Advertisement
ಘಟನೆ 1:ಅದಿತಿ ಒಂಬತ್ತನೇ ತರಗತಿಯ ಹುಡುಗಿ. ಒಬ್ಬಳೇ ಮಗಳೆಂದು ಮನೆಯಲ್ಲಿ ಅತಿಯಾಗಿ ಮುದ್ದಿಸುತ್ತಾರೆ. ಪ್ರತಿದಿನವೂ ಶಾಲೆಯಿಂದ ಬಂದ ನಂತರ, ಅಡುಗೆ ಮನೆಯಲ್ಲಿರುವ ಕುರುಕಲು ತಿಂಡಿಗಳು, ಹಣ್ಣುಗಳನ್ನು ಗಬಗಬನೆ ಒಬ್ಬಳೇ ತಿಂದು ರೂಢಿ. ಎದುರಿಗೆ ಕುಳಿತಿರುತ್ತಿದ್ದ ತಾತನಿಗೂ ಒಂದು ದಿನವೂ ಕೊಟ್ಟು ತಿಂದವಳಲ್ಲ. ತಾತನೂ ಅವಳ ಸ್ವಭಾವವನ್ನು ಆಕ್ಷೇಪಿಸುವಂತಿಲ್ಲ. ಒಂದು ದಿನ ಪಕ್ಕದ ಮನೆಯ, ಸುಮಾರು ಇವಳದ್ದೇ ವಯಸ್ಸಿನ ವಂದನಾ ತನ್ನ ಮನೆಯ ಬೀಗ ಹಾಕಿದ್ದಕ್ಕಾಗಿ, ತಾತನ ಒತ್ತಾಯಕ್ಕೆ ಇವರ ಮನೆಗೆ ಬಂದು ಕೂತಿದ್ದಳು. ಶಾಲೆಯಿಂದ ಹಿಂದಿರುಗಿದ್ದ ಅವಳಿಗೂ ಹಸಿವಾಗಿತ್ತು. ಆದರೆ, ಅವಳ ಪರಿವೆಯೇ ಇಲ್ಲದೆ ಅದಿತಿ ತನ್ನ ಪಾಡಿಗೆ ತಾನು ಅವಳ ಮುಂದೆಯೇ ತಿಂಡಿ ತಿನ್ನಲಾರಂಭಿಸಿದಳು. ತಾತ, “ಅವಳಿಗೂ ಕೊಟ್ಟು ತಿನ್ನು’ ಎನ್ನುವಷ್ಟರಲ್ಲಿ ಅವಳ ತಟ್ಟೆ ಬರಿದಾಗಿತ್ತು. ಅಂದಿನಿಂದ ವಂದನಾ, ಮನೆಯ ಬಾಗಿಲಲ್ಲೇ ಕೂತರೂ ಪರವಾಗಿಲ್ಲ ಅದಿತಿಯ ಮನೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿದಳು.
ಪ್ರಜ್ವಲ್ ಇನ್ನೂ ಐದು ವರ್ಷದ ಹುಡುಗ. ಅವನ ಮನೆಗೆ ಆಗಾಗ್ಗೆ ಊರಿಂದ ಅಜ್ಜ-ಅಜ್ಜಿ ಬರುತ್ತಾರೆ. ಅಜ್ಜಿ ಬರುವಾಗೆಲ್ಲಾ, ಉಂಡೆ, ಚಕ್ಕುಲಿ, ಚಾಕೋಲೇಟ್ ತರುತ್ತಾರೆ ಮತ್ತು “ನಿನ್ನ ಫ್ರೆಂಡ್ಸ್‌ಗೆಲ್ಲಾ ಹಂಚಿ ತಿನ್ನು’ ಎನ್ನುತ್ತಾರೆ. ಆದರೆ, ಪ್ರತಿದಿನ ಬೆಳಗ್ಗೆ ಅವನ ಊಟದ ಡಬ್ಬಿಗೆ ಕೇಕು, ಬಿಸ್ಕತ್ತು, ಡ್ರೈ ಫ್ರೊಟ್ಸ್ ಹಾಕಿ ಕೊಡುವ ಅಮ್ಮ, “ನೀನೊಬ್ಬನೇ ತಿನ್ನು, ಎಲ್ಲರಿಗೂ ಕೊಟ್ಟು ವೇÓr… ಮಾಡಬೇಡ’ ಎಂದು ತಾಕೀತು ಮಾಡುತ್ತಾರೆ. ಪ್ರಜ್ವಲ್‌ಗೆ, ಅಜ್ಜಿಯ ಮಾತು ಕೇಳಬೇಕೋ, ಅಮ್ಮನ ಮಾತು ಕೇಳಬೇಕೋ ಎಂಬ ಗೊಂದಲ. ಕೆಲವೊಮ್ಮೆ ಗೆಳೆಯರಿಗೆ ಕೊಡಲು ಹೋಗಿ, ಅಮ್ಮ ಹೇಳಿದಂತೆ ವೇಸ್ಟ್ ಆಗಬಹುದೆಂದು ಹೊಳೆದು ಕೈ ಹಿಂದೆಗೆದುಕೊಳ್ಳುತ್ತಿದ್ದ. ಘಟನೆ 3:
ಸುಮನ ಮತ್ತು ಸುಹಾಸ್‌ರ ಅಮ್ಮ ರಜನಿಗೆ, ಮನೆಗೆ ಬಂದ ಅತಿಥಿಗಳು ತರುವ ಸಿಹಿ ತಿಂಡಿ, ಚಾಕೋಲೇಟ್‌ಗಳನ್ನು ಹಂಚಿ ಆನಂದಿಸದೆ, ಅವರು ಹೋದ ನಂತರ ತಿನ್ನಬೇಕೆಂದು ಎತ್ತಿಡುವ ಅಭ್ಯಾಸ. ಇದನ್ನು ಅರಿತ ಮಕ್ಕಳು ಒಮ್ಮೆ, ಎಲ್ಲರ ಕಣ್ಣು ತಪ್ಪಿಸಿ ಫ್ರಿಜ್‌ನಿಂದ ತಿಂಡಿಯನ್ನು ಕದ್ದು ಬಾಯಿ ತುಂಬಾ ತುಂಬಿಕೊಂಡು ತಿನ್ನುತ್ತಿದ್ದುದನ್ನು ಅತಿಥಿಗಳು ನೋಡಿದಾಗ ಎಲ್ಲರ ಮುಂದೆ ರಜನಿಗೆ ತಲೆತಗ್ಗಿಸುವಂತಾಯಿತು.
Related Articles
ಪ್ರೀತಿ ರೈಲಿನಲ್ಲಿ ಒಬ್ಬಳೇ ಪ್ರಯಾಣಿಸುತ್ತಿದ್ದಳು. ಯಾರಲ್ಲೂ ಅಷ್ಟಾಗಿ ಬೆರೆಯದ ವ್ಯಕ್ತಿತ್ವದವಳು ಆಕೆ. ಎದುರಿಗೆ ಕುಳಿತಿದ್ದ ಒಬ್ಬಳು ಹಳ್ಳಿ ಹೆಂಗಸು “ತುಂಬಾ ಬಾಯಾರಿಕೆ ಆಗಿದೆ, ನೀರಿದ್ದರೆ ಕೊಡಿ’ ಎಂದು ಕೇಳಿದಾಗ, ದೊಡ್ಡ ಬಾಟಲಿಯ ತುಂಬಾ ನೀರಿದ್ದರೂ ಅದನ್ನು ಕೊಡಬೇಕೆಂದು ಪ್ರೀತಿಗೆ ಅನ್ನಿಸಲಿಲ್ಲ. ಆ ಹೆಂಗಸು ಮುಂದಿನ ರೈಲ್ವೆ ಸ್ಟೇಷನ್‌ನಲ್ಲಿ ಇಳಿದು ನೀರು ಕುಡಿದು ಬರಬೇಕಾಯಿತು. ಸ್ವಲ್ಪ ಹೊತ್ತಾದ ನಂತರ ಆ ಮಹಿಳೆ ತನ್ನಲ್ಲಿದ್ದ ಶಂಕರ ಪೋಳಿ ಮತ್ತು ಕೋಡುಬಳೆಯನ್ನು ಬೋಗಿಯಲ್ಲಿದ್ದ ಎಲ್ಲರಿಗೂ ಹಂಚಿದಾಗ, ನೀರು ಕೊಡದೇ ಇದ್ದ ಸಣ್ಣತನ ಪ್ರೀತಿಯನ್ನು ಚುಚ್ಚಿತ್ತು.
Advertisement
ಮಕ್ಕಳು, ಇನ್ನೂ ಕಡೆಯದ ಶಿಲೆಯಂತೆ. ಪಾಲಕರು, ಗೆಳೆಯರು ಮತ್ತು ಸುತ್ತಲಿನ ಪರಿಸರ ಶಿಲ್ಪಿಯ ಪಾತ್ರವನ್ನು ವಹಿಸುತ್ತವೆ. ಈ ಶಿಲ್ಪಿಗಳು ನೀಡುವ ಉಳಿಪೆಟ್ಟುಗಳು ಶಿಲೆಯನ್ನು ಮೂರ್ತಿಯನ್ನಾಗಿ ರೂಪಿಸುತ್ತವೆ. ಅಂತಿಮವಾಗಿ ತೋರುವ ಮೂರ್ತಿ ಸುಂದರವಾಗಿರಬೇಕೆಂದರೆ ಪಾಲಕರು ಮಕ್ಕಳಿಗೆ ಉತ್ತಮ ನಡವಳಿಕೆ, ಮಾರ್ಗದರ್ಶನ ನೀಡಬೇಕಿದೆ. ಇಲ್ಲದೇ ಹೋದಲ್ಲಿ ಒಮ್ಮೆ ಕಡೆದ ಕಲ್ಲನ್ನು ಮತ್ತೆ ಹಿಂದಿನ ಸ್ಥಿತಿಗೆ ತರಲಾಗದು. ಹಂಚಿ ತಿನ್ನುವಂಥ ಒಳ್ಳೆಯ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿ ಕೊಡಬೇಕು. ಖುಷಿ, ಹಂಚುವುದರಿಂದ ಹೆಚ್ಚುತ್ತದೆ ಎಂಬ ಮಾತಿದೆ. ಅಂತೆಯೇ ಏನನ್ನೇ ಆದರೂ ಹಂಚಿಕೊಳ್ಳುವುದರಿಂದಲೂ ಖುಷಿ ಹೆಚ್ಚುತ್ತದೆ.
– ಡಾ.ಶ್ರುತಿ ಬಿ.ಆರ್.