ಪಣಜಿ: ಗೋವಾ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಹೈವೋಲ್ಟೆಜ್ ಕದನಕ್ಕೆ ಕಾರಣವಾಗಿದ್ದ ಪಣಜಿ ಕ್ಷೇತ್ರದಲ್ಲಿ ಬಿಜೆಪಿಯ ಅಟಾನಾಸಿಯೊ ಮಾನ್ಸೆರಾತ್ ಗೆಲುವು ಕಂಡಿದ್ದಾರೆ. ಬಿಜೆಪಿ ವಿರುದ್ಧ ಬಂಡಾಯವಾಗಿ ಸ್ಪರ್ಧೆ ನಡೆಸಿದ್ದ ಗೋವಾದ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಗೆ ಸೋಲಾಗಿದೆ.
ಬಿಜೆಪಿ ಟಿಕೆಟ್ ಸಿಗದ ಕಾರಣ ಉತ್ಪಲ್ ಪರಿಕ್ಕರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಶಿವಸೇನೆ ಪಕ್ಷವೂ ಅವರಿಗೆ ಬೆಂಬಲ ನೀಡಿತ್ತು. ಹೀಗಾಗಿ ಪಣಜಿ ವಿಧಾನಸಭಾ ಕ್ಷೇತ್ರ ಬಿಜೆಪಿ ಮತ್ತು ಉತ್ಪಲ್ ನಡುವಿನ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಡಾಗಿತ್ತು.
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಟಾನಾಸಿಯೊ ಮಾನ್ಸೆರಾತ್ ಅವರು ಪ್ರಯಾಸದ ಗೆಲುವು ಕಂಡಿದ್ದಾರೆ. ಅಟಾನಾಸಿಯೊ ಮಾನ್ಸೆರಾತ್ ಅವರು ಉತ್ಪಲ್ ಪರಿಕ್ಕರ್ ಗಿಂತ ಕೇವಲ 713 ಮತಗಳನ್ನು ಹೆಚ್ಚು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಮೊದಲ ಪ್ರಯತ್ನದಲ್ಲಿ ಉತ್ಪಲ್ ಪರಿಕ್ಕರ್ ಗೆ ಗೆಲುವು ಅಲ್ಪ ಅಂತರದಲ್ಲಿ ಕೈಜಾರಿದೆ.
ಮಾನ್ಸೆರಾತ್ ಅಸಮಾಧಾನ: ಫಲಿತಾಂಶಕ್ಕೆ ಸಂಬಂಧಿಸಿದಂತೆ ನಿರಾಶೆಯಾಗಿದೆ. ಬಿಜೆಪಿ ಕಾರ್ಯಕರ್ತರು ನನಗಾಗಿ ಕೆಲಸ ಮಾಡಿಲ್ಲ, ಆಪ್ ಅಭ್ಯರ್ಥಿಗಾಗಿ ಕೆಲಸ ಮಾಡಿದ್ದಾರೆ ಎಂದು ವಿಜೇತ ಅಭ್ಯರ್ಥಿ ಅಟಾನಾಸಿಯೊ ಮಾನ್ಸೆರಾತ್ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ:ಗೋವಾ ವಿಧಾನಸಭೆಗೆ ರಾಣೆ ದಂಪತಿಗಳು : ಬಿಜೆಪಿಯ ಜೋಡಿಗೆ ಭರ್ಜರಿ ಜಯ
ನಾನು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಡಿದೆ. ಕೆಲವು ಕಾರ್ಯಕರ್ತರು ಮತ್ತು ಬೆಂಬಲಿಗರ ಬಲದಿಂದಾಗಿ ನಾನು ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಬಿಜೆಪಿ ಕಾರ್ಯಕರ್ತರು ನನ್ನನ್ನು ಪಕ್ಷಕ್ಕೆ ಒಪ್ಪಿಕೊಂಡಿಲ್ಲ. ನಾನು ಆ ರೀತಿಯಲ್ಲಿ ನೋಡುತ್ತೇನೆ. ಇದರಿಂದಾಗಿ ಉತ್ಪಲ್ ಪರಿಕ್ಕರ್ ಇಷ್ಟು ಮತಗಳನ್ನು ಪಡೆಯಲು ಸಾಧ್ಯವಾಗಿದ್ದು ಕಾರ್ಯಕರ್ತರು ತಮ್ಮ ಮತಗಳನ್ನು ಅವರಿಗೆ ವರ್ಗಾಯಿಸಿದ ಕಾರಣ. ಇಲ್ಲಿನ ಬಿಜೆಪಿ ನಾಯಕತ್ವವು ಡ್ಯಾಮೇಜ್ ಕಂಟ್ರೋಲ್ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.