ತುಮಕೂರು: ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡರಿಗೆ ಲೋಕಸಭಾ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ, ಅವರ ಅಭಿಮಾನಿಗಳು ಶನಿವಾರ ಸಂಜೆ ನಗರದ ಟೌನ್‌ಹಾಲ್‌ನ ಬಿಜಿಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಎಸ್.ಪಿ.ಮುದ್ದಹನುಮೇಗೌಡರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗದ ನೇತೃತ್ವದಲ್ಲಿ ನಗರದ ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡು ಕಾಂಗ್ರೆಸ್ ನಾಯಕರ ಕ್ರಮ ಮತ್ತು ಜೆಡಿಎಸ್ ಎಲ್ಲಾ ಕಡೆ ಹಾಲಿ ಸಂಸದರಿಗೆ ಟಿಕೆಟ್ ಬಿಟ್ಟುಕೊಟ್ಟು ತುಮಕೂರನ್ನು ಜೆಡಿಎಸ್ ಪಡೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಮತ್ತು ಎಐಸಿಸಿ ಮುಖಂಡರಿಗೆ ಹಾಗೂ ಜೆಡಿಎಸ್ ಮುಖಂಡರಿಗೆ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಮೇಲೆ ಪ್ರಭಾವ: ಈ ವೇಳೆ ಮಾತನಾಡಿದ ಮುಖಂಡ ದೊಡ್ಡಲಿಂಗಪ್ಪ, ಮುದ್ದಹನುಮೇಗೌಡರು ಸರಳ, ಸಜ್ಜನಿಕೆ ವ್ಯಕ್ತಿಯಾಗಿದ್ದು, ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಹೆಚ್ಚು ಪ್ರಭಾವ ಬೀರಿ ಜಿಲ್ಲೆಗೆ ಸಾಕಷ್ಟು ಅಭಿವೃದ್ಧಿ ಯೋಜನೆಗಳು ಮತ್ತು ಅನುದಾನ ತಂದಿದ್ದು, ಇಂಥ ಕ್ರಿಯಾಶೀಲತೆಯಿಂದಾಗಿ ಜನಮನ್ನಣೆಗಳಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿಗೆ ಒತ್ತಡ: ಶ್ರೀರಂಪಟ್ಟಣ-ಬೀದರ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಶ್ರಮಿಸಿದ್ದಾರೆ. ಬಿ.ಎಚ್.ರಸ್ತೆಯನ್ನು ಷಟ³ಥ ರಸ್ತೆಯನ್ನಾಗಿ ಮಾರ್ಪಡಿಸಲು ಶ್ರಮಿಸಿದ್ದಾರೆ. ಗೋವಾಗೆ ಹೋಗುವ ಎಚ್‌ಎಎಲ್ ಘಟಕವನ್ನು ಗುಬ್ಬಿಯಲ್ಲೇ ನಿರ್ಮಾಣವಾಗುವಂತೆ ಪ್ರಧಾನಮಂತ್ರಿಗಳ ಬಳಿ ಒತ್ತಡ ಹೇರಿ ಎಚ್‌ಎಎಲ್ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.
ಜೊತೆಗೆ ಯಾವುದೇ ಜಾತಿ, ಮತ ಭೇದವಿಲ್ಲದೆ ಜನ ಸಾಮಾನ್ಯರ ಕಷ್ಟ ಸುಖಗಳಿಗೆ ನೇರವಾಗಿ ಸ್ಪಂದಿಸಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜನಸಾಮಾನ್ಯರ ಮಧ್ಯೆ ಬೆಳೆದಿರುವಂತಹ ಪ್ರಮುಖ ರಾಜಕಾರಣಿಯೂ ಆಗಿದ್ದಾರೆ. ಇಂತಹವರಿಗೆ ಲೋಕಸಭೆ ಟಿಕೆಟ್ ಕೈ ತಪ್ಪಿರುವುದು ನಮಗೆಲ್ಲಾ ನೋವಾಗಿದೆ.
ಈ ಹಿನ್ನೆಲೆಯಲ್ಲಿ ಕೂಡಲೇ ಕಾಂಗ್ರೆಸ್ ಕೆಪಿಸಿಸಿ ಮುಖಂಡರು ಮತ್ತು ಎಐಸಿಸಿ ವರಿಷ್ಠರು ಜೆಡಿಎಸ್ ವರಿಷ್ಠರೊಂದಿಗೆ ಚರ್ಚಿಸಿ ನಮ್ಮ ಜಿಲ್ಲೆಗೆ ಎಸ್.ಪಿ. ಮುದ್ದಹನುಮೇಗೌಡರಿಗೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲೇಬೇಕೆಂದು ಆಗ್ರಹಿಸಿದರು. ಈ ವೇಳೆ ಚಿಕ್ಕರಂಗಪ್ಪ, ದೊಡ್ಡಲಿಂಗಪ್ಪ, ಕೌತುಮಾರನಹಳ್ಳಿ ಯೋಗೀಶ್, ವಿಜಯ್‌ಕುಮಾರ್, ರಂಗಪ್ಪ, ಗಿರೀಶ್ ಹಾಗೂ ಇತರರು ಇದ್ದರು.