ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ರಾಜ್ಯದ ಪ್ರಬಲ ಜಾತಿಯಾದ ಕುರುಬ ಸಮುದಾಯದವರಿಗೆ 40 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಪ್ರಭಾರ ಅಧ್ಯಕ್ಷ ಬಿ. ಸುಬ್ರಮಣ್ಯ, ರಾಜ್ಯದಲ್ಲಿ ಕುರುಬ ಸಮುದಾಯದವರು 75 ಲಕ್ಷಕ್ಕೂ ಹೆಚ್ಚಿನ ಜನರಿದ್ದಾರೆ. ಅದರಲ್ಲೂ 150ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದವರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾರೆ. ಅದರಲ್ಲೂ 40ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಿದ್ದರೂ ರಾಜಕೀಯ ಪಕ್ಷಗಳು ಸಮುದಾಯದ ಅಭ್ಯರ್ಥಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಕನಿಷ್ಠ 40 ಕ್ಷೇತ್ರಗಳಲ್ಲಿ ಕುರುಬ ಸಮುದಾಯಕ್ಕೆ ಸೇರಿದವರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಕಾರ್ಯದರ್ಶಿ ಡಿ. ವೆಂಕಟೇಶಮೂರ್ತಿ ಮಾತನಾಡಿ, ಕುರುಬ ಸಮುದಾಯದವರಿಗೆ ಪ್ರಾತಿನಿಧ್ಯ ನೀಡುವಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಇನ್ನಿತರ ಪಕ್ಷಗಳ ರಾಜ್ಯಾಧ್ಯಕ್ಷರು, ಪ್ರಮುಖ ನಾಯಕರನ್ನು ಭೇಟಿ ಮಾಡಿ ಮಾತನಾಡಲಾಗುವುದು. 2008ರಲ್ಲಿ 6 ಮಂದಿ, 2013ರಲ್ಲಿ 14 ಹಾಗೂ 2018ರಲ್ಲಿ 12 ಮಂದಿ ಕುರುಬ ಸಮುದಾಯದವರು ಶಾಸಕರಾಗಿದ್ದಾರೆ. ಅಲ್ಲದೆ, 2018ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ 36 ಮಂದಿಗೆ ಮಾತ್ರ ಟಿಕೆಟ್ ನೀಡಲಾಗಿತ್ತು. ಇದರಿಂದ ರಾಜ್ಯದ ಪ್ರಬಲ ಜಾತಿಗಳ ಪೈಕಿ 3ನೇ ಸ್ಥಾನದಲ್ಲಿರುವ ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ. ಇದನ್ನು ಈ ಚುನಾವಣೆಯಲ್ಲಿ ಸರಿಪಡಿಸಲು ಪಕ್ಷಗಳು ಮುಂದಾಗಬೇಕು ಎಂದರು.
ಖಜಾಂಚಿ ದೇವರಾಜ ಸುಬ್ಬರಾಯಪ್ಪ, ನಿರ್ದೇಶಕ ಕೆ.ಟಿ. ನಾಗರಾಜು ಇತರರಿದ್ದರು.
Related Articles
ಒಂದೇ ಕ್ಷೇತ್ರದಲ್ಲಿ ಎರಡು ಅಥವಾ ಮೂವರು ಕುರುಬ ಸಮುದಾಯದವರಿಗೆ ಅಭ್ಯರ್ಥಿಯಾಗದಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಅಭ್ಯರ್ಥಿಗಳ ಜತೆಗೆ ಮಾತುಕತೆ ನಡೆಸಿ, ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯುವಂತೆ ಮಾಡಲಾಗುವುದು. ಒಂದು ವೇಳೆ ಅಭ್ಯರ್ಥಿಗಳು ಒಪ್ಪದಿದ್ದರೆ ಗೆಲ್ಲುವ ಅಭ್ಯರ್ಥಿಗೆ ಸಂಘವು ಬೆಂಬಲ ನೀಡಲಿದೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ವರ್ತೂರು ಪ್ರಕಾಶ್ ಸ್ಪರ್ಧೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಾಗುತ್ತಿದ್ದು, ಟಿಕೆಟ್ ಘೋಷಣೆ ನಂತರ ಯಾರಿಗೆ ಬೆಂಬಲಿಸಬೇಕು ಎಂಬ ಬಗ್ಗೆ ಸಂಘ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ವಿವರಿಸಿದರು.
ಖಜಾಂಚಿ ದೇವರಾಜ ಸುಬ್ಬರಾಯಪ್ಪ, ನಿರ್ದೇಶಕ ಕೆ.ಟಿ. ನಾಗರಾಜು ಇತರರಿದ್ದರು.