ಮಂಡ್ಯ/ತುಮಕೂರು: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ನಡೆಯತೊಡಗಿದೆ. ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಗಾಗಿ ಲಾಬಿ ಆರಂಭಗೊಂಡಿದೆ. ಏತನ್ಮಧ್ಯೆ ಕಾಂಗ್ರೆಸ್, ಜೆಡಿಎಸ್ ಮೈತ್ರಿಯ ಸೀಟು ಹಂಚಿಕೆ ಮತ್ತಷ್ಟು ಗೊಂದಲ ಹುಟ್ಟುಹಾಕಿದ್ದು, ದೇವೇಗೌಡರೇ ತುಮಕೂರಿಗೆ ಬರಬೇಡಿ, ಡಿಕೆಶಿ ಗೋ ಬ್ಯಾಕ್ ಎಂದು ಕಾಂಗ್ರೆಸ್ ಪಕ್ಷದಲ್ಲಿಯೇ ಹೋರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.
ಮೈತ್ರಿ ಧರ್ಮ ಪಾಲಿಸಿ, ಗೌಡರೇ ತುಮಕೂರಿಗೆ ಬರಬೇಡಿ:
ಎಚ್.ಡಿ.ದೇವೇಗೌಡರೇ ತುಮಕೂರಿಗೆ ಬರಬೇಡಿ. ಮೈತ್ರಿ ಧರ್ಮ ಪಾಲಿಸುವ ಮೂಲಕ ಮುದ್ದಹನುಮೇಗೌಡರಿಗೆ ಟಿಕೆಟ್ ಸಿಗಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅನ್ನು ಹಾಕಿದ್ದಾರೆ. ಅಲ್ಲದೇ ಗೋ ಬ್ಯಾಕ್ ದೇವೇಗೌಡರೇ ಎಂದು ಹೋರಾಟ ನಡೆಸಲು ಮುಂದಾಗಿರುವುದಾಗಿ ಜಾಲತಾಣದಲ್ಲಿ ಎಚ್ಚರಿಸಲಾಗಿದೆ.
ಗೋ ಬ್ಯಾಕ್ ಡಿಕೆಶಿ, ನಿಖಿಲ್ ಗೆ ಬೆಂಬಲ ಇಲ್ಲ; ಕಾಂಗ್ರೆಸ್
ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರು ಮಂಡ್ಯಕ್ಕೆ ಬಂದು ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಿ ಅಂತ ಹೇಳಿದರೆ ಹೇಗೆ ಮಾಡಲು ಸಾಧ್ಯ ಹೇಳಿ. ಹೈಕಮಾಂಡ್ ಹೇಳುತ್ತೆ ಅಂತ ನಾವು ಜೆಡಿಎಸ್ ಗೆ ಬೆಂಬಲ ನೀಡಿದರೆ, ನಾಳೆ ನಮ್ಮ ಕಾರ್ಯಕರ್ತರು ನಮಗೆ ಹೊಡೆಯುತ್ತಾರೆ..ಹೀಗಾಗಿ ಗೋ ಬ್ಯಾಕ್ ಡಿಕೆಶಿ ಅಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಮಂಡ್ಯದ ಕಾಂಗ್ರೆಸ್ ಮುಖಂಡ ಅನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ನಾವು ನಿಖಿಲ್ ನನ್ನು ಬೆಂಬಲಿಸುವುದಿಲ್ಲ, ಬೇಕಿದ್ದರೆ ಡಿಕೆ ಶಿವಕುಮಾರ್ ಅವರು ರಾಮನಗರದಲ್ಲಿ ನಿಲ್ಲಿಸಿ ಗೆಲ್ಲಿಸಲಿ. ಒಂದು ವೇಳೆ ಡಿಕೆಶಿ ಜೆಡಿಎಸ್ ಏಜೆಂಟ್ ಆಗಿ ಬಂದರೆ ಗೋ ಬ್ಯಾಕ್ ಡಿಕೆಶಿ ಅಂತ ಅಭಿಯಾನ ಮಾಡುವುದಾಗಿ ಎಚ್ಚರಿಸಿದ್ದಾರೆ.