ಮುಂದೇನು ಅಂತ ತೋಚದೆ ಗೊಂದಲವಾಗಿದೆ. ನಿನ್ನ ಎದುರು ನಿಂತು ಪ್ರೀತಿಯನ್ನು ಹೇಳಿಕೊಳ್ಳಲು ಧೈರ್ಯವೇ ಇಲ್ಲ. ಹಾಗಂತ ಸುಮ್ಮನೇ ಇದ್ದುಬಿಟ್ಟರೆ, ನನ್ನ ಮನಸ್ಸಿನ ಭಾವನೆ ನಿನಗೆ ಅರ್ಥವೇ ಆಗೋದಿಲ್ಲ.
ಇವತ್ತಿಗೆ ಸರಿಯಾಗಿ ಒಂದು ವರ್ಷವಾಯಿತು, ನೀನು ಈ ಕಾಲೇಜಿಗೆ ಸೇರಿ. ಆ ದಿನವನ್ನು ನಾನೆಂದಿಗೂ ಮರೆಯುವುದಿಲ್ಲ.
ಅವತ್ತು ನಾನು ಕಾರಣವೇ ಇಲ್ಲದೆ ಕ್ಯಾಂಪಸ್‌ನಲ್ಲಿ ಅಲೆದಾಡುತ್ತಿದ್ದೆ. ಜ್ಯೂನಿಯರ್ಗಳಿಂದ ಕ್ಯಾಂಪಸ್ ತುಂಬಿ ಹೋಗಿತ್ತು. “ಎಕ್ಸ್ ಕ್ಯೂಸ್ ಮಿ, ಇಲ್ಲಿ ಬಿ.ಕಾಂ ಸೆಕ್ಷನ್ ಎಲ್ಲಿದೆ?’ ಎಂಬ ಇಂಪಾದ ದನಿ ಕೇಳಿ, ಹಿಂದಿರುಗಿ ನೋಡಿದವನು ಅರೆಕ್ಷಣ ಕಳೆದು ಹೋಗಿಬಿಟ್ಟೆ. ಮುಂಗುರುಳು ಸರಿಸುತ್ತಾ, ಕೊಂಚ ಗಾಬರಿ, ಕೊಂಚ ಗಡಿಬಿಡಿಯಿಂದ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತಿದ್ದವಳು ಹುಡುಗಿಯೋ, ಅಪ್ಸರೆಯೋ ಅಂತ ಅನುಮಾನವಾಯ್ತು. ಎರಡೇ ಕ್ಷಣದಲ್ಲಿ “ಹಲೋ, ಬಿ.ಕಾಂ ಸೆಕ್ಷನ್ ಎಲ್ಲಿದೆ ಗೊತ್ತಾ?’ ಅಂತ ತುಸು ಕೋಪದ ಧ್ವನಿಯಲ್ಲಿ ಮತ್ತೆ ಕೇಳಿದಾಗ, ಮಾತು ಮರೆತಿದ್ದ ನಾನು ಎರಡನೇ ಮಹಡಿಯತ್ತ ಕೈ ತೋರಿಸಿದ್ದೆ. ಸೌಜನ್ಯಕ್ಕೂ ಒಂದು ಥ್ಯಾಂಕ ಹೇಳದೆ, ಮುಖ ತಿರುಗಿಸಿಕೊಂಡು ಹೋಗುವಾಗ, ಮುಂಗುರುಳ ಪಾಶದಲ್ಲಿ ನನ್ನ ಹೃದಯವನ್ನೂ ಕಟ್ಟಿಕೊಂಡು ಹೋಗಿಬಿಟ್ಟೆ…
ಆ ಕ್ಷಣದಲ್ಲಿ, ಖಾಲಿ ಸೈಟಿನಂತಿದ್ದ ಹೃದಯದಲ್ಲಿ ಒಲವಿನ ಅರಮನೆ ಕಟ್ಟಿ, ಆ ಅರಮನೆಗೆ ನಿನ್ನನ್ನೇ ರಾಣಿಯಾಗಿಸಬೇಕು ಎಂದು ನಾನು ತೀರ್ಮಾನಿಸಿಬಿಟ್ಟೆ. ನಾನು ಬಿ.ಎಸ್ಸಿ ಓದುತ್ತಿದ್ದರೂ, ಅಂದಿನಿಂದ ಬಿ.ಕಾಂ ತರಗತಿ ಎದುರು ಗಸ್ತು ಹೊಡೆಯತೊಡಗಿದೆ. ನೀನೋ, ಕ್ಲಾಸ್ ರೂಮಿನ ಮೊದಲನೇ ಬೆಂಚಿನಲ್ಲಿ ಕುಳಿತು, ಲಕ್ಷ್ಯಗೊಟ್ಟು ಪಾಠ ಕೇಳುವ ಹುಡುಗಿ. ತರಗತಿ ಎದುರು ನಿನಗಾಗಿ ಬಂದು ನಿಲ್ಲುವ ಬಡಪಾಯಿ ಕಣ್ಣಿಗೆ ಬೀಳ್ಳೋದಾದರೂ ಹೇಗೆ? ತರಗತಿಯ ಎದುರು ಓಡಾಡಿದರೆ ಪ್ರಯೋಜನವಿಲ್ಲ ಅಂತ ಖಾತ್ರಿಯಾದ ಮೇಲೆ, ಪ್ರತಿ ದಿನ ಕಾಲೇಜಿನ ಗೇಟಿನ ಬಳಿ ನಿನ್ನನ್ನು ಎದುರುಗೊಳ್ಳಲು ನಿಲ್ಲತೊಡಗಿದೆ. ನೋಡಿದವರಿಗೆ, ನಾನು ವಾಚ್‌ಮನ್ನೋ, ಸ್ಟೂಡೆಂಟೋ ಅಂತ ಡೌಟು ಬಂದಿರಬಹುದು.
ಕೊನೆಗೂ ಆ ದೇವರು ನಿನಗೆ ಒಳ್ಳೆಯ ಬುದ್ಧಿ ಕೊಟ್ಟ ಅನ್ನಿಸುತ್ತೆ. ಒಂದು ದಿನ ನೀನು ನನ್ನತ್ತ ಮುಗುಳು ನಗೆ ಬೀರಿದೆ. ಸ್ವರ್ಗಕ್ಕೆ ಮೂರೇ ಗೇಣು ಅಂತ ಖುಷಿಪಟ್ಟರೂ, ಮುಂದಿನ ಎರಡು ತಿಂಗಳು ಮತ್ತೇನೂ ಬದಲಾವಣೆಯಾಗಲಿಲ್ಲ.
ಆಮೇಲೊಂದಿನ ನೀನು, “ಇಂಗ್ಲಿಷ್ ನೋಟ್ಸ್ ಕೊಡ್ತೀರಾ?’ ಅಂತ ಕೇಳಿದಾಗ, ಕೂಡಲೇ ಬ್ಯಾಗಿನಿಂದ ನೋಟ್ ಬುಕ್ಕೊಂದನ್ನು ಹೊರಗೆಳೆದು ನಗುತ್ತಾ ಕೊಟ್ಟೆ. ನೀನು ನಗುತ್ತಲೇ ಅದನ್ನು ಪಡೆದು, ಥ್ಯಾಂಕ್ಸ್ ಹೇಳಿ ಹೊರಟೆ. ಮರುದಿನ ನೀನು, “ನಾನು ಕೇಳಿದ್ದು ಇಂಗ್ಲಿಷ್ ನೋಟ್ಸ್, ಮ್ಯಾನೋಟ್ಸ್ ಅಲ್ಲ’ ಅಂತ ಕಿಚಾಯಿಸಿದಾಗಲೇ ಗೊತ್ತಾಗಿದ್ದು ನಾನು ಮಾಡಿದ ಎಡವಟ್ಟು. “ಹೆ ಅದೂ ಅದೂ..’ ಅಂತ ನಾನು ತಲೆ ಕೆರೆದುಕೊಂಡಾಗ ಗೊಳ್ಳನೆ ನಕ್ಕುಬಿಟ್ಟೆಯಲ್ಲ…. ಆಗ, ನನ್ನ ಪೆದ್ದುತನದ ಮೇಲೂ ನನಗೆ ಪ್ರೀತಿಯಾಯ್ತು.
ಆಮೇಲಿಂದ ಸುಮಾರು ಬಾರಿ ನಮ್ಮಿಬ್ಬರ ನಡುವೆ ಸಣ್ಣ ಪುಟ್ಟ ಉಭಯ ಕುಶಲೋಪರಿಗಳು ನಡೆದು, ಸ್ನೇಹಕ್ಕೆ ದಾರಿಯಾಯ್ತು. ಆ ನಗು, ಆ ಮಾತು, ಆ ಸದ್ಗುಣ ಎಲ್ಲವೂ ನನಗಿಷ್ಟ. ಹೀಗೆ ಆರು ತಿಂಗಳ ನಮ್ಮಿಬ್ಬರ ಸಂಬಂಧಕ್ಕೆ ಕಾಲೇಜಿನ ಪಾರ್ಕ್, ಹೊರಗಡೆಯ ಪಾನಿಪುರಿ ಗೂಡಂಗಡಿ, ಚಿಕ್ಕ ಬೇಕರಿಯ ಟೀ ಕಪ್ ಎಲ್ಲವೂ ನೀರು, ಗೊಬ್ಬರ ಹಾಕಿ ಗಟ್ಟಿಗೊಳಿಸಿವೆ.
ಆದರೆ, ಮುಂದೇನು ಅಂತ ತೋಚದೆ ಗೊಂದಲವಾಗಿದೆ. ನಿನ್ನ ಎದುರು ನಿಂತು ಪ್ರೀತಿಯನ್ನು ಹೇಳಿಕೊಳ್ಳಲು ಧೈರ್ಯವೇ ಇಲ್ಲ. ಹಾಗಂತ ಸುಮ್ಮನೇ ಇದ್ದುಬಿಟ್ಟರೆ, ನನ್ನ ಮನಸ್ಸಿನ ಭಾವನೆ ನಿನಗೆ ಅರ್ಥವೇ ಆಗೋದಿಲ್ಲ. ನಿನ್ನ ಸ್ನೇಹ ಸಾಮ್ರಾಜ್ಯದಲ್ಲಿ ನನ್ನೊಬ್ಬನನ್ನೇ ರಾಜನಂತೆ ಮೆರೆಸುತ್ತಿರುವ ನಿನ್ನ ಮುಂದೆ ನಿಂತು, “ನನ್ನ ಪ್ರೇಮನಗರಿಗೆ ಬೆಳಕಾಗಿ ಬಾ’ ಅಂತ ಯಾವ ಬಾಯಿಂದ ಕೇಳಲಿ? ನೋಟದಲ್ಲಿ ಪ್ರೇಮಪತ್ರ ಕಳಿಸಲೇ? ಮೌನರಾಗದಲ್ಲಿ ಹಾಡೊಂದ ಹೇಳಲೇ ಅಥವಾ ಹೇಳದೇ ಹಾಗೇ ಉಳಿದು ಬಿಡಲೇ? ಏನು ಮಾಡಲಿ ನೀನೆ ಹೇಳು.
– ಇಂತಿ ಒಲವಿನೂರ ಗೆಳೆಯ
ಶ್ರೀಕಾಂತ ಬಣಕಾರ