Advertisement

ಮೂಲಸೌಲಭ್ಯ ಒದಗಿಸಲು ವಿಶೇಷ ಅನುದಾನ ನೀಡಿ

05:18 PM Sep 23, 2021 | Team Udayavani |

ಕೋಲಾರ: ಜಿಲ್ಲೆಯ ಕೆಜಿಎಫ್‌ ನಗರದಲ್ಲಿನ ಬಿಜಿಎಂಎಲ್‌ ಕಾರ್ಖಾನೆಯ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಶಾಸಕಿ ರೂಪಕಲಾ ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ಗೆ ಮನವಿ ಮಾಡಿದರು.

Advertisement

ಈ ಸಂಬಂಧ ಬುಧವಾರ ಮುಖ್ಯಕಾರ್ಯದರ್ಶಿ ಅವರನ್ನು ಭೇಟಿ ಮಾಡಿದ ಅವರು, ಕೆಜಿಎಫ್‌ ನಗರಸಭೆ ವ್ಯಾಪ್ತಿಯ 18 ವಾರ್ಡ್‌ಗಳಲ್ಲಿ ಗಣಿ ಕಾರ್ಮಿಕರು ವಾಸಿಸುತ್ತಿದ್ದು, ಶೌಚಾಲಯ, ಕುಡಿಯುವ ನೀರು, ಚರಂಡಿ ರಸ್ತೆ, ಉದ್ಯಾನ ಮತ್ತಿತರ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ತಿಳಿಸಿದರು.

ಮಹತ್ವ ಕಳೆದುಕೊಂಡಿದೆ: ವಿಶ್ವಕ್ಕೆ ಬಂಗಾರ ನೀಡಿದ, ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ಹೈನುಗಾರಿಕೆ ಹರಿಕಾರ ಎಂ.ವಿ.ಕೃಷ್ಣಪ್ಪ ಪ್ರತಿನಿಧಿಸಿದ ಕ್ಷೇತ್ರ ಇದಾಗಿದ್ದು, ಇಡೀ ವಿಶ್ವದ ಗಮನ ಸೆಳೆದಿತ್ತು. 1864ರಲ್ಲಿ ಆರಂಭವಾದ ಚಿನ್ನದ ಗಣಿ, ನಂತರ 1972ರಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿತ್ತು. 2001ರಿಂದ ಗಣಿ ಮುಚ್ಚಿದ ಕಾರಣದಿಂದ ಕೆಜಿಎಫ್‌ ತನ್ನ ಮಹತ್ವ ಕಳೆದುಕೊಂಡಿದೆ ಎಂದು ವಿಷಾದಿಸಿದರು.

ಸಾವಿರಾರು ಅಡಿ ಆಳದಿಂದ ಚಿನ್ನ ಕೊರೆದು ನೀಡಿದ ಕಾರ್ಮಿಕರು ಇಂದು ನಿರ್ಗತಿಕರಾಗಿದ್ದಾರೆ, ಅವರ ಕುಟುಂಬಗಳು ಗಣಿ ವ್ಯಾಪ್ತಿಯ ಶೆಡ್‌ ಗಳಲ್ಲೇ ಜೀವನ ನಡೆಸುತ್ತಿವೆ, ಈ ಜಾಗ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಕಾರಣ ಸ್ಥಳೀಯ ಆಡಳಿತದಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಗಮನಕ್ಕೆ ತಂದರು.

ಇದನ್ನೂ ಓದಿ:ನಾಗಾಲೋಟ: ಸಾರ್ವಕಾಲಿಕ ದಾಖಲೆ – 60 ಸಾವಿರ ಸನಿಹಕ್ಕೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್

Advertisement

ಶೇ.95 ಪರಿಶಿಷ್ಟರು: ಕೆಜಿಎಫ್‌ ನಗರದ 35 ವಾರ್ಡ್‌ಗಳ ಪೈಕಿ 18ರಲ್ಲಿ ಕಾರ್ಮಿಕರಿದ್ದು, ಈ ಭಾಗದಲ್ಲಿ ಮೂಲ ಸೌಲಭ್ಯ ಮರೀಚಿಕೆಯಾಗಿದೆ, 150 ವರ್ಷಗಳಿಂದ ಶೆಡ್‌ಗಳಲ್ಲೇ ಈ ಕಾರ್ಮಿಕರು ಜೀವನ ನಡೆಸುತ್ತಿದ್ದು, ಇದರಲ್ಲಿ ಶೇ.95 ಪರಿಶಿಷ್ಟರು. ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.

ಕಾನೂನು ರೂಪಿಸಲು ಮನವಿ:ಗಣಿ ಕಾರ್ಮಿಕರ ಕುಟುಂಬಗಳ ಸದಸ್ಯರ ಸಂಖ್ಯೆ ಹೆಚ್ಚಿದ್ದರೂ, ಹಾಲಿ ಶೆಡ್‌ಗಳಲ್ಲೇ ವಾಸಿಸುವ ಸಂಕಷ್ಟ ಎದುರಾಗಿದೆ, ಅವರು ಬದುಕು ಸರಿಹೋಗಲು ಕೂಡಲೇ ಸರ್ಕಾರ ಕೆಜಿಎಫ್‌ ನಗರದ ಅಕ್ಕಪಕ್ಕದಲ್ಲಿರುವ ಸರ್ಕಾರಿ ಜಮೀನು, ಬಿಜಿಎಂಎಲ್‌ ಒಡೆತನದಲ್ಲಿರುವ ಖಾಲಿ ಜಮೀನಿನಲ್ಲಿ ನಿವೇಶನಗಳನ್ನು ವಿಂಗಡಿಸಿ ನಿಯಮಾನುಸಾರ ವಸತಿ ಹೀನರಿಗೆ ಒದಗಿಸಲು ಅನುವಾಗುವಂತೆ ಕಾನೂನು ರೂಪಿಸಲು ಮನವಿ ಮಾಡಿದರು.

ಈ ಎಲ್ಲಾ ಕಾರಣಗಳಿಂದ ಚಿನ್ನದ ಗಣಿ ಕಾರ್ಮಿಕರು ವಾಸಿಸುವ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಕನಿಷ್ಠ ಮೂಲ ಸೌಲಭ್ಯ ಒದಗಿಸಲು ಸರ್ಕಾರ ವಿಶೇಷ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next