Advertisement

ಗೋವಾ ಚಿತ್ರೋತ್ಸವ : ಪ್ರಾದೇಶಿಕ ಭಾಷೆಗಳ ಸಿನಿಮಾಗಳ ಕುರಿತ ವಿರೋಧಾಭಾಸ

02:43 PM Nov 22, 2021 | Team Udayavani |

ಪಣಜಿ: ಒಂದೆಡೆ ಪ್ರಾದೇಶಿಕ ಭಾಷೆಯ ಸಿನಿಮಾಗಳು ಮಿನುಗಬೇಕು. ಇನ್ನಷ್ಟು ಒಳ್ಳೆಯ ಸಿನಿಮಾಗಳು ಬರಬೇಕು’ ಎಂದು ಒಬ್ಬರು ಉತ್ಸವದಲ್ಲಿ ತುಂಬು ಭರವಸೆ ನೀಡುತ್ತಿದ್ದರೆ, ಮತ್ತೊಂದೆಡೆ ‘ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ಅವಕಾಶವೇ ಸಿಗುತ್ತಿಲ್ಲ’ ಎಂದು ಬೇಸರದ ನುಡಿಗಳನ್ನು ವ್ಯಕ್ತಪಡಿಸುವ ವಿರೋಧಾಭಾಸ ಗೋವಾ ಚಿತ್ರೋತ್ಸವದಲ್ಲಿ ಸಾಕಷ್ಟು ಕಂಡು ಬರುತ್ತಿದೆ.

Advertisement

ವಿಚಿತ್ರವೆಂದರೆ ಎರಡನೆಯದು ಕಟು ಸತ್ಯ. ಮೊದಲನೆಯದು ಅಪೂರ್ಣ ಸತ್ಯ.

52 ನೇ ಇಫಿ ಚಿತ್ರೋತ್ಸವ ಉದ್ಘಾಟನೆಯ ದಿನದಂದೇ ಕೇಂದ್ರ ವಾರ್ತಾ ಮತ್ತು ಪ್ರಚಾರ, ಯುವಜನ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ‘ಪ್ರಾದೇಶಿಕ ಸಿನಿಮಾಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಬೇಕು. ನಮ್ಮಲ್ಲಿ ಸಾಕಷ್ಟು ಸಿನಿಮಾಗಳನ್ನು ರೂಪಿಸುತ್ತಿದ್ದೇವೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟಕ್ಕೆ ಪ್ರಶಂಸೆ ಪಡೆಯುತ್ತಿಲ್ಲ. ಹಾಗಾಗಿ ನಮ್ಮಲ್ಲಿ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಪ್ರದರ್ಶಿಸಬೇಕು’ ಎಂದರು.

ರವಿವಾರ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಪನೋರಮಾ ವಿಭಾಗದ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಎಸ್‍. ವಿ. ರಾಜೇಂದ್ರ ಸಿಂಗ್ ಬಾಬು, ‘ಒಟಿಟಿ ಯಲ್ಲಿ ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ಅವಕಾಶವೇ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯೋಚಿಸಬೇಕು. ಒಟಿಟಿ ಯವರು ಆಯ್ಕೆ ಮಾಡುವ ಹತ್ತು ಚಿತ್ರಗಳ ಪೈಕಿ 2 ಚಿತ್ರಗಳಾದರೂ ಪ್ರಾದೇಶಿಕ ಭಾಷೆಯವದ್ದಾಗಿರಬೇಕು ಎಂಬ ನಿಯಮ ತರುವ ಅಗತ್ಯವಿದೆ’ ಎಂದು ಆಗ್ರಹಿಸಿದರು.

ವಾಸ್ತವ ಇವೆರಡಕ್ಕಿಂತಲೂ ಭಿನ್ನವಾಗಿದೆ. ಅದೇ ಕಟು ಸತ್ಯ. ಪ್ರಸ್ತುತ ಪ್ರಾದೇಶಿಕ ಸಿನಿಮಾಗಳಿಗೆ ಯಾವುದೇ ವೇದಿಕೆಯಿಲ್ಲ. ಖಾಸಗಿ ವಾಹಿನಿಗಳೂ ಕೇವಲ ವಾಣಿಜ್ಯಾತ್ಮಕ ಚಲನಚಿತ್ರಗಳನ್ನು ಪ್ರಸಾರಿಸುತ್ತಾರೆ. ಒಟಿಟಿ ಯವರಿಗೆ ಮನರಂಜನಾ ಚಿತ್ರಗಳು ಮಾತ್ರ ಬೇಕು. ಅದರಲ್ಲೂ ಕ್ರೈಮ್, ಥ್ರಿಲ್ಲರ್ ಮುಂತಾದವು. ಹಾಗಾಗಿ ಬೇರೆ ತೆರನಾದ ಪ್ರಾದೇಶಿಕ ಚಿತ್ರಗಳು ಮೂಲೆಗುಂಪಾಗುತ್ತಿವೆ.

Advertisement

ಇದು ಕನ್ನಡದ ಕಥೆಯೊಂದೇ ಅಲ್ಲ. ವರ್ಷದಿಂದ ವರ್ಷಕ್ಕೆ ಭಾರತೀಯ ಭಾಷೆಗಳಲ್ಲಿ ಚಲನಚಿತ್ರಗಳು ಹೆಚ್ಚಾಗಿವೆ. ಹೊಸ ಹೊಸ ಭಾಷೆಗಳಿಂದಲೂ ಸಿನಿಮಾಗಳು ಬರತೊಡಗಿವೆ. ಉದಾಹರಣೆಗೆ ಈ ವರ್ಷದ ಉತ್ಸವದ ಉದ್ಘಾಟನಾ ಚಿತ್ರ ಈಶಾನ್ಯ ರಾಜ್ಯಗಳ ದಿಮಾಸಾ ಭಾಷೆಯ ಚಿತ್ರ. ಆದರೆ ಇವುಗಳಿಗೆ ಉತ್ಸವಗಳನ್ನು ಹೊರತುಪಡಿಸಿದಂತೆ ಬೇರೆ ಯಾವ ವೇದಿಕೆಯೂ ಸಿಗುತ್ತಿಲ್ಲ.

ಪನೋರಮಾ ಕುರಿತ ಪತ್ರಿಕಾಗೋಷ್ಠಿಯಲ್ಲೇ ಒಬ್ಬ ಸಿನಿಮಾಕರ್ಮಿ, ಪ್ರಾದೇಶಿಕ ಸಿನಿಮಾಗಳಿಗೆ ಸರಕಾರ ಗಮನ ಕೊಡಬೇಕು. ಇಲ್ಲವಾದರೆ ಕಷ್ಟ. ಪ್ರಸ್ತುತ ಪ್ರಾದೇಶಿಕ ಸಿನಿಮಾಗಳಿಗೆ ಯಾವುದೇ ಅವಕಾಶ ಸಿಗುತ್ತಿಲ್ಲ’ ಎಂದರು.

ಮತ್ತೊಬ್ಬ ವಿತರಕರೂ ಮಾತನಾಡಿ, ‘ದೂರದರ್ಶನದಲ್ಲಿ ಈ ಹಿಂದೆ ತೋರಿಸುತ್ತಿದ್ದ ಪ್ರಾದೇಶಿಕ ಚಿತ್ರಗಳನ್ನೂ ಈಗ ಕೈ ಬಿಡಲಾಗಿದೆ. ಇದಕ್ಕೆ ಯಾವುದೇ ಕಾರಣಗಳಿಲ್ಲ. ಪ್ರಾದೇಶಿಕ ಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ದೂರದರ್ಶನ ಮತ್ತೆ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಇವೆಲ್ಲವೂ ವಿರೋಧಾಭಾಸವನ್ನು ಎತ್ತಿ ಹಿಡಿಯುತ್ತದೆ. ಕೇಂದ್ರ ಸರಕಾರ ಈಗಲಾದರೂ ಪ್ರಾದೇಶಿಕ ಚಿತ್ರಗಳ ಪ್ರಸಾರಕ್ಕೆ ಸ್ಪಷ್ಟ, ನಿಖರ ಹಾಗೂ ಪಾರದರ್ಶಕವಾದ ವ್ಯವಸ್ಥೆ ಮಾಡಬೇಕೆಂಬುದು ಸಿನಿಮಾ ಕರ್ಮಿಗಳ, ಸಿನಿ ಪ್ರೇಮಿಗಳ ಆಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next