ಸಿಡ್ನಿ: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಟಕ್ಕೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಗಾಯಾಳುಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಾಂಗರೂಗಳ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸವೆಲ್ ಅವರು ಪಾದದ ಗಾಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಗ್ಲೆನ್ ಮ್ಯಾಕ್ಸವೆಲ್ ಅವರು ಡರ್ಬನ್ ನಲ್ಲಿ ಅಭ್ಯಾಸ ನಡೆಸುತ್ತಿರುವಾಗ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯದ ತೀವ್ರತೆ ಹೆಚ್ಚೇನೂ ಇಲ್ಲದಿದ್ದರೂ ಮುಂಬರುವ ವಿಶ್ವಕಪ್ ಕೂಟವನ್ನು ಗಮನದಲ್ಲಿರಿಸಿ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ:Gruha Lakshmi ಯೋಜನೆಯಲ್ಲಿ ಅಂಗನವಾಡಿ – ಆಶಾ ಕಾರ್ಯಕರ್ತೆಯರಿಗೂ ಹಣ: ಲಕ್ಷ್ಮೀ ಹೆಬ್ಬಾಳ್ಕರ್
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಲಗೈ ಬ್ಯಾಟರ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಬಳಿಕ ತವರಿಗೆ ಮರಳಲಿದ್ದರು. ಅವರು ಏಕದಿನ ಸರಣಿಗೆ ತನ್ನ ಅಲಭ್ಯತೆಯನ್ನು ಆರಂಭದಲ್ಲೇ ತಿಳಿಸಿದ್ದರು. ಆದರೆ ಇದೀಗ ಗಾಯದ ಕಾರಣದಿಂದ ಟಿ20 ಸರಣಿಯನ್ನೂ ಅವರು ತಪ್ಪಿಸಿಕೊಳ್ಳಲಿದ್ದಾರೆ.
ವಿಶ್ವಕಪ್ ಗೂ ಮೊದಲು ಉಪಖಂಡದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಸರಣಿಯ ವೇಳೆ ಗ್ಲೆನ್ ಮ್ಯಾಕ್ಸವೆಲ್ ಗುಣಮುಖರಾಗುವ ಸಾಧ್ಯತೆಯಿದೆ. ಭಾರತದ ನೆಲದಲ್ಲಿ ಉತ್ತಮ ದಾಖಲೆ ಹೊಂದಿರುವ ಮ್ಯಾಕ್ಸವೆಲ್ ಅವರ ಲಭ್ಯತೆಯನ್ನು ಆಸೀಸ್ ಎದುರು ನೋಡುತ್ತಿದೆ.
ಮ್ಯಾಥ್ಯೂ ವೇಡ್ ಸೇರ್ಪಡೆ: ಗ್ಲೆನ್ ಮ್ಯಾಕ್ಸವೆಲ್ ಅವರ ಅಲಭ್ಯತೆಯ ಕಾರಣದಿಂದ ಕ್ರಿಕೆಟ್ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇಂಗ್ಲೆಂಡ್ ನಲ್ಲಿ ನಡೆದ ಹಂಡ್ರಡ್ ಕೂಟದಲ್ಲಿ ಆಡಿದ್ದ ವೇಡ್ ಇದೀಗ ರಾಷ್ಟ್ರೀಯ ತಂಡ ಕೂಡಿಕೊಳ್ಳಲಿದ್ದಾರೆ. ಬುಧವಾರದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ.