿಂದ ಗೋವಾದ ಕುರಿತು ತಪ್ಪು ಸಂದೇಶ ರವಾನೆಯಾಗುತ್ತಿದೆ.
ಮುಂದಿನ ದಿನಗಳಲ್ಲಿ ಲಂಬಾಣಿ ಸಮುದಾಯದವರಿಗೆ ಗೋವಾ ಪ್ರವೇಶ ನಿಷೇಧಿಧಿಸಲಾಗುವುದು ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಜಗಾಂವ್ಕರ ಇಂತಹ ಹೇಳಿಕೆ ನೀಡುವ ಮೂಲಕ ಗೋವಾ ರಾಜ್ಯ ಸರ್ಕಾರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮುಜುಗುರ ಉಂಟಾಗುವ ಹೇಳಿಕೆ ನೀಡಿದ್ದಾರೆ.
ಅಲ್ಲದೆ, ದೇಶದ ಸಂವಿಧಾನ ಹಾಗೂ ವಿವಿಧ ಸಮುದಾಯದ ಜನಾಂಗಗಳ ಕಲೆ, ಸಂಸ್ಕೃತಿ ಹಾಗೂ ಜೀವನ ಶೈಲಿ ಎಲ್ಲವನ್ನು ಮರೆತು ಮನಬಂದಂತೆ ವರ್ತಿಸುತ್ತಿರುವುದು ಸರಿಯಲ್ಲ. ಕೂಡಲೇ ಹೇಳಿಕೆ ಹಿಂಪಡೆದು, ಬಂಜಾರಾ ಸಮಾಜದವರ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ವಿಠಲ ಜಾಧವ ನಂದೂರು, ವಲ್ಸನ್‌ಕುಮಾರ, ಚಾಂದಪಾಶಾ ಜಮಾದಾರ, ಬಸವರಾಜ ಬೀರಬಿಟ್ಟೆ, ಸಂದೀಪ ಪಾಟೀಲ, ಮೊಹ್ಮದ್ ಅಯುಬ್‌ಖಾನ್, ಗುರುರಾಜ ಹಾವೇರಿ, ಹಸೀನಾ ಬೇಗಂ, ಮಹೇಬೂಬ್ ಪಟೇಲ್, ಮಾಣಿಕ ಶಹಾಪುರಕರ, ಹೋಪಸಿಂಗ್ ಚವ್ಹಾಣ್, ಜಗದೀಶ ನಾಯಕ ಪಾಲ್ಗೊಂಡಿದ್ದರು.