ಪಣಜಿ: ಗೋವಾದ ಬಿಜೆಪಿ ನಾಯಕ ವಿಶ್ವಜಿತ್ ಕೃಷ್ಣರಾವ್ ರಾಣೆ ಅವರು ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಗೋವಾದ ಸಾಲೇಲಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷ ಸೇರ್ಪಡೆಯಾದರು.
ಈ ವೇಳೆ ಮಾತನಾಡಿದ ಕೇಜ್ರಿವಾಲ್ ಅವರು,ಸಾಲೇಲಿ ಕ್ಷೇತ್ರದ ಹಾಲಿ ಶಾಸಕ ಪ್ರತಾಪ್ ಸಿಂಗ್ ರಾಣೆ 50 ವರ್ಷಗಳ ಕಾಲ ಕ್ಷೇತ್ರದ ಪ್ರತಿನಿಧಿಯಾಗಿ, 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮಾಡಿದ್ದು ಏನೂ ಇಲ್ಲ.ಕ್ಷೇತ್ರದಲ್ಲಿ ಬದಲಾವಣೆ ಅಗತ್ಯವಿದೆ ಎಂದರು.
ಗೋವಾ ರಾಜ್ಯದ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಅಗತ್ಯವಿದೆ. ನಾನು ನಾಯಕನಲ್ಲ, ನಿಮ್ಮಂತೆಯೇ ಒಬ್ಬ ಆಮ್ ಆದ್ಮಿ, ಇದರಿಂದಾಗಿ ಆಮ್ ಆದ್ಮಿಯ ಸಮಸ್ಯೆ ಏನಿರುತ್ತದೆ ಎಂಬ ಪೂರ್ಣ ಮಾಹಿತಿ ನನಗಿದೆ. ಗೋವಾದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನತೆ ಬದಿಗಿಟ್ಟು ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಸ್ಥಾಪಿಸಲು ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಇಷ್ಟು ವರ್ಷ ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪಾಳಿ ಪ್ರಕಾರದಂತೆ ಅಧಿಕಾರಕ್ಕೆ ಬರುತ್ತಿವೆ, ಇದರಿಂದಾಗಿ ಬೃಹತ್ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದು ಕಳೆದ ಏಳು ವರ್ಷಗಳಿಂದ ಈ ಎರಡೂ ಪಕ್ಷಗಳನ್ನು ಅಧಿಕಾರದಿಂದ ದೂರವಿಟ್ಟಿದೆ. ಇದರಿಂದಾಗಿ ದೆಹಲಿಯಲ್ಲಿ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗಿದೆ. ಕಳೆದ 7 ವರ್ಷಗಳಲ್ಲಿ ದೆಹಲಿಯಲ್ಲಿ 10,000 ಉದ್ಯೋಗಗಳನ್ನು ಸೃಷ್ಠಿ ಮಾಡಲಾಗಿದೆ. ಅದರಂತೆಯೇ ಗೋವಾದಲ್ಲಿಯೂ ಕೂಡ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಹೊಸ ಉದ್ಯೋಗ ಸೃಷ್ಠಿ ಮಾಡಲಾಗುವುದು. ನಿರುದ್ಯೋಗಿಗಳಿಗೆ 3000 ರೂ ಮಾಸಿಕ ಭತ್ತೆ ನೀಡಲಾಗುವುದು. ಉಚಿತ ವಿದ್ಯುತ್, ಉಚಿತ ಕುಡಿಯುವ ನೀರು, ಉತ್ತಮ ದರ್ಜೆಯ ಸರ್ಕಾರಿ ಶಾಲೆ, ನಿರ್ಮಿಸಲಾಗುವುದು ಎಂದು ಅರವಿಂದ ಕೇಜ್ರಿವಾಲ್ ಭರವಸೆ ನೀಡಿದರು.
ವೇದಿಕೆಯಲ್ಲಿ ಮಾಜಿ ಸಚಿವ ಮಹಾದೇವ ನಾಯ್ಕ, ಸತ್ಯವಿಜಯ್ ನಾಯ್ಕ, ವಕೀಲ ಅಮಿತ್ ಪಾಲಯೇಕರ್, ಮತ್ತಿತರರು ಉಪಸ್ಥಿತರಿದ್ದರು.