ವಿಧಾನ ಪರಿಷತ್ತು: “ಮುಖ್ಯಮಂತ್ರಿ ಸಿದ್ದರಾಮಯ್ಯ “ಭಾಗ್ಯಗಳನ್ನು’ ಕೊಡುವುದರಲ್ಲಿ ಸಿದ್ಧಹಸ್ತರು. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಆದರೆ ಅವರು ಬೆಂಗಳೂರಿಗೆ ನೈರ್ಮಲ್ಯ ಭಾಗ್ಯ ಕೊಟ್ಟಿಲ್ಲ. ಇವತ್ತು ಬೆಂಗಳೂರು ಐಟಿ ಸಿಟಿ ಹೋಗಿ ತಿಪ್ಪೆಗುಂಡಿಗಳ ಪಟ್ಟಣ ಆಗಿದೆ’ ಹೀಗೆಂದು ಸರ್ಕಾರದ ಕಾಲೆಳೆದವರು ಬಿಜೆಪಿಯ ಹಿರಿಯ ಸದಸ್ಯ ರಾಮಚಂದ್ರಗೌಡ.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಪ್ರಸ್ತಾಪದ ಮೇಲೆ ಮಾತನಾಡಿದ ಅವರು, ಈ ಸರ್ಕಾರ ಬೆಂಗಳೂರಿಗೆ ತಿಪ್ಪೆಗುಂಡಿ ಭಾಗ್ಯ ಕೊಟ್ಟಿದೆ. ನೋಡಿದ ಕಡೆಗೆಲ್ಲ ಕಸದ ರಾಶಿ ಕಾಣುತ್ತದೆ. ರಾಜಧಾನಿಯ ಕಸದ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ಸೋತಿದೆ ಎಂದರು. ಬಿಜೆಪಿ ಆಡಳಿತದ ಐದು ವರ್ಷಗಳಲ್ಲಿ ಬೆಂಗಳೂರಿನ ಸ್ಥಿತಿ ಹೇಗಾಗಿತ್ತು ಅದನ್ನೂ ಹೇಳಿ ಎಂದು ಕಾಂಗ್ರೆಸ್ ಸದಸ್ಯರು ಕೆಣಕಿದರು.
ಮೂಗುತಿಯೇ ಭಾರ: ಬಜೆಟ್ ಗಾತ್ರಕ್ಕಿಂತ ಸಾಲದ ಮೊತ್ತ ಹೆಚ್ಚಾಗಿದೆ. ಇದೊಂದು ರೀತಿ “ಮೂಗಿಗಿಂತ ಮೂಗುತಿ ಭಾರ’ ಎಂಬಂತಾಗಿದೆ. ಸಾಲ ಮಾಡಿ ತುಪ್ಪ ತಿನ್ನುವುದು ಸರಿಯಲ್ಲ ಎಂದು ರಾಮಚಂದ್ರಗೌಡ ಹೇಳಿದರು. ನಿಮ್ಮ ಸರ್ಕಾರದಲ್ಲಿ ಸಾಲ ಮಾಡಿರಲಿಲ್ಲವಾ? ಅಭಿವೃದ್ಧಿ ಯೋಜನೆಗಳು ಕಾರ್ಯಗತಗೊಳ್ಳಬೇಕಾದರೆ ಸಾಲ ಅನಿವಾರ್ಯ.
ಅಷ್ಟಕ್ಕೂ ರಾಜ್ಯ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಯಾವತ್ತೂ ಆರ್ಥಿಕ ಶಿಸ್ತು ಕಾಯ್ದೆಯನ್ನು ಮೀರಿಲ್ಲ. ರಾಜ್ಯ ಸರ್ಕಾರದ ಸಾಲದ ಬಗ್ಗೆ ಮಾತನಾಡುವ ನೀವು, ಕೇಂದ್ರದಲ್ಲಿ ಸಾಲ ಮಾಡಿ ದೇಶ ಬಿಟ್ಟು ಹೋದವರ ಬಗ್ಗೆಯೂ ಮಾತನಾಡಬೇಕು ಎಂದು ಉಗ್ರಪ್ಪ ಮತ್ತಿತರರು ತಿರುಗೇಟು ನೀಡಿದರು.
ಡ್ರಗ್ಸ್ ಸಿಗುತ್ತೆ: ಲೇಹರ್ ಸಿಂಗ್ ಮಾತನಾಡಿ, ಬೆಂಗಳೂರಿನ ಮಲ್ಯ ರಸ್ತೆಯಲ್ಲಿ ಎಂಟು ಕಡೆ ಡ್ರಗ್ಸ್ ಸಿಗುತ್ತದೆ. ಸುತ್ತಲಿನ ಪಬ್, ಬಾರ್ ಮತ್ತು ಕ್ಲಬ್‌ಗಳಲ್ಲಿ ಪ್ರತಿಷ್ಠಿತರು, ಪ್ರಭಾವಿಗಳ ಮಕ್ಕಳು ಮೋಜು ಮಾಡುತ್ತಾರೆ. ಎಲ್ಲಾ ಪಕ್ಷಗಳ ರಾಜಕಾರಣಿಗಳ ಮಕ್ಕಳೂ ಇದಕ್ಕೆ ಹೊರತಾಗಿಲ್ಲ. ಈ ಎಲ್ಲ ವಿಷಯ ಪೊಲೀಸರಿಗೆ ಗೊತ್ತಿದೆ.
ಆದರೆ, ಅವರು ಅಸಹಾಯಕರಾಗಿದ್ದಾರೆ. ಪೊಲೀಸ್ ಠಾಣೆಗಳ ಮೂಲಸೌಕರ್ಯಗಳ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಹೇಳಲಾಗಿದೆ. ಆದರೆ, ಪೊಲೀಸರು ಘನತೆ ಮತ್ತು ನೈತಿಕ ಸ್ಥೈರ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಬೇಕು. ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡಿದರು.
ಭ್ರಷ್ಟರು ಮತ್ತು ಕ್ರಿಮಿನಲ್‌ಗಳಿಗೆ ಚುನಾವಣೆಯಲ್ಲಿ ಟಿಕೆಟ್ ಕೊಡಬೇಡಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಮನವಿ ಮಾಡುತ್ತೇನೆ. ನಮ್ಮ (ಬಿಜೆಪಿ) ಪಕ್ಷಕ್ಕೂ ಇದೇ ವಿನಂತಿ ಮಾಡಿಕೊಳ್ಳುತ್ತೇನೆ.
-ಲೆಹರ್‌ಸಿಂಗ್, ಬಿಜೆಪಿ ಸದಸ್ಯ