ರಾಮನಗರ: ನಗರದ ವಾಸವಿ ವಿದ್ಯಾನಿಕೇತನ ಶಾಲೆಯ ಹಿರಿಯ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳು ತಾಲೂಕಿನ ಅರೇಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟು ಸಾಲು ಮರದ ನಿಂಗಣ್ಣ ಪೋಷಿಸಿದ 950 ಮರಗಳನ್ನು ಪ್ರತ್ಯಕ್ಷ ವೀಕ್ಷಿಸಿ ತಮ್ಮ ಭವಿಷ್ಯಕ್ಕೆ ಹಸಿರು ಬಳುವಳಿ ಕೊಟ್ಟ ನಿಂಗಣ್ಣರನ್ನು ಅಭಿನಂದಿಸಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.
ನಿಂಗಣ್ಣ ನೆಟ್ಟಿದ್ದ ಮರದ ಸಾಲು ನೋಡಿದ ವಿದ್ಯಾರ್ಥಿಗಳು: ತಾಲೂಕಿನ ಕೂಟಗಲ್ ಹೋಬಳಿಯ ಬಿಳಗುಂಬ-ಅರೇಹಳ್ಳಿ ರಸ್ತೆಯ ಎರಡೂ ಬದಿ ಗಳಲ್ಲಿ ಸಸಿ ನೆಟ್ಟು ಮರಗಳನ್ನು ಪೋಷಿಸಿದ್ದಾರೆ. 20 ವರ್ಷಗಳ ಸತತ ಕಾಯಕದಿಂದಾಗಿ ಈ ರಸ್ತೆಯಲ್ಲಿ ಹಸಿರು ನಳನಳಿಸುತ್ತಿದೆ. ಸಂಘ-ಸಂಸ್ಥೆಗಳು ನಿಂಗಣ್ಣರನ್ನು ಸನ್ಮಾನಿಸಿವೆ. ಸಾಲು ಮರದ ತಿಮ್ಮಕ್ಕ ಅವರಂತೆ, ಅರೇಹಳ್ಳಿಯ ನಿಂಗಣ್ಣ ಸಹ ಮರಗಳನ್ನು ಪೋಷಿಸಿರುವುದನ್ನು ಪ್ರತ್ಯಕ್ಷ ಕಾಣಲು ಶಾಲೆಯ ಆಡಳಿತ ಮಂಡಳಿ ನಿಶ್ಚಯಿಸಿ ವಿದ್ಯಾರ್ಥಿಗಳನ್ನು ಪ್ರವಾಸ ಕರೆದೊಯ್ದಿತ್ತು.
ಮರಗಳ ಮಾಹಿತಿ ಪಡೆದ ವಿದ್ಯಾರ್ಥಿಗಳು: ಬಿಳಗುಂಬ-ಅರೇಹಳ್ಳಿ ರಸ್ತೆಯಲ್ಲಿ ಸಾಲು ಮರಗಳನ್ನು ಕಂಡ ವಿದ್ಯಾರ್ಥಿಗಳು ಪುಳಕಿತರಾದರು. ಹಸಿರು ಸಿರಿ ಕಂಡು ಹರ್ಷಗೊಂಡರು. 2019ನೇ ಸಾಲಿನ ವಿಶ್ವ ಪರಿಸರದ ಘೋಷವಾಕ್ಯ “ವಾಯು ಮಾಲಿನ್ಯ”ದವಿಷಯ ಮತ್ತು ವಾಯು ಮಾಲಿನ್ಯ ತಡೆಗಟ್ಟುವ ವಿಚಾರದಲ್ಲಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ಕೊಟ್ಟರು.
ನಮ್ಮ ಭವಿಷ್ಯಕ್ಕೆ ಬಳವಳಿ ಕೊಟ್ಟಿರಿ: ಈ ವೇಳೆ ಹಾಜರಿದ್ದ ಸಾಲುಮರದ ನಿಂಗಣ್ಣರನ್ನು ವಿದ್ಯಾರ್ಥಿಗಳು ಪರಿಸರ ಕಾಪಾಡುವ ನಿಟ್ಟನಲ್ಲಿ ಪರಿಶ್ರಮ ವಹಿಸಿದ್ದೀರಿ ಎಂದು ಕೈಮುಗಿದರು. ಸಾಲು ಮರದ ತಿಮ್ಮಕ್ಕ, ನಿಂಗಣ್ಣ ಸೇರಿದಂತೆ ಹಲವರು ಮರಗಳನ್ನು ಪೋಷಿಸಿ ತಮ್ಮ ಭವಿಷ್ಯಕ್ಕೆ ಹಸಿರು ಬಳುವಳಿ ಕೊಟ್ಟಿದ್ದೀರಿ ಎಂದು ಕೃತಜ್ಞತೆ ಅರ್ಪಿಸಿದರು.
ಗಿಡ ಬೆಳೆಸಲು ವಿದ್ಯಾರ್ಥಿಗಳಿಗೆ ಸಲಹೆ: ವಾಸವಿ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಸಲ್ಲಿಸಿದ ಕೃತಜ್ಞತೆಯನ್ನು ವಿನಯಪೂರ್ವಕವಾಗಿ ಸ್ವೀಕರಿಸಿದ ನಿಂಗಣ್ಣ, ಪ್ರತಿಯೊಬ್ಬ ವಿದ್ಯಾರ್ಥಿಯು ಕನಿಷ್ಠ ಒಂದು ಸಸಿ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು. ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ಜೀವ ಸಂಕುಲವನ್ನು ರಕ್ಷಿಸುತ್ತದೆ. ಎಲ್ಲೆಂದರಲ್ಲಿ ಕಸ ಬೀಸಾಡ ಬೇಡಿ,ವೈಯಕ್ಷಿಕ ಸ್ವಚ್ಚತೆ ಕಾಪಾಡಿ ಎಂದು ತಿಳಿ ಹೇಳಿದರು.
ಶಾಲೆಯ ಕಾರ್ಯದರ್ಶಿ ಪಿ.ವಿ.ಬದರಿನಾಥ್ ಸಂಸ್ಥೆಯ ಪರವಾಗಿ ನಿಂಗಣ್ಣ ಅವರಿಗೆ 5 ಸಾವಿರ ರೂ ಆರ್ಥಿಕ ಸಹಾಯ ನೀಡಿದರು. ಮುಖ್ಯ ಶಿಕ್ಷಕಿ ವಿ.ಕೆ. ವಿಜಯಪ್ರಭಾ, ಸಹ ಶಿಕ್ಷಕಿಯರಾದ ಕೆ.ಆರ್. ಚಾರುಮತಿ, ಎ.ಎಂ.ಶ್ರೀ ಲಕ್ಷ್ಮಿ, ಪವಿತ್ರ ಹಾಜರಿದ್ದರು.