Advertisement

ಗೋವಾದಲ್ಲಿ ಗ್ರಾ.ಪಂ. ಚುನಾವಣೆ ಕಾವು ; ಜಾಗೃತಿ ಮೂಡಿಸಲು ಟಿ-ಶರ್ಟ್‍ಗಳು

04:56 PM Jul 30, 2022 | Team Udayavani |

ಪಣಜಿ: ಗೋವಾ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯತ  ಚುನಾವಣೆಯ ಹಿನ್ನೆಲೆಯಲ್ಲಿ  ಮೊದಲ ಬಾರಿಗೆ ತನ್ನ ಲೋಗೋ ಮತ್ತು ಟೀ ಶರ್ಟ್ ಗಳನ್ನು ಬಿಡುಗಡೆ ಮಾಡಿದೆ.

Advertisement

ಮತದಾನಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಟಿ-ಶರ್ಟ್‍ಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಲಾಗುವುದು. ಗೋವಾದ 186 ಪಂಚಾಯತ್‍ಗಳಿಗೆ ಆಗಸ್ಟ್ 10 ರಂದು ಮತದಾನ ನಡೆಯುತ್ತಿದೆ. ಗರಿಷ್ಠ ಸಂಖ್ಯೆಯ ಜನರು ಮತದಾನದ ಹಕ್ಕನ್ನು ಚಲಾಯಿಸುವಂತೆ ಚುನಾವಣಾ ಆಯೋಗವು ಸಾರ್ವಜನಿಕ ಜಾಗೃತಿ ಮೂಡಿಸಲು ಮುಂದಾಗಿದೆ.

ಗೋವಾ ರಾಜ್ಯ ಚುನಾವಣಾ ಆಯುಕ್ತ ಡಬ್ಲ್ಯೂ, ವಿ, ರಮಣಮೂರ್ತಿ, ದಕ್ಷಿಣ ಗೋವಾ ಜಿಲ್ಲಾಧಿಕಾರಿ ಜ್ಯೋತಿ ಕುಮಾರಿ, ಉತ್ತರ ಗೋವಾ ಜಿಲ್ಲಾಧಿಕಾರಿ ಮಾಮು ಹಗೆ ರವರು ಶನಿವಾರ ಪಣಜಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೋಗೋ ಮತ್ತು ಟೀ ಶರ್ಟ್‍ಗಳನ್ನು ಅನಾವರಣಗೊಳಿಸಿದರು.

ಗ್ರಾ.ಪಂ  ಚುನಾವಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಆಗಸ್ಟ್ 10 ರಂದು ಮತದಾನ ನಡೆಯಲಿದೆ. ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರಕ್ಕೆ ರಾತ್ರಿ 10 ಗಂಟೆಯವರೆಗೆ ಮಿತಿ ಇದ್ದು, ಚುನಾವಣೆ ನಡೆಯುವ ಪಂಚಾಯಿತಿ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆಯ ನಂತರ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸೂಕ್ಷ್ಮ ಕ್ಷೇತ್ರಗಳ ಮೇಲೆ ಚುನಾವಣಾ ಆಯೋಗ ನಿಗಾ ವಹಿಸಲಿದೆ ಎಂದು ಚುನಾವಣಾ ಆಯೋಗ ಸೂಚನೆ ಹೊರಡಿಸಿದೆ.

ಈ ನಡುವೆ ಗೋವಾದಲ್ಲಿ ರಾಜಕೀಯ ಪಕ್ಷಗಳು ಪಂಚಾಯತ್ ಚುನಾವಣೆಯ ಕಹಳೆಯನ್ನು ಊದಿವೆ. ಪಂಚಾಯತ್ ಚುನಾವಣೆಗಳು ಪಕ್ಷದ ಚಿನ್ಹೆಯ ಅಡಿಯಲ್ಲಿ ಚುನಾವಣೆ ನಡೆಯದಿದ್ದರೂ ಕೂಡ , ಪ್ರತಿಯೊಂದು ರಾಜಕೀಯ ಪಕ್ಷವು ತಮ್ಮ ಬೆಂಬಲಿಗರ ಜಯಕ್ಕಾಗಿ ಪ್ರಯತ್ನಿಸುತ್ತದೆ. ಈ ಬಾರಿ ಪಂಚಾಯತ್ ಚುನಾವಣೆಯಲ್ಲಿ ಹಲವು ವಾರ್ಡ್ ಗಳಲ್ಲಿ ಜಿದ್ದಾಜಿದ್ದಿನ ಸ್ಫರ್ಧೆ ಏರ್ಪಟ್ಟಿದೆ. 186 ಪಂಚಾಯಿತಿಗಳಿಗೆ ಆಗಸ್ಟ್ 10 ರಂದು ಮತದಾನ ನಡೆಯಲಿದ್ದು, ಆಗಸ್ಟ್ 12 ರಂದು ಮತ ಎಣಿಕೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next