ಪಣಜಿ: ಗೋವಾದ ಸಾಖಳಿಯ ಸುತ್ತಮುತ್ತಲಿನ ಪಾಳುಬಿದ್ದಿರುವ ಕೃಷಿ ಭೂಮಿಯನ್ನು ಕೃಷಿಗೆ ಒಳಪಡಿಸಿದರೆ, ಅದು ಗೋವಾದ ಕೃಷಿ ಮತ್ತು ಪಶುಸಂಗೋಪನೆ ಕ್ಷೇತ್ರಗಳನ್ನು ಸ್ವಾವಲಂಬಿಯಾಗಿಸಲು ಕೊಡುಗೆ ನೀಡುತ್ತದೆ. ಪಾಳು ಭೂಮಿಯನ್ನು ಸಾಗುವಳಿಗೆ ತರುವಂತೆ ಮಾಡಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕರೆ ನೀಡಿದರು.
ಸಾಖಳಿಯ ಸರಕಾರಿ ಕಾಲೇಜಿನಲ್ಲಿ ಬಿಚೋಲಿಂ ಪ್ರಗತಿಪರ ರೈತ ಉತ್ಪಾದಕ ಕಂಪನಿಯಿಂದ ಸಭೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಾ. ಸಾವಂತ್ ಮಾತನಾಡುತ್ತಿದ್ದರು.
ಮೊದಲು ಬಿಚೋಳಿ ತಾಲೂಕಿನಲ್ಲಿ ಈ ಪ್ರಯೋಗ ಯಶಸ್ವಿಯಾಗಲಿದ್ದು, ನಂತರ ಇಡೀ ರಾಜ್ಯದಲ್ಲಿ ಜಾರಿಯಾಗಲಿದೆ. ಸಾಖಳಿ ಕ್ಷೇತ್ರದಲ್ಲಿ 450 ಹೆಕ್ಟೇರ್, ಮಯೆ ಕ್ಷೇತ್ರದಲ್ಲಿ 550 ಮತ್ತು ಬಿಚೋಳಿ ಕ್ಷೇತ್ರದಲ್ಲಿ 250, ಬಿಚೋಳಿ ತಾಲೂಕಿನಲ್ಲಿ ಒಟ್ಟು 1250 ಹೆಕ್ಟೇರ್ ಕೃಷಿ ಭೂಮಿ ಪಾಳು ಬಿದ್ದಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಈ 1250 ಹೆಕ್ಟೇರ್ ಪ್ರದೇಶದಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಕೃಷಿ ಭೂಮಿ ನೀರಾವರಿ ವ್ಯವಸ್ಥೆಯನ್ನು ಹೊಂದಿದೆ. ಸಾಂಪ್ರದಾಯಿಕ ಬೆಳೆಗಳು, ತರಕಾರಿಗಳೊಂದಿಗೆ ಸೈಟ್ ಅನ್ನು ಸಮೀಕ್ಷೆ ಮಾಡುವ ಮೂಲಕ ಹಾಗೂ ಉಳಿದ ಪ್ರದೇಶಗಳಲ್ಲಿ ಹಸಿರು ಮೇವು ಹಾಗೂ ಜೋಳ, ನವಣೆ, ರಾಗಿ, ನೇಪಿಯರ್ ಹುಲ್ಲು ಹಾಕಿದರೆ ಕೃಷಿ ಆದಾಯ ಹೆಚ್ಚಳದ ಜತೆಗೆ ಪಶು ಮೇವಿನ ಸಮಸ್ಯೆಯೂ ಪರಿಹಾರವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಗೋವಾ ರಾಜ್ಯಕ್ಕೆ ಸದ್ಯ ಬಹುತೇಕ ಕೃಷಿ ಉತ್ಪನ್ನಗಳು ಮತ್ತು ಪಶು ಆಹಾರಗಳು ಸೇರಿದಂತೆ ಕೃಷಿ ವಸ್ತುಗಳು ಹೊರ ರಾಜ್ಯಗಳಿಂದ ಬರುತ್ತಿದ್ದು, ಇದಕ್ಕಾಗಿ ಪ್ರತಿ ವರ್ಷ ಕೋಟ್ಯಂತರ ರೂ. ತೆರುವಂತಾಗುತ್ತಿದೆ. ನಮ್ಮ ರಾಜ್ಯದಲ್ಲಿ ಈ ಕೃಷಿ ಚಟುವಟಿಕೆ ನಡೆಸಿದರೆ, ಹೊಸ ಉದ್ಯೋಗದ ಜೊತೆಗೆ ರೈತರ ಆದಾಯವನ್ನು ಹೆಚ್ಚಿಸುತ್ತದೆ. ಆದರೆ, ಗ್ರಾಮದಲ್ಲಿರುವ ಎಲ್ಲ ಪಾಳು ಭೂಮಿಯನ್ನು ಸಾಗುವಳಿ ವ್ಯಾಪ್ತಿಗೆ ತರಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು. ಇದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲು ಸರಕಾರ ಸಿದ್ಧವಿದೆ. ಸ್ವಯಂಪೂರ್ಣ ಮಿತ್ರ ಅವರ ಗ್ರಾಮ ರೈತರ ತಂಡ ಮತ್ತು ಸ್ಥಳೀಯ ಆಡಳಿತ ಮತ್ತು ಬಿಚೋಲಿಮ್ ಆಗ್ರೋ ಪ್ರೊಡ್ಯೂಸರ್ ಕಂಪನಿಯ ಸಹಾಯದಿಂದ ಈ ಉಪಕ್ರಮವು ಯಶಸ್ವಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗೋವಾ ಸ್ವಾವಲಂಬಿಯಾಗಲಿದೆ…!
ಸಾಮಾಜಿಕ ಅರ್ಥಶಾಸ್ತ್ರ ಮತ್ತು ಮಾಧ್ಯಮ ಸಲಹೆಗಾರ ಪ್ರತಾಪ ಪಾಟೀಲ ಮಾತನಾಡಿ, ಸ್ವಾವಲಂಬಿ ಗೋವಾ ಗುರಿ ಸಾಧಿಸಬೇಕಾದರೆ ಗೋವಾದ ಪ್ರಮುಖ ಅಭಿವೃದ್ಧಿ ಸಾಧನಗಳಾದ ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ಪ್ರವಾಸೋದ್ಯಮದತ್ತ ಗಮನ ಹರಿಸಬೇಕು. ಈ ವಲಯದಲ್ಲಿರುವ ನ್ಯೂನತೆಗಳನ್ನು ಹೋಗಲಾಡಿಸಿ ಅಗತ್ಯ ತಾಂತ್ರಿಕ ಮತ್ತು ಪ್ರೇರಕ ತರಬೇತಿ ನೀಡಿ ಅಗತ್ಯ ಮೂಲಸೌಕರ್ಯ ಕಲ್ಪಿಸಿದರೆ ಕಡಿಮೆ ಅವಧಿಯಲ್ಲಿ ಗೋವಾ ಎಲ್ಲ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Mangaluru; ರೌಡಿಗಳ ಪರೇಡ್ : 262 ಮಂದಿಗೆ ನಗರ ಪೊಲೀಸ್ ಆಯುಕ್ತರ ವಾರ್ನಿಂಗ್