ಹೊಸದಿಲ್ಲಿ: ಟೈಮ್ಸ್ ಹೈಯರ್ ಎಜುಕೇಶನ್(ಟಿಎಚ್‌ಇ)ನ ಜಾಗತಿಕ ವಿಶ್ವವಿದ್ಯಾನಿಲಯ ರ್‍ಯಾಂಕಿಂಗ್‌ನಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್‌ಸಿ) 301ರಿಂದ 350ರೊಳಗಿನ ಸ್ಥಾನ ಪಡೆದಿದ್ದು, ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನ ಸಂಸ್ಥೆ ಹಾಗೂ ಐಐಟಿ ರೋಪಾರ್ 351-400ರೊಳಗಿನ ಸ್ಥಾನಗಳನ್ನುಗಳಿಸಿವೆ.
ದೇಶದ 7 ಐಐಟಿಗಳು ಈ ಬಾರಿಯೂ ಟಿಎಸ್‌ಇ ರ್‍ಯಾಂಕಿಂಗ್‌ಗೆ ಬಹಿಷ್ಕಾರ ಹೇರಿರುವ ಕಾರಣ, ಟಾಪ್ 300ರಲ್ಲಿ ಭಾರತದ ಯಾವ ಶಿಕ್ಷಣ ಸಂಸ್ಥೆಯೂ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
ಒಟ್ಟಾರೆಯಾಗಿ ಜಗತ್ತಿನ ಟಾಪ್ 1,000 ವಿವಿಗಳ ಪಟ್ಟಿಯಲ್ಲಿ ಭಾರತದ 35 ವಿವಿಗಳು ಇವೆ. ಕಳೆದ ವರ್ಷ ಈ ಸಂಖ್ಯೆ 36 ಆಗಿತ್ತು. ಜಾಗತಿಕವಾಗಿ ಆಕ್ಸ್ ಫರ್ಡ್ ವಿವಿಯು ಸತತ 6ನೇ ವರ್ಷವೂ ಅಗ್ರ ವಿವಿ ಎಂಬ ಪಟ್ಟ ಪಡೆದಿದೆ. ಈ ಹಿಂದಿನ ರ್‍ಯಾಂಕಿಂಗ್ ವೇಳೆ ಭಾರತದ ಯಾವುದೇ ಐಐಟಿ ಕೂಡ 300 ರೊಳಗಿನ ರ್‍ಯಾಂಕಿಂಗ್ ಪಡೆದಿರಲಿಲ್ಲ. ಈ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಐಐಟಿ ಮುಂಬಯಿ, ದಿಲ್ಲಿ, ಕಾನ್ಪುರ, ಗುವಾಹಾಟಿ, ಮದ್ರಾಸ್, ರೂರ್ಕಿ ಮತ್ತು ಖರಗ್ಪುರಗಳು, ಪಟ್ಟಿ ತಯಾರಿಸುವ ವೇಳೆ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿ ಈ ರ್‍ಯಾಂಕಿಂಗ್‌ನಲ್ಲಿ ಭಾಗವಹಿಸಿರಲಿಲ್ಲ. ಈ ಬಾರಿಯೂ 7 ಐಐಟಿಗಳು ಬಹಿಷ್ಕಾರವನ್ನು ಮುಂದುವರಿಸಿದ್ದವು.
ಈ ಕಾಲೇಜಿನ ಪ್ರವೇಶಕ್ಕೆ ಶೇ. 99 ಅಂಕ ಕಡ್ಡಾಯ! :
ಎಲ್ಲ ವಿಷಯಗಳಲ್ಲೂ ಶೇ. 99 ಅಂಕ ಇದ್ದರಷ್ಟೇ, ಈ ಕಾಲೇಜಿನ ಸೀಟು ಪಕ್ಕಾ! ಹೌದು… ದಿಲ್ಲಿ ವಿವಿಯ ಸೇಂಟ್ ಸ್ಟೀಫನ್ಸ್ ಕಾಲೇಜು ಈ ಬಾರಿ ಬಿಎ ಪದವಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಶೇ.99 ಅಂತಿಮ ಅಂಕ ನಿಗದಿಗೊಳಿಸಿದೆ! ಅದರಲ್ಲೂ ಬಿ.ಎ. ಅರ್ಥಶಾಸ್ತ್ರ ಪ್ರವೇಶಿಸಲು ದ್ವಿತೀಯ ಪಿಯುಸಿಯಲ್ಲಿ ಶೇ.99.5, ಬಿ.ಎ. ಇಂಗ್ಲಿಷ್ ಐಚ್ಛಿಕ ವಿಷಯ ಶೇ.99 ಅಂಕ ಹೊಂದಿರುವು ದನ್ನು ಕಡ್ಡಾಯಗೊಳಿಸಿದೆ. ಉಳಿದಂತೆ ಬಿಎಸ್ಸಿ ಭೌತಶಾಸ್ತ್ರ ಶೇ. 97.66, ಬಿ.ಎಸ್ಸಿ. ರಾಸಾಯನ ಶಾಸ್ತ್ರ ಪ್ರವೇಶಕ್ಕೆ ಶೇ.96.3 ಅಂಕ ಅಂತಿಮಗೊಳಿಸಿದೆ. ಬಿಎ ಸಂಸ್ಕೃತಕ್ಕೆ ಮಾತ್ರ ಶೇ.69 ಅಂತಿಮ ಅಂಕ ನಿಗದಿಗೊಳಿಸಿದೆ.