Advertisement

ತಮಾಷೆ ಹೋಗಿ ಅಮಾವಾಸ್ಯೆ ಆಗಿತ್ತು!

11:50 AM Mar 13, 2018 | Harsha Rao |

ಕಲಬುರಗಿಯ ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಆಗ ತಾನೇ ನನ್ನ ಬಿ.ಎಡ್‌ ದಿನಗಳು ಆರಂಭವಾಗಿದ್ದವು. ಆ ಸಮಯದಲ್ಲಿ ನಮ್ಮ ಕಾಲೇಜಿಗೆ ಹನುಮಂತರಾಯ ಎಂಬ ಪ್ರವಚಕರೊಬ್ಬರು ಮಂಗಳೂರಿನಿಂದ ವರ್ಗವಾಗಿ ಬಂದಿದ್ದರು. ಅವರು ಮೂಲತಃ ನೆಲಮಂಗಲದವರು. ಅವರು ಕ್ಲಾಸ್‌ರೂಮಿಗೆ ಬರುವುದೇ ಬಲು ಅಪರೂಪವಾಗಿತ್ತು.

Advertisement

ಯಾರಾದರೂ ಉಪನ್ಯಾಸಕರು ರಜೆ ಇದ್ದಾಗ ಮಾತ್ರ ಅವರ ಆಗಮನವಾಗುತ್ತಿತ್ತು. ಅವರೊಬ್ಬ ಮಹಾನ್‌ ವಿದೂಷಕ. ಪ್ರತಿ ಮಾತಿನಲ್ಲೂ ನಗು ತರಿಸುವ ತಾಕತ್ತು ಅವರಲ್ಲಿತ್ತು. ಅವರು ಕ್ಲಾಸಿನಲ್ಲಿದ್ದಷ್ಟು ಹೊತ್ತು ನಮಗೆಲ್ಲಾ ಅನಿಯಮಿತ ಖುಷಿ ಸಿಗುತ್ತಿತ್ತು. ನಾವೆಲ್ಲರೂ ಉತ್ತರ ಕರ್ನಾಟಕದವರಾಗಿದ್ದರಿಂದ ಅವರ ಬೆಂಗಳೂರು ಮತ್ತು ಮಂಗಳೂರು ಶೈಲಿಯ ಕನ್ನಡ ನಮ್ಮನ್ನು ಆಕರ್ಷಿಸಿತ್ತು. ಅವರು ಬರೀ ಪಠ್ಯದ ವಿಷಯವನ್ನು ಹೇಳದೆ ಪಠ್ಯೇತರ ವಿಷಯದ ಬಗ್ಗೆಯೂ ನಮ್ಮೆಲ್ಲರ ಜೊತೆ ನೇರ ಚರ್ಚೆ ಮಾಡುತ್ತಿದ್ದರು. ಚಿತ್ರ ವಿಚಿತ್ರವಾದ ಹಾವಭಾವದೊಂದಿಗೆ ಸಿನಿಮಾ, ಜನಪದ ಗೀತೆಗಳನ್ನು ಹಾಡುತ್ತಾ ಹಾಸ್ಯ ಮಿಶ್ರಿತ ಪ್ರಶ್ನೆಗಳನ್ನು ಕೇಳಿ ನಮ್ಮನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದರು. ಈ ಕಾರಣದಿಂದಲೇ ಅವರನ್ನು ನಾವೆಲ್ಲಾ ಸ್ವಲ್ಪ ಜಾಸ್ತಿಯೇ ಹಚ್ಚಿಕೊಂಡಿದ್ದೆವು. ವಾರಕ್ಕೆ ಎರಡು ಬಾರಿಯಾದರೂ ಅವರ ಕ್ಲಾಸ್‌ ಇರಲಿ ಎಂದು ಪ್ರಾರ್ಥಿಸುತ್ತಿದ್ದೆವು.

ಅದೊಂದು ದಿನ ನಾವು ಕ್ಲಾಸಿನೊಳಗೆ ಬಂದು ಹದಿನೈದು ನಿಮಿಷ ಕಳೆದರೂ ನಮ್ಮ ಮೊದಲನೇ ಅವಧಿಯ ಉಪನ್ಯಾಸಕರು ಬರಲಿಲ್ಲ. ಆಗ ನಾನೂ ಸೇರಿದಂತೆ ಗೆಳೆಯರ ಬಳಗವೆಲ್ಲ ಚೇಷ್ಟೆ, ಕುಚೇಷ್ಟೆ ಮಾಡುತ್ತಾ ಸಂತೋಷದಲ್ಲಿ ಮುಳುಗಿಹೋಗಿದ್ದೆವು. ನಾವು ತರ್ಲೆ ಕೆಲಸ ಮಾಡುವ ಭರದಲ್ಲಿದ್ದಾಗಲೇ ಹನುಮಂತರಾಯ ಸರ್‌ ಬಂದುಬಿಟ್ಟಿದ್ದರು.

ನಾನು ಎಷ್ಟೊಂದು ಮೈ ಮರೆತಿದ್ದೆ ಎಂದರೆ, ಸರ್‌ ಬಂದಿದ್ದು ಗೊತ್ತಾಗದೆ ಅವರಿಗೆ ಎದ್ದು ನಿಂತು ಗೌರವ ಸೂಚಿಸುವುದನ್ನೂ ಮರೆತುಬಿಟ್ಟಿದ್ದೆ. ಅವರು ನನ್ನನ್ನು ನೋಡಿ, ನೇರವಾಗಿ ನನ್ನ ಹತ್ತಿರ ಬಂದೇಬಿಟ್ಟರು. ಅವರ ಬಿರುನೋಟ, ಡಯಾಸ್‌ ಮೇಲೆ ನಿಲ್ಲು ಎಂಬ ಆಜ್ಞೆ ನೀಡಿತ್ತು. ಮರುಕ್ಷಣವೇ- “ಯಾವ ಮುಟ್ಟಾಳನೋ ನಿಂಗೆ ಡಿಗ್ರಿ ಕೊಟ್ಟೋನು?’ ಅಂತ ಗುಡುಗಿದರು. ಆ ಸರ್‌ ಜೊತೆ ಸ್ವಲ್ಪ ಸಲುಗೆ ಇತ್ತು ಅಂದೆನಲ್ಲವೆ? ಅವರು ತಮಾಷೆಯಾಗಿ ಪಾಠ ಮಾಡುತ್ತಿದ್ದರು ಅಂದಿದ್ದೆನಲ್ಲವೆ? ಅದನ್ನೇ ನೆನಪು ಮಾಡಿಕೊಂಡು, ನನ್ನ ಉತ್ತರದಿಂದ ಅವರನ್ನು ನಗಿಸಬೇಕು ಎಂದುಕೊಂಡು ಮರುಕ್ಷಣವೇ- “ಗುಲ್ಬರ್ಗಾ ಯೂನಿವರ್ಸಿಟಿ ಸರ್‌’ ಎಂದು ಹೇಳಿಬಿಟ್ಟೆ! ಈ ಮಾತು ಕೇಳಿ ಅವರ ಕೋಪ ನೆತ್ತಿಗೇರಿ ಕೆಂಡಾಮಂಡಲರಾದರು. “ಹೋಗಲೋ ಮುಟ್ಟಾಳ, ಈ ಕ್ಷಣದಿಂದ ನೀನು ನಮ್ಮ ಕಾಲೇಜಿನ ವಿದ್ಯಾರ್ಥಿಯೇ ಅಲ್ಲ.ಇವತ್ತೇ ನಿನ್‌ ಟಿ.ಸಿ ತೆಗೆದುಹಾಕ್ತಿನಿ’ ಎಂದು ರೇಗಾಡಿ ನಮ್ಮ ಪ್ರಾಂಶುಪಾಲರು, ಸೇರಿದಂತೆ ಉಳಿದೆಲ್ಲಾ ಉಪನ್ಯಾಸಕರನ್ನು ಕರೆಸಿ ದೊಡ್ಡ ರಾದ್ಧಾಂತ ಮಾಡಿದರು.

ಈ ವಿಷಯ ತುಂಬಾ ಗಂಭೀರವಾಗುತ್ತಾ ಹೋಯಿತು. ದಿಗಿಲು ತುಂಬಿದ ಮನಸ್ಸಿನಿಂದ ಕಂಗಾಲಾಗಿ ಗೆಳೆಯ ಗೆಳತಿಯರ ಕಡೆ ನೋಡಿದೆ. ಎಲ್ಲರ ಮೊಗದಲ್ಲಿ ಮೌನ ಆವರಿಸಿತ್ತು. ಆಗ ಬೇರೇನೂ ತೋಚದೆ ಹನುಮಂತರಾಯ ಸರ್‌ ಮತ್ತು ಪ್ರಾಂಶುಪಾಲರ ಹತ್ತಿರ ಹೋಗಿ ಕ್ಷಮೆ ಕೇಳಿದೆ. ಆದರೂ ಆ ಸರ್‌ ಸಮಾಧಾನಗೊಳ್ಳದೆ ನನ್ನನ್ನು ಕಾಲೇಜಿನಿಂದ ಹೊರ ಹಾಕಲೇಬೇಕೆಂಬ ಹಠ ಹಿಡಿದರು. ಕೊನೆಗೆ ನಮ್ಮ ದೈಹಿಕ ಉಪನ್ಯಾಸಕರು ಹನುಮಂತರಾಯ ಸರ್‌ ಮನವೊಲಿಸಿ ನನ್ನನ್ನು ಕ್ಲಾಸಿನೊಳಗೆ ಕಳುಹಿಸಿದರು. ಹನುಮಂತರ ರಾಯ ಸರ್‌ನ ಹಾಸ್ಯಸ್ವಭಾವವನ್ನು ತಪ್ಪಾಗಿ ಭಾವಿಸಿ ಬೆಪ್ಪನಾದ ಆ ಘಳಿಗೆ ಸಂದು ಒಂಬತ್ತು ವರ್ಷಗಳಾದರೂ ನೆನಪಿನ ಬುತ್ತಿಯಲ್ಲಿ ಹಾಗೆಯೇ ಉಳಿದುಕೊಂಡಿದೆ.

Advertisement

-ಶಿವರಾಜ್‌ ಬಿ.ಎಲ್. ದೇವದುರ್ಗ

Advertisement

Udayavani is now on Telegram. Click here to join our channel and stay updated with the latest news.

Next