ಶಹಾಪುರ: ಶಾಸಕನಾಗಿ ಆಯ್ಕೆಯಾದ ಪ್ರಥಮ ಹಂತದಲ್ಲಿಯೇ ತಿಳಿಸಿರುವಂತೆ, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದೇ ಮೊದಲ ಆದ್ಯತೆ ಎಂದು ಹೇಳಿದ್ದೆ, ಅದರಂತೆ ಪ್ರಸ್ತುತ ಕ್ಷೇತ್ರದಾದ್ಯಂತ ಸಾಕಷ್ಟು ಗ್ರಾಮ ಮತ್ತು ನಗರ, ಪಟ್ಟಗಳಲ್ಲಿ ಸಮರ್ಪಕ ಮೂಲ
ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ಗುರು ಪಾಟೀಲ್ ಶಿರವಾಳ ಹೇಳಿದರು.
ತಾಲೂಕಿನ ಅಣಬಿ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ನೂತನ ಸರ್ಕಾರಿ ಪ್ರೌಢಶಾಲಾ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಸರ್ಕಾರಿ ಪ್ರೌಢಶಾಲೆಗೆ ನೂತನ ಕಟ್ಟಡದ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೆ ಗ್ರಾಪಂ ವ್ಯಾಪ್ತಿ ಅಭಿವೃದ್ಧಿಗೆ 11 ಕೋಟಿ ವೆಚ್ಚದಲ್ಲಿ ವಿವಿಧ ಗ್ರಾಮಾಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಕಾಮಗಾರಿಗಳ ಗುಣಮಟ್ಟ ಬಗ್ಗೆ ನಿಗಾವಹಿಸಬೇಕು. ಸಂಬಂಧಿಸಿದ ಅ ಧಿಕಾರಿಗಳು ಮತ್ತು ಗುತ್ತಿಗೆದಾರರ ಸಮರ್ಪಕ ಕಾಮಗಾರಿಗಳನ್ನು ಉತ್ತಮವಾಗಿ ನಿರ್ಮಿಸಬೇಕು ಎಂದು ಸಲಹೆ ನೀಡಿದರು. ಕ್ಷೇತ್ರದ ಪ್ರತಿ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮಹಿಳಾ ಸಾರ್ವಜನಿಕ ಶೌಚಾಲಯ ಸೌಲಭ್ಯ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಎಲ್ಲೋ ಬೆರಳಣಿಕೆ ಗ್ರಾಮಗಳಲ್ಲಿ ಮಾತ್ರ ಅಲ್ಪಸ್ವಲ್ಪ ಕೆಲಸವಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ಅಮಾತೆಪ್ಪ ಕಂದಕೂರ, ತಾ.ಪಂ. ಅಧ್ಯಕ್ಷ ಹೊನ್ನಪ್ಪಗೌಡ ಹೋತಪೇಟ, ಮುಖಂಡ ರಾಮಚಂದ್ರ ಕಾಶಿರಾಜ, ಜಿಪಂ ವಿಭಾಗದ ಎಇಇ ಸೂಗರಡ್ಡಿ ಪಾಟೀಲ್, ಸ್ಥಳೀಯ ಗ್ರಾಮ ಅಧ್ಯಕ್ಷ ಸಂಗಣ್ಣ, ಸಾಯಬಣ್ಣ ಸೇರಿದಂತೆ ನೀರು ಸರಬರಾಜು ಇಲಾಖೆ ಸಹಾಯಕ ಇಂಜಿನಿಯರ್ ರಾಜಕುಮಾರ ಪತ್ತಾರ ಇತರರು ಇದ್ದರು.