ಹೊನ್ನಾಳಿ: ನ್ಯಾಯಾಲಯದ ಆದೇಶದಂತೆ ರಾಜ್ಯದ ಬೇಡ ಜಂಗಮರಿಗೆ ತಹಶೀಲ್ದಾರ್‌ರು ಎಸ್ಸಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಅಖೀಲ ಕರ್ನಾಟಕ ಡಾ| ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ತಾಲೂಕು ಸಂಚಾಲಕ ಎಂ. ಶಿವಶಂಕರಯ್ಯ ಒತ್ತಾಯಿಸಿದರು.
ಸಂಘಟನೆ ಪದಾಧಿಕಾರಿಗಳು ಹಾಗೂ ಶಿವದೀಕ್ಷಾ ವಟುಗಳೊಂದಿಗೆ ಗುರುವಾರ ತಾಲೂಕು ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಉಚ್ಚ ನಾಯಾಲಯದ ಆದೇಶದಂತೆ ಜಂಗಮರಲ್ಲಿ ಬೇಡ ಜಂಗಮರು, ಬುಡುಗ ಜಂಗಮರಿದ್ದು ಜಂಗಮರೇ ಬೇಡ ಜಂಗಮರು. ಇವರನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೂ ದಾವಣಗೆರೆ ಜಿಲ್ಲೆಯಲ್ಲಿ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಉಚ್ಚ ನ್ಯಾಯಾಲಯದ ಆದೇಶದಂತೆ 1993ರಲ್ಲಿ ಅಂದಿನ ಹೊನ್ನಾಳಿ ತಹಶೀಲ್ದಾರ್ ಎಂ.ಶಿವಶಂಕರಯ್ಯ ನನಗೆ ಹಾಗೂ ಎಚ್.ಎಂ. ಚನ್ನೇಶಯ್ಯ ಎಂಬುವರಿಗೆ ಪರಿಶಿಷ್ಟ ಬೇಡ ಜಂಗಮ ಎಂದು ಪ್ರಮಾಣ ಪತ್ರ ನೀಡಿದ್ದಾರೆ. 1995ರಲ್ಲಿ ನಡೆದ ಜಿ.ಪಂ ಚುನಾವಣೆಯಲ್ಲಿ ಎಸ್ಸಿಗೆ ಮೀಸಲಾಗಿದ್ದ ಕುಂದೂರು ಜಿ.ಪಂ ಕ್ಷೇತ್ರಕ್ಕೆ ಎಚ್.ಎಂ.ಚನ್ನೇಶಯ್ಯ ಸ್ಪರ್ಧಿಸಿದ್ದರು. ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಎಂದು ಅವರು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಕೆಲ ತಹಶೀಲ್ದಾರ್‌ರು ಬೇಡ ಜಂಗಮರು ಜಿಲ್ಲೆಯಲ್ಲಿ ಇಲ್ಲ ಎಂದು ಪತ್ರಿಕಾ ಹೇಳಿಕೆ ನೀಡುತ್ತಿದ್ದಾರೆ. ಇಂತಹವರ ವಿರುದ್ಧ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ತುಷಾರ್ ಹೊಸೂರು, ಮುಂದಿನ ದಿನಗಳಲ್ಲಿ ಬೇಡ ಜಂಗಮರು ಹಾಗೂ ಕಾನೂನು ತಜ್ಞರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಡಾ| ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ತಾಲೂಕು ಪ್ರಮುಖರಾದ ಎಚ್.ಎಂ. ಗಂಗಾಧರಯ್ಯ, ಎಸ್.ಎಂ.ಎಸ್. ಶಾಸ್ತ್ರಿ ಹೊಳೆಮಠ ಇತರರು ಇದ್ದರು.