Advertisement

ಬದುಕಿಗೆ ಅನ್ನ ನೀಡುವುದು ಸಾಮಾನ್ಯ ಜ್ಞಾನ: ಅಣ್ಣಾಮಲೈ

10:10 PM Nov 16, 2019 | Team Udayavani |

ಪುತ್ತೂರು: ಪ್ರತಿಯೊಬ್ಬನ ಜೀವನದಲ್ಲಿ ಆತ ಅರಿತಿರುವ ಸಾಮಾನ್ಯ ಜ್ಞಾನ ಮುಖ್ಯವೆನಿಸುತ್ತದೆ. ಏಕೆಂದರೆ ಬದುಕಿಗೆ ಅನ್ನ ನೀಡುವುದು ಸಾಮಾನ್ಯ ಜ್ಞಾನ ಎಂದು ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಹೇಳಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನನ್ನ ದೇಶ – ನನ್ನ ಕನಸು ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

Advertisement

ಶಿಕ್ಷಣವನ್ನು ಪಡೆಯುವುದು ಮಾತ್ರವಲ್ಲ, ಅದರಲ್ಲಿ ಆಳವಾದ ಅಧ್ಯಯನವನ್ನು ಮಾಡುವುದು ಬಹು ಮುಖ್ಯ. ಯಾವುದೇ ವಿಷಯದಲ್ಲಿ ಅಥವಾ ಕ್ಷೇತ್ರದಲ್ಲಿ ನಾವು ಪರಿಣತರಾಗಬೇಕಾದ ಆವಶ್ಯಕತೆ ಇದೆ ಎಂದರು. ಹಸಿವು, ನೋವು ಗೊತ್ತಿರುವಾತ ಹಾಗೂ ನಿರೀಕ್ಷೆ ಇಲ್ಲದೆ ಕೆಲಸ ಮಾಡುವಾತ ಐಎಎಸ್‌, ಐಪಿಎಸ್‌ ಅಧಿಕಾರಿಯಾಗಲು ಸಾಧ್ಯ. ಕಷ್ಟ ಅನುಭವಿಸುವವನಿಗೆ ನೋವು ಅರ್ಥವಾಗುತ್ತದೆ ಹಾಗೂ ಜನರ ಪ್ರತಿ ಯೊಂದು ಕಷ್ಟಗಳನ್ನು ಅರಿಯುವ ಮನಸ್ಸು ಬರುತ್ತದೆ ಎಂದು ಹೇಳಿದರು.

ಎಲ್ಲದರ ಮೂಲವೂ ಒಂದೇ
ಧರ್ಮಗಳು ಹೇಳುವುದು ಏನು? ಯಾವಾಗ ಬಂದಿದ್ದು? ಅದರ ಮೂಲ ಉದ್ದೇಶವನ್ನು ಒಳಗಿದ್ದು ಅರಿತರೆ ಮಾತ್ರ ನಿಜವಾದ ಧರ್ಮ ಏನೆಂದು ತಿಳಿಯುತ್ತದೆ. ಧರ್ಮದ ಕುರಿತು ತಿಳಿದ, ಅರ್ಥೈಸಿದ ವಿಚಾರಗಳು ತಪ್ಪು ಎಂದು ತಿಳಿಯುತ್ತದೆ. ಆಗ ನಡೆಯುತ್ತಿರುವ, ಮುಂದೆ ನಡೆಯುವ ಕೋಮು ಗಲಭೆಗಳನ್ನು ತಡೆಯಬಹುದು. ಎಲ್ಲದರ ಮೂಲವೂ ಒಂದೇ ಹಾಗೂ ಅವು ಒಂದಲ್ಲ ಒಂದು ರೀತಿಯಲ್ಲಿ ವಿಜ್ಞಾನವನ್ನೇ ಹೇಳುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ| ಸಿ.ಕೆ. ಮಂಜುನಾಥ ಉಪಸ್ಥಿತರಿದ್ದರು. ವಿನಯ್‌ ಜಾಧವ್‌ ವಂದಿಸಿದರು. ಭೌತ ಶಾಸ್ತ್ರ ಉಪನ್ಯಾಸಕಿ ದೀಕ್ಷಿತಾ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಕೊನೆಯ ಬೆಂಚಿನವರು
ಕಾಲೇಜಿನ ತರಗತಿಯಲ್ಲಿ ಕೊನೆಯ ಬೆಂಚಿನಲ್ಲಿ ಕುಳಿತುಕೊಳ್ಳುವ ಮಕ್ಕಳು ಹೆಚ್ಚಾಗಿ ಗೆಲ್ಲುತ್ತಾರೆ ಎಂದು ಎಲ್ಲರೂ ಹೇಳುವ ಮಾತು. ಅವರು ಹೆಚ್ಚು ಯೋಚಿಸುವುದಿಲ್ಲ. ಆದರೆ ಜೀವನದಲ್ಲಿ ಒಮ್ಮೆ ಸಮಾಜದ ಮಾತುಗಳನ್ನು ಎದುರಿಸಿ ಏನಾದರೂ ಸಾಧಿಸಬೇಕು ಎಂಬ ಛಲ ಬರುತ್ತದೆ. ಅದುವೇ ಅವರ ಜೀವನದ ತಿರುವಿನ ಹಂತವಾಗುತ್ತದೆ. ಗೆಲ್ಲಲೇಬೇಕು ಎಂಬ ಹಠವನ್ನು ಹೊತ್ತುಕೊಂಡು ಮುನ್ನಡೆಯುತ್ತಾರೆ. ಚೆನ್ನಾಗಿ ಓದಿದರೆ ಗೆಲುವು ಲಭಿಸುತ್ತದೆ ಎಂದು ಅಣ್ಣಾಮಲೈ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next