ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮಾಜಿ ಸೈನಿಕರಿಗೆ ಸಿಗಬೇಕಾದ ಭೂಮಿ ಹಂಚಿಕೆ ಬಗ್ಗೆ ಮೊದಲ ಆದ್ಯತೆ ಕ್ರಮ ತೆಗೆದುಕೊಳ್ಳಿ ಎಂದು ಸಂಬಂಧಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಸೈನಿಕ ಮಂಡಳಿ ಸಭೆಯ ಅಧ್ಯಕ್ಷತೆವಹಿಸಿ ಮಾಜಿ ಸೈನಿಕರ ಸಮಸ್ಯೆಗಳ ಕುರಿತು ಚರ್ಚಿಸಿ, ಸೂಕ್ತ ಮಾರ್ಗದರ್ಶನವನ್ನು ಅಧಿಕಾರಿ ವಲಯಕ್ಕೆ ನೀಡಿದರು. ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ದೊರೆಯಬೇಕಾದ ಕ್ಯಾಂಟಿನ್, ವೈದ್ಯಕೀಯ ಸೌಲಭ್ಯ ಹಾಗೂ ಭೂಮಿ ಹಂಚಿಕೆ ಕುರಿತಂತೆ ಕೈಗೊಳ್ಳಬೇಕಾದ ಮುಂದಿನ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಹಿತ ಚಿಂತನೆಗಾಗಿ ಜಿಲ್ಲಾ ಸೈನಿಕ ಮಂಡಳಿಯಿಂದ ಕೈಗೊಳ್ಳಬೇಕಾದ ಕಾರ್ಯಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಂಕೋಲಾದಲ್ಲಿ ನಡೆದ ಪ್ರಕರಣದ ನಂತರ, ಮಾಜಿ ಶೈನಿಕರಿಗೆ ಗನ್, ಬಂದೂಕನಂತಹ ಆಯುಧಗಳನ್ನು ಇಟ್ಟುಕೊಳ್ಳಲು ನೀಡುವ ಪರವಾನಗಿ ಕುರಿತು ಗಂಭೀರವಾಗಿ ಚರ್ಚಿಸಬೇಕಾಗಿದೆ ಎಂದರು. ಮಾಜಿ ಸೈನಿಕರು ಶಾಲಾ ಕಾಲೇಜುಗಳಲ್ಲಿ ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇಂದಿನ ಯುವ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವ ಹಾಗೂ ದೇಶಾಭಿಮಾನ ಮೂಡಿಸುವ ಕಾರ್ಯ ಮಾಡಬೇಕು ಎಂದರು. ಇಂದಿನ ಯುವ ಪೀಳಿಗೆಯಲ್ಲಿ ಸ್ವಾತಂತ್ರ್ಯ ಬಂದ ಬಗೆ ವಿವರಿಸಬೇಕಾಗಿದೆ ಹಾಗೂ ದೇಶಾಭಿಮಾನ ಮೂಡಿಸುವ ಕಾರ್ಯವಾಗಬೇಕು. ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವಕ್ಕೆ ಮಾತ್ರ ಸೀಮಿತಗೊಳಿಸದೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಇರುವಂತೆ ಮಾಡಬೇಕು. ಬೇರೆ ಕ್ಷೇತ್ರಗಳಲ್ಲಿರುವ ವ್ಯಕ್ತಿಗಳಿಕಿಂತ ಸೈನಿಕರು ಜಾಗೃತಿ ಮೂಡಿಸಿದರೆ ಯುವ ಜನತೆಯಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮಾಜಿ ಸೈನಿಕರು, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶಾಲಾ ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಯುವಜನತೆ ಭಾರತೀಯ ಸೈನ್ಯ ಸೇರುವತ್ತ, ಗೌರವ ಮತ್ತು ಹೆಮ್ಮೆ ಪಡುವಂತಹ ಕಾರ್ಯ ಮಾಡಬೇಕೆಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಕಾರವಾರ ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ, ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು, ಕದಂಬ ನೌಕಾನೆಲೆ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.