ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ತಪ್ಪಿಸಲು ಯತ್ನಿಸಿರುವ ಬಗ್ಗೆ ಕೂಡಲಸಂಗಮ ಪಂಚಮಸಾಲಿ ಸಮಾಜದ ಜಗದ್ಗುರುಗಳು ಸಾಕ್ಷಿ ನೀಡಿ ಸಾಬೀತುಪಡಿಸಬೇಕು. ಇಲ್ಲದಿದ್ದರೆ ಖಾವಿ ಬಿಚ್ಚಿ , ಖಾದಿ ತೊಟ್ಟು ರಾಜಕೀಯಕ್ಕೆ ಬರಲಿ ಎಂದು ಸಚಿವ ಮುರುಗೇಶ ನಿರಾಣಿ ಸವಾಲು ಹಾಕಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಗದ್ಗುರುಗಳ ಬಗ್ಗೆ ಬಹಳ ಗೌರವವಿದೆ. ಬೆಳಗಾವಿ ಸಮಾವೇಶದಲ್ಲಿ ಅವರು ನೀಡಿರುವ ಹೇಳಿಕೆಗೆ ಬದ್ಧರಾಗಿ, ಸಾಕ್ಷಿ ನೀಡಬೇಕು. 2ಎ ಮೀಸಲಾತಿ ಸಿಗುವುದನ್ನು ಬಾಗಲಕೋಟೆಯ ಯಾವ ಸಚಿವರು ತಡೆದರೆಂಬುದು ಸಾಬೀತುಪಡಿಸಲಿ. ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಮ್ಮದೇ ಸಮಾಜದ ಸಚಿವರೆಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಅವರು ಈ ಬಗ್ಗೆ ಸಾಕ್ಷಿ ನೀಡಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಜತೆಗೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು.
ಸಮಸ್ತ ವೀರಶೈವ ಲಿಂಗಾಯತ ಸಮಾಜದ ಎಲ್ಲ ಪಂಗಡಗಳಿಗೂ 2ಎ ಮೀಸಲಾತಿ ಸಿಗಬೇಕೆಂದು ಮೊದಲಿನಿಂದಲೂ ಹೇಳುತ್ತ ಬಂದಿದ್ದೇನೆ. ಈಗಲೂ ಅದಕ್ಕೆ ಬದ್ಧನಾಗಿ, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದೇನೆ. ಈ ಕುರಿತು ಜಯಪ್ರಕಾಶ ಹೆಗ್ಡೆ ನೇತೃತ್ವದ ಸಮಿತಿ ಮಧ್ಯಾಂತರ ವರದಿ ನೀಡಿದೆ. ಇದೇ ಡಿ. 29ರಂದು ಮುಖ್ಯಮಂತ್ರಿಗಳು 2ಎ ಮೀಸಲಾತಿ ಘೋಷಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ಕಳೆದ 2008ರಲ್ಲಿ ಪಂಚಮಸಾಲಿ ಸಮಾಜದ ಎರಡು ಪೀಠಗಳಾಗಿವೆ. ಆಗ ಎರಡೂ ಪೀಠ ಮಾಡಲು ಶ್ರಮಿಸಿದ್ದೇನೆ. ಅಲ್ಲದೇ ಅಲ್ಲಿಂದ 2021ರವರೆಗೆ ಎರಡೂ ಪೀಠದ ಜಗದ್ಗುರುಗಳನ್ನು ಒಂದೇ ವೇದಿಕೆಯಡಿ ತರಲು ಸಾಕಷ್ಟು ಸಮಯ ಕೊಟ್ಟಿದ್ದೇನೆ. 2008ಕ್ಕೂ ಮುಂಚೆ ಕೂಡಲಸಂಗಮ ಜಗದ್ಗುರುಗಳು ಎಲ್ಲಿದ್ದರು. ಅವರಿಗೆ ನನ್ನಿಂದ ಏನು ಸಹಾಯ-ಸಹಕಾರ ಆಗಿದೆ ಎಂಬುದು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಪಂಚಮಸಾಲಿ ಸಮಾಜ ಅಷ್ಟೇ ಅಲ್ಲ , ಸಮಸ್ತ ವೀರಶೈವ ಲಿಂಗಾಯತ ಒಳಪಂಗಡಗಳಿಗೆ 2ಎ ಮೀಸಲಾತಿ ಸಿಗಬೇಕೆಂಬುದು ನಮ್ಮ ಹೋರಾಟ. ಇದು ಕಳೆದ 30 ವರ್ಷಗಳಿಂದಲೂ ನಡೆದಿದೆ. ಅದಕ್ಕೆ ಈಗ ಸೂಕ್ತ ಸಮಯ ಬಂದಿದೆ ಎಂದರು.
ಪಂಚಮಸಾಲಿ ಸಮಾಜ ಜಾತಿ ಕಾಲಂನಲ್ಲಿಯೇ ಇರಲಿಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಆಗಿನ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಒಳಗೊಂಡ ಸಚಿವ ಸಂಪುಟ ಉಪ ಸಮಿತಿ ರಚಿಸಿ, ಆ ಸಮಿತಿ ಶಿಫಾರಸಿನ ಮೇರೆಗೆ ಸಮಾಜವನ್ನು 3ಬಿ ಕಾಲಂಗೆ ಸೇರಿಸಿದ್ದರು. ಇದನ್ನು ಎಂದೂ ಮರೆಯಬಾರದು ಎಂದರು.
ಪಂಚಮಸಾಲಿ ಸಮಾಜದ ಮೂರು ಪೀಠಗಳಿವೆ. ಆ ಮೂರೂ ಪೀಠಗಳ ಸ್ಥಾಪನೆಗೆ ನಾನೂ ಸಾಕಷ್ಟು ಶ್ರಮಿಸಿದ್ದೇನೆ. ಸಮಾಜ ಬಾಂಧವರಿಗೆ ನಮ್ಮ ಜಗದ್ಗುರುಗಳು ಸಿಗಬೇಕು. ಮದುವೆ ಸಹಿತ ಯಾವುದೇ ಒಳ್ಳೆಯ ಕಾರ್ಯಕ್ಕೆ ಆಯಾ ಭಾಗದಲ್ಲಿ ನಮ್ಮ ಜಗದ್ಗುರುಗಳು ತತ್‌ಕ್ಷಣಕ್ಕೆ ದೊರೆಯಲಿ ಹಾಗೂ ಸಮಾಜ ಸಂಘಟನೆ-ಧಾರ್ಮಿಕ ಕಾರ್ಯಗಳಿಗಾಗಿ ಈ ಪೀಠಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಇನ್ನೂ ಎರಡು ಪೀಠಗಳು ಶೀಘ್ರವೇ ಸ್ಥಾಪನೆಯಾಗಲಿವೆ.
-ಮುರುಗೇಶ ನಿರಾಣಿ, ಸಚಿವ