ಉಳ್ಳಾಲ: ದೇರಳಕಟ್ಟೆಯ ಯೇನಪೊಯ ಆಸ್ಪತ್ರೆ ಬಳಿಯ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಎಂಟು ಕಾರುಗಳ ಗಾಜುಗಳನ್ನು ದುಷ್ಕರ್ಮಿಗಳ ಗುಂಪು ಪುಡಿಗೈದಿದ್ದು ಕಾರಿನೊಳಗೆ ಮಲಗಿದ್ದ ರೋಗಿಯೊಬ್ಬರ ಸಂಬಂಧಿಕರೊಬ್ಬರು ಗಾಯಗೊಂಡಿದ್ದಾರೆ.
ಕಾರಿನಲ್ಲಿದ್ದ ಘಾಲಿಬ್ ಹುಸೈನ್ ಗಾಯಗೊಂಡಿದ್ದು, ಸ್ಥಳೀಯವಾಗಿ ಕಾರ್ಯಾಚರಿಸುತ್ತಿರುವ ಗಾಂಜಾ ವ್ಯಸನಿ ದುಷ್ಕರ್ಮಿಗಳು ಈ ದಾಂಧಲೆಯನ್ನು ನಡೆಸಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ಯೇನೆಪೊಯ ಆಸ್ಪತ್ರೆ ವಠಾರದಲ್ಲಿ ಆಸ್ಪತ್ರೆಗೆ ಬರುವ ವಾಹನಗಳಿಗೆ ಖಾಸಗಿಯಾಗಿ ಖಾಲಿ ಜಾಗವನ್ನು ಬಾಡಿಗೆಗೆ ಪಡೆದು ಪಾರ್ಕಿಂಗ್ ವ್ಯವಸ್ಥೆ ನಡೆಸಲಾಗಿತ್ತು. ಪ್ರತೀ ರಾತ್ರಿ ಆಸ್ಪತ್ರೆಗೆ ಬರುವ ರೋಗಿಗಳ ವಾಹನ ಈ ಪಾರ್ಕಿಂಗ್‌ನಲ್ಲಿ ನಿಲ್ಲಿಸಲಾಗುತ್ತಿತ್ತು. ಇದೇ ರೀತಿ ನಿಲ್ಲಿಸಿದ್ದ ವಾಹನಗಳಿಗೆ ತಡರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿದ ದುಷ್ಕರ್ಮಿಗಳ ತಂಡ ಮಾರಕಾಯುಧಗಳಿಂದ ಗಾಜುಗಳನ್ನು ಪುಡಿಗೈದು ಹಆನಿಮಾಪಿ ಪರಾರಿಯಾದೆ., ಇದರಲ್ಲಿ ಒಂದು ಕಾರಿನಲ್ಲಿ ಮಲಗಿದ್ದ ಘಾಲಿಬ್‌ಗ ಗಾಜು ತಗಲಿ ಗಾಯವಾಗಿದೆ. ಜಖಂ ಗೊಂಡಿರುವ ಐದು ಕಾರುಗಳು ರೋಗಿಗಳ ಸಂಬಂಧಿಕರಿಗೆ ಸೇರಿದ್ದು, ಮೂರು ಕಾರುಗಳು ಆಸ್ಪತ್ರೆ ವೈದ್ಯರಿಗೆ ಸೇರಿದ್ದಾಗಿದೆ. ಈ ಕುರಿತು ಅನೆಸ್ತೀಯಾ ವಿಭಾಗದ ಡಾ| ಶೈನಾ ಹಾಗೂ ಡಾ| ಅನಾ ಜೆಸಿಕಾ ಮರಿಯಂ ಹಾಗೂ ಗಾಯಾಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ಔಟ್‌ಪೋಸ್ಟ್ ಬೇಕಿದೆ : ದೇರಳಕಟ್ಟೆಯಲ್ಲಿ ಆಸ್ಪತ್ರೆ ಪರಿಸರದಲ್ಲಿ ಹಲವಾರು ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿರುವ ತಂಡವೊಂದರ ಯುವಕರು ಗಾಂಜಾ ಮಾರಾಟ ಸಹಿತ ಆಸ್ಪತ್ರೆಗಳಿಗೆ ಭೇಟಿ ನೀಡುವ ಜನರಿಗೆ ತೊಂದರೆ ನೀಡುವ ಬಗ್ಗೆ ಅನೇಕ ದೂರುಗಳು ಬಂದಿವೆ. ಹೊರ ರಾಜ್ಯಗಳಿಂದ ಜಿಲ್ಲೆಗಳಿಂದ ದಿನವೊಂದಕ್ಕೆ ಸಾವಿರಾರು ಜನರು ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದು, ಕೆಲವರನ್ನು ಬೆದರಿಸಿ ಹಣವನ್ನು ಕೀಳುವ ತಂಡ ಅಡ್ಡಾದಿಡ್ಡಿ ವಾಹನ ಚಲಾಯಿಸುವುದು ಇದನ್ನು ಪ್ರಶ್ನಿಸಿದರೆ ಹೊಡೆಯುವ ಕೆಲಸವನ್ನು ಈ ತಂಡ ನಡೆಸುತ್ತಿದೆ. ರಾತ್ರಿ ವೇಳೆ ಖಾಲಿ ಜಾಗಗಳಲ್ಲಿ ಗಾಂಜಾ ವ್ಯಸನ ಮಾಡಿ ಇಂತಹ ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ. ಈ ಪ್ರದೇಶ ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವುದರಿಂದ ಪೊಲೀಸ್ ಔಟ್‌ಪೋಸ್ಟ್ ಆಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.