Advertisement

ಆಧುನಿಕ ಭರಾಟೆಯಲ್ಲಿ ಬಯಲಾಟ ಮೂಲೆಗುಂಪು

09:59 AM Feb 01, 2019 | |

ಹೂವಿನಹಡಗಲಿ: ಪ್ರಸ್ತುತ ಇಂದಿನ ದಿನಗಳಲ್ಲಿ ಆಧುನಿಕ ಭರಾಟೆಯಲ್ಲಿ ನಮ್ಮ ಪೂರ್ವಿಕರ ಕಲೆಯಾದ ಬಯಲಾಟ ಮೂಲೆ ಗುಂಪಾಗುತ್ತಿರುವುದು ನಿಜಕ್ಕೂ ವಿಷಾದನೀಯ ಎಂದು ಜಿಬಿಆರ್‌ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ್‌ರೆಡ್ಡಿ ಆತಂಕ ವ್ಯಕ್ತಪಡಿಸಿದರು.

Advertisement

ಇಲ್ಲಿನ ಜಿಬಿಆರ್‌ ಕಾಲೇಜಿನಲ್ಲಿ ಗಾಂಧೀಜಿ ಸೇವಾ ಸಂಸ್ಥೆ ಕೊಂಬಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ| ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು, ಕರ್ನಾಟಕ ಜಾನಪದ ವಿವಿ ಮತ್ತು ಕರ್ನಾಟಕ ದೊಡ್ಡಾಟ ಟ್ರಸ್ಟ್‌ ಗೋಟಗೋಡಿ, ಜಿಬಿಆರ್‌ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಮಹಾತ್ಮ ಗಾಂಧಿ 150ನೇ ವರ್ಷಾಚರಣೆ ಹಾಗೂ ಹುತಾತ್ಮರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಯಲಾಟ ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಪ್ರಾತ್ಯಕ್ಷಿತೆ ಹಾಗೂ ಬಯಲಾಟ ಉತ್ಸವ-2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಹಬ್ಬ-ಹರಿದಿನಗಳಲ್ಲಿ ಮಾತ್ರ ಬಯಲಾಟ ಕಲೆ ಸೀಮಿತವಾಗದೆ, ನಿರಂತರವಾಗಿ ನಡೆಯಬೇಕಿದೆ. ಬಯಲಾಟ, ಜಾನಪದ, ನಾಟಕಕ್ಕೆ ಅಕ್ಷರಸ್ಥರು ಬೇಕಾಗಿಲ್ಲ. ಇದರಲ್ಲಿ ಅತಿ ಹೆಚ್ಚು ಅನಕ್ಷರಸ್ಥರೆ ಉತ್ತಮ ಕಲಾವಿದರಾಗಿದ್ದಾರೆ ಎಂದು ತಿಳಿಸಿದರು.

ಚಲನಚಿತ್ರ, ಧಾರಾವಾಹಿ, ಮೊಬೈಲ್‌ ಗೀಳಿನಿಂದ ಜನ ಹೊರ ಬಂದು ದೊಡ್ಡಾಟ, ರಂಗಭೂಮಿ, ಜಾನಪದ ಕಲೆಯನ್ನು ಪ್ರೀತಿಸುವಂತಾಬೇಕಿದೆ. ಇಂದಿನ ಆಧುನಿಕ ತಂತ್ರಜ್ಞಾನದ ಕಾಲಕ್ಕೆ ಗ್ರಾಮೀಣ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ನಿವೃತ್ತ ಪ್ರಾಚಾರ್ಯ ಡಾ|ಕೆ.ರುದ್ರಪ್ಪ ಹಡಗಲಿಯಂತಹ ಗ್ರಾಮೀಣ ಭಾಗದಲ್ಲಿ ಡಾ| ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು ಆರಂಭಿಸಿ ಯುವಕರಿಗೆ ಕಲೆಯ ತರಬೇತಿ ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಯಲಾಟ ಸಂಕ್ಷಿಪ್ತ ಚರಿತ್ರೆ ಮತ್ತು ಪದಗಳ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕಾಲೇಜು ಪ್ರಾಧ್ಯಾಪಕ ಎನ್‌.ವರಕುಮಾರ ಗೌಡ, ಗಾಂಧೀಜಿ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿ ಅವರ ಆದರ್ಶಗಳನ್ನು ಬಿತ್ತುವಂತಹ ಕೆಲಸ ಮಾಡುತ್ತಿರುವ ಸಂಸ್ಥೆಯು ಬಯಲಾಟ ಕಾಲೇಜು ಆರಂಭಿಸಿ ಇಂದಿನ ಯುವ ಪೀಳಿಗೆಗೆ ಅಧ್ಯಯನ ಆಸಕ್ತಿ ಬೆಳೆಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.

Advertisement

ಹಳ್ಳಿಗಳಲ್ಲಿಯೂ ತೆರೆಮರೆ ಸರಿದಿರುವ ಬಯಲಾಟದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿಬೇಕಿದೆ. ಸಿನಿಮಾ ಜಗತ್ತು ಬಿಟ್ಟು, ನಮ್ಮ ನಡುವೆ ಇರುವ ಕಲಾತ್ಮಕ ಬದುಕಿನ ಶಕ್ತಿಯನ್ನು ಒಮ್ಮೆ ತಿರುಗಿ ನೋಡಬೇಕಿದೆ ಎಂದರು.

ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಜಿ.ಕೆ.ತಿಪ್ಪೇಸ್ವಾಮಿ ಮಾತನಾಡಿ, ಇಂದು ಬಯಲಾಟದಲ್ಲಿ ಗಟ್ಟಿತನ ಉಳಿದಿಲ್ಲ. 470 ವರ್ಷಗಳ ಇತಿಹಾಸ ಹೊಂದಿರುವ ಬಯಲಾಟ ಕಲೆ ರಾಜ್ಯದ ಮೂಕ್ಕಾಲು ಭಾಗದಲ್ಲಿದೆ. ಆದರೆ ಕರಾವಳಿ ಭಾಗದ ಯಕ್ಷಗಾನ ಕಲೆ ಕೇವಲ 3-4 ಜಿಲ್ಲೆಗಳಲ್ಲಿ ಮಾತ್ರ ಇದೆ. ಆದರೆ ಬಯಲಾಟ ಕಲೆ ಪರಿಷ್ಕರಣೆಯಾಗಿಲ್ಲ. ಆದ್ದರಿಂದ ಹಿಂದೆ ಉಳಿದಿದೆ. ಅದೇ ಯಕ್ಷಗಾನ ಕಲೆ ಬೇಗ ಪರಿಷ್ಕರಣೆಗೊಂಡು ಇಡೀ ವಿಶ್ವ ಮಟ್ಟದಲ್ಲಿ ಹೆಸರು ಗಳಿಸಿದೆ ಎಂದರು.

ಗಾಂಧೀಜಿ ಸೇವಾ ಸಂಸ್ಥೆ ಅಧ್ಯಕ್ಷೆ ಕೆ.ಕಮಲ ಅಧ್ಯಕ್ಷತೆ ವಹಿಸಿದ್ದರು. ಬಡೇಲಡಕು ಶಿವನಾಗ ದೊರೆ ಮಾತನಾಡಿದರು. ಬಯಲಾಟದ ಕಥಾ ಸಾಹಿತ್ಯ ಕುರಿತು ಹಟ್ಟಿ ಚಿನ್ನದ ಗಣಿ ಉಪನ್ಯಾಸಕಿ ಡಾ| ಎಚ್.ಮೂಗಮ್ಮ ಮಾತನಾಡಿದರು. ಬಯಲಾಟ ಸಂಗೀತ ವಾದ್ಯ ಪರಿಕರಗಳ ಬಳಕೆ ಕುರಿತು ಗದಗ ಪಂ| ಪುಟ್ಟರಾಜ ಗವಾಯಿಗಳ ಸಂಗೀತ ವಿದ್ಯಾಲಯದ ವಾಯಲಿನ್‌ ಉಪನ್ಯಾಸಕ ನಾರಾಯಣ ವಿ.ಅಕ್ಕಸಾಲಿ ಮಾತನಾಡಿದರು. ಡಾ| ಬಸವರಾಜ ಮಲಶೆಟ್ಟಿ ಬಯಲಾಟ ಕಾಲೇಜು ಪ್ರಾಚಾರ್ಯ ಡಾ| ಕೆ.ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದ್ಯ ಡಾ|ವೈ.ಜಂಬಣ್ಣ ಹಾಗೂ ಬಯಲಾಟ ಕಲಾವಿದರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹರಪನಹಳ್ಳಿ ಏಕಲವ್ಯ ಕಲಾ ತಂಡದವರ ಸ್ತ್ರೀ ಕುಣಿತ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next