ಮುಂಬಯಿ: ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(ಒಇಸಿಡಿ)ಯಡಿ ಶನಿವಾರ ಅಂತಾರಾಷ್ಟ್ರೀಯ ತೆರಿಗೆಗೆ ಸಂಬಂಧಿಸಿ ನಡೆದ ಸಭೆಯಲ್ಲಿ ಬಹುರಾಷ್ಟ್ರೀಯ ವ್ಯವಹಾರ ಸಂಸ್ಥೆ (ಎಂಎನ್‌ಇ)ಗಳಿಗೆ 2023ರಿಂದ ವಿವಿಧ ದೇಶಗಳಲ್ಲಿ ಕನಿಷ್ಠ ಶೇ. 15 ತೆರಿಗೆ ವಿಧಿಸುವ ನಿರ್ಣಯಕ್ಕೆ ಬರಲಾಗಿದೆ. ಅಂತಾರಾಷ್ಟ್ರೀಯ ತೆರಿಗೆ ವಿಚಾರದಲ್ಲಿ ಇದು ಐತಿಹಾಸಿಕ ನಿರ್ಣಯ.
ಹಲವು ವರ್ಷಗಳ ಕಾಲ ನಡೆದ ಮಾತುಕತೆಗಳ ಬಳಿಕ ಒಇಸಿಡಿ ಮತ್ತು ಜಿ-20 ಕೂಟ ಗಳ ಸದಸ್ಯರಾದ 130 ದೇಶಗಳು ಈ ನಿರ್ಣಯವನ್ನು ಪಾಲಿಸಲು ಸಮ್ಮತಿಸಿವೆ. ಈ ಪ್ರಸ್ತಾವದ ಆರಂಭ ಕಾಲದಿಂದಲೇ ಭಾರತ ಇದರ ಪರವಾಗಿತ್ತು.
ಇದರಡಿ ಎರಡು ಪ್ರಮುಖ ನಿರ್ಣಯಗಳನ್ನು ತೆಗೆದು ಕೊಳ್ಳಲಾಗಿದೆ. ಒಂದನೆಯದು, ಎಂಎನ್‌ಇಗಳ 125 ಶತಕೋಟಿ ಡಾಲರ್‌ಗಿಂತ ಹೆಚ್ಚು ಮೊತ್ತದ ವ್ಯವಹಾರದ ಮೇಲೆ ತೆರಿಗೆ ವಿಧಿಸುವ ಹಕ್ಕು ಅವು ಎಲ್ಲಿ ಮಾರುಕಟ್ಟೆ ಹೊಂದಿವೆಯೋ ಆ ದೇಶಗಳಿಗೆ ಸಿಗಲಿದೆ. ಇದರಿಂದಾಗಿ ಅವು ಎಲ್ಲಿ ವ್ಯವಹರಿಸಿ ಲಾಭ ಗಳಿಸುತ್ತವೆಯೋ ಅಲ್ಲೇ ನ್ಯಾಯಯುತವಾಗಿ ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದಾಗಿ ಭಾರತದಂತಹ ಅಭಿವೃದ್ಧಿಶೀಲ ದೇಶಗಳ ತೆರಿಗೆ ಆದಾಯ ಹೆಚ್ಚಲಿದೆ.
ಇದನ್ನೂ ಓದಿ:ಐಟಿ ದಾಳಿಯ ಹಿಂದೆ ಅನೇಕ ಲೆಕ್ಕಾಚಾರ: ಡಿ.ಕೆ.ಶಿವಕುಮಾರ್
ಎರಡನೆಯದು, ಶೇ. 15 ಜಾಗತಿಕ ಕನಿಷ್ಠ ಕಾರ್ಪೊರೆಟ್ ತೆರಿಗೆ ದರ. ಇದರಿಂದಾಗಿ ಗೂಗಲ್, ಫೇಸ್‌ಬುಕ್‌ನಂತಹ ದೈತ್ಯ ಕಂಪೆನಿ ಗಳು ಕಾರ್ಪೊರೆಟ್ ತೆರಿಗೆ ಕಡಿಮೆ ಇರುವ ದೇಶಗಳಲ್ಲಿ ತೆರಿಗೆ ಪಾವತಿಸಿ ಲಾಭ ಮಾಡಿ ಕೊಳ್ಳುವುದು ತಪ್ಪಲಿದೆ.