ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗಂಜಿಕಟ್ಟೆ ಬಳಿ ಕಾದಾಟದಲ್ಲಿ ಗಾಯಗೊಂಡು ನಿತ್ರಾಣವಾಗಿದ್ದ ಗಂಡು ಹುಲಿಗೆ ಅರಣ್ಯ ಇಲಾಖೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಸೆರೆ ಹಿಡಿದಿದ್ದಾರೆ.
ಚಿಕಿತ್ಸೆಗೆ ಮೈಸೂರಿನ ಮೃಗಾಲಯಕ್ಕೆ ರವಾನಿಸಲಾಗಿದೆ. ಹುಲಿಗೆ 7ರಿಂದ 8 ವರ್ಷ ವಯಸ್ಸಾಗಿದೆ ಎನ್ನಲಾಗಿದ್ದು, ಅದರ ಚಲನವಲನಗಳನ್ನು ಗಮನಿಸಲು ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಹುಲಿ ಚೇತರಿಕೆ ಕಷ್ಟ ಎಂಬುದನ್ನು ಅರಿತ ಸಿಬ್ಬಂದಿಗಳು ಅಧಿಕಾರಿಗಳಿಗೆ ತಿಳಿಸಿ ಸೆರೆ ಹಿಡಿಯಲಾಗಿದೆ. ಈ ಸಂದರ್ಭದಲ್ಲಿ ಹುಲಿ ಮೈ ಮೇಲೆ ಆಗಿರುವ ಗಾಯಗಳನ್ನು ಗಮನಿಸಿದಾಗ ಹುಲಿ ಆನೆಯೊಂದಿಗೆ ಕಾದಾಡುವ ಸಮಯದಲ್ಲಿ ಆನೆಯ ಕೊಂಬು ಚುಚ್ಚಿರುವ ಗುರುತುಗಳು ಇದೆ.
ಇದನ್ನೂ ಓದಿ:- ಕಾಂಗ್ರೆಸ್‍ಗೆ ನಾಯಕತ್ವ, ಸಂಘಟನೆ, ಸಾಧನೆ ಇಲ್ಲ: ಈಶ್ವರಪ್ಪ
ಬುಧವಾರ ಬಂಡೀಪುರ ಸಫಾರಿ ವಲಯದ ಗಂಜಿಕಟ್ಟೆ ಬಳಿ ಹುಲಿ ನಿತ್ರಾಣವಾಗಿರುವುದು ಕಂಡು ಬಂದಿತ್ತು. ಗುರುವಾರ ಅರಿವಳಿಕೆ ನೀಡಿ ಸೆರೆ ಹಿಡಿಯಲಾಗಿದೆ. ಚಿಕಿತ್ಸೆಗೆ ಹುಲಿ ಸ್ಪಂದಿಸುವ ಲಕ್ಷಣಗಳು ಕಂಡು ಬಂದುದ್ದರಿಂದ ಮೈಸೂರಿಗೆ ಕಳುಹಿಸಲಾಯಿತು ಎಂದು ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ಮಾಹಿತಿ ನೀಡಿದರು.
ಇಲಾಖಾ ಪಶುವೈದ್ಯಾಧಿಕಾರಿ ಡಾ. ವಾಸಿಂ ಮಿರ್ಜಾ ಹಾಗೂ ಡಾ. ಮುಜೀಬ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್, ಸುಮಿತ್ ಕುಮಾರ್ ಎಸ್.ಪಾಟೀಲ್, ಬಂಡೀಪುರ ವಲಯ ಅರಣ್ಯಾಧಿಕಾರಿ ಪಿ.ನವೀನ್‌ಕುಮಾರ್, ಬಂಡೀಪುರ ವಲಯದ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜು ಮತ್ತು ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.