ಮೈಸೂರು: ದಲಿತರ ಮನೆಯಲ್ಲಿ ನಾನು ಊಟ-ತಿಂಡಿ ಮಾಡುತ್ತಿರುವುದನ್ನು ಸಹಿಸದೆ ಹಗುರವಾಗಿ ಮಾತನಾಡುತ್ತಿದ್ದೀರಾ, ನೀವು ದಲಿತರ ಮನೆಯಲ್ಲಿ ಊಟ-ತಿಂಡಿ ಮಾಡುವುದಿರಲಿ, ದಲಿತರ ಕಾಲೋನಿಗೆ ಎಂದಾದರೂ ಹೋಗಿ ಅವರ ಕಷ್ಟ ಸುಖ ವಿಚಾರಿಸಿದ್ದೀರಾ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ನಗರದ ಕುರಿಮಂಡಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬಿಜೆಪಿ ನಡಿಗೆ-ದಲಿತರ ಕಡೆಗೆ ದಲಿತರೊಂದಿಗೆ ಸಂವಾದದಲ್ಲಿ ಮಾತನಾಡಿ, ಜನ ಸಂಪರ್ಕಯಾತ್ರೆಯ ಸಂದರ್ಭದಲ್ಲಿ ನಿತ್ಯ ದಲಿತರ ಮನೆಯಲ್ಲಿ ಊಟ-ತಿಂಡಿ ಮಾಡುತ್ತಿದ್ದೇನೆ. ಇದನ್ನು ಸಹಿಸದ ಸಿಎಂ ಸಿದ್ದರಾಮಯ್ಯ ಮತ್ತು ಮಂತ್ರಿಗಳು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಊಟ-ತಿಂಡಿಯ ಜತೆಗೆ ದಲಿತರ ಕಾಲೋನಿಗಳಲ್ಲಿ ಅವರ ಕಷ್ಟ-ಸುಖಗಳನ್ನು ಕೇಳುತ್ತಿದ್ದೇನೆ. ಅವರ ಸಮಸ್ಯೆ ಆಲಿಸುತ್ತಿದ್ದೇನೆ. ಕೊಳಗೇರಿ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಕೊಡಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ. ಇದರಿಂದಾಗಿ ಕೊಳಗೇರಿಗಳು, ದಲಿತರ ಕಾಲೋನಿಗಳ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂತು. ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲೇ ಈ ಸಮಸ್ಯೆ ಇದೆ ಎಂದರೆ, ಸರ್ಕಾರ ಇದೆಯೋ, ಇಲ್ಲವೋ ಎಂದು ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಅವಕಾಶ ಕೊಡದ ಕಾಂಗ್ರೆಸ್ ನಾಯಕರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಡಾ.ಬಾಬೂ ಜಗಜೀವನ್ ರಾಮ್‌ಗೆ ಪ್ರಧಾನಮಂತ್ರಿಯಾಗಲು ಅವಕಾಶ ಕೊಡಲಿಲ್ಲ. ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ಕೊಡಲು ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರವೇ ಬರಬೇಕಾಯಿತು ಎಂದರು.
ಗರೀಬಿ ಹಠಾವೋ ಘೋಷಣೆಯಿಂದ ಕಾಂಗ್ರೆಸ್‌ಗೆ ಲಾಭವಾಯೆ ಹೊರತು ಬಡವರಿಗೆ ಆಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಹುಟ್ಟಿದ ಸ್ಥಳ ಸೇರಿ ಐದು ಜಾಗವನ್ನು ಪಂಚತೀರ್ಥಕ್ಷೇತ್ರವೆಂದು ಘೋಷಿಸಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ. ಜತೆಗೆ ಬಡವರಿಗೆ ಅಡುಗೆ ಅನಿಲ ಸಂಪರ್ಕ ಕೊಡಲು ಶುರು ಮಾಡಿದೆ. ದೇಶದಲ್ಲಿ ನೀಡಲಾಗುತ್ತಿರುವ ಉತ್ತಮ ಆಡಳಿತ ಕರ್ನಾಟಕದಲ್ಲೂ ಬರಬೇಕಾದರೆ ಬಿಜೆಪಿ ಸರ್ಕಾರ ಬರಬೇಕು. ಹೀಗಾಗಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಅವರನ್ನು ಆಯ್ಕೆ ಮಾಡಿ ಪಕ್ಷಕ್ಕೆ ಬಲ ತುಂಬಿರಿ ಎಂದು ಮನವಿ ಮಾಡಿದರು.
ಮಾಜಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಬಿ.ಜೆ.ಪುಟ್ಟಸ್ವಾಮಿ, ಎಸ್.ಎ.ರಾಮದಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ, ಸಂಸದ ಪ್ರತಾಪ್ ಸಿಂಹ, ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಬಿ.ಎಂ.ನಟರಾಜು, ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್ ಇತರರು ಇದ್ದರು.