ಹುಬ್ಬಳ್ಳಿ: ನೆರೆಯಿಂದ ಹಾನಿಯಾದ ಕಟ್ಟಡಗಳ ದುರಸ್ತಿ ಕಾಮಗಾರಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಸಂಬಂಧಿಸಿದ ಇಲಾಖೆ ಹಿರಿಯ ಅಧಿಕಾರಿಗಳು ಕೇವಲ ಗುತ್ತಿಗೆ ನೀಡುವುದಕ್ಕೆ ಸೀಮಿತವಾಗದೆ ಕಾಮಗಾರಿಗಳನ್ನು ಪರಿಶೀಲಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೌರವ ಗುಪ್ತಾ ಹೇಳಿದರು.
ಶುಕ್ರವಾರ ಇಲ್ಲಿನ ಸರ್ಕ್ನೂಟ್‌ಹೌಸ್‌ನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇಲಾಖೆ ಆಸ್ತಿ ದುರಸ್ತಿ ಕಾರ್ಯ ನಡೆಯುವಾಗ ಅದನ್ನು ಪರಿಶೀಲಿಸುವುದು ಆಯಾ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ನಿಗದಿತವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸೂಕ್ತ ಗಮನ ಹರಿಸಬೇಕು. ಕಟ್ಟಡ ಬಿದ್ದಿರುವುದನ್ನು ತೋರಿಸಿ ಸುಮ್ಮನೆ ಕೂಡುವುದು ಸರಿಯಲ್ಲ. ಪ್ರತಿಯೊಂದು ಇಲಾಖೆ ಹಿರಿಯ ಅಧಿಕಾರಿಗಳು ನೆರೆಯಿಂದ ಹಾನಿಯಾದ ಕಟ್ಟಡಗಳ ದುರಸ್ತಿ, ಪರಿಹಾರ ಕಾರ್ಯಗಳ ಕುರಿತು ಸೂಕ್ತ ನಿಗಾ ವಹಿಸಬೇಕು ಎಂದು ಹೇಳಿದರು.
ಮುಹೂರ್ತ ಇಲ್ಲವೇ?: ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ 265 ಕಾಮಗಾರಿಗಳ ಪ್ರಗತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಗೌರವ ಗುಪ್ತಾ, ಸಾಕಷ್ಟು ಕಾಮಗಾರಿಗಳು ಇನ್ನೂ ಬಾಕಿ ಉಳಿದಿವೆ. ಉಳಿದವುಗಳನ್ನು ಕೈಗೊಳ್ಳಲು ಮಹೂರ್ತ ಸರಿಯಿಲ್ಲವೆ? ನಮ್ಮ ಮನೆಗಳು ಬಿದ್ದಿದ್ದರೆ ತುರ್ತಾಗಿ ದುರಸ್ತಿ ಮಾಡಿಸುತ್ತಿರಲಿಲ್ಲವೆ ? ಅದರಂತೆ ಶಾಲೆಗಳ ದುರಸ್ತಿ ಕೂಡ ಅವಶ್ಯವಾಗಿದೆ. ಶಾಲೆ ಕಟ್ಟಡ ಬಿದ್ದಿದೆ ಎಂದು ಸುಮ್ಮನೆ ಕೂರಲು ಆಗುತ್ತದೆಯೆ ? ನಿಮ್ಮ ಈ ವರ್ತನೆ ನಿರ್ಲಕ್ಷ್ಯವನ್ನು ತೋರುತ್ತದೆ. ಈ ರೀತಿ ಕೆಲಸ ಮಾಡಿದರೆ ಆಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಡಕಾಡಿದ ಅಧಿಕಾರಿಗಳು: ಗಾಮನಗಟ್ಟಿ ಕೈಗಾರಿಕೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ 110 ಕೆವಿ ವಿದ್ಯುತ್ ಪ್ರಸರಣ ಕೇಂದ್ರದ ಕುರಿತು ಮಾಹಿತಿ ನೀಡುವಲ್ಲಿ ಕೆಪಿಟಿಸಿಎಲ್ ಹಾಗೂ ಕೆಐಎಡಿಬಿ ಅಧಿಕಾರಿಗಳು ತಡಕಾಡಿದ ಪ್ರಸಂಗ ನಡೆಯಿತು. ಕೇಂದ್ರ ನಿರ್ಮಾಣದ ಹೊಣೆ ಯಾರು ಎನ್ನುವ ವಿಚಾರದಲ್ಲಿ ಎರಡು ಇಲಾಖೆ ಅಧಿಕಾರಿಗಳು ನಮ್ಮದಲ್ಲ ಎಂದು ಹೇಳಿಕೆ ನೀಡಿದರು. ಈ ಕುರಿತು ಹೆಚ್ಚಿನ ಮಾಹಿತಿ ಕೊಡಿ ಎಂದು ಕೇಳುತ್ತಿದ್ದಂತೆ ಕೆಐಎಡಿಬಿ ಅಧಿಕಾರಿಯೊಬ್ಬರು ಮೇಲಧಿಕಾರಿ ಫೋನ್ ಕರೆ ಮಾಡಲು ಹೊರಹೋದರು. ಕೆಲ ಸಮಯ ಕಳೆದರೂ ಬಾರದಿದ್ದಾಗ ಅವರನ್ನು ಕರೆಯಲು ಐವರು ಅಧಿಕಾರಿಗಳು ಹೊರ ಹೋದ ಘಟನೆ ನಡೆಯಿತು. ಮುಂದಿನ ಸಭೆಯಲ್ಲಿ ಸಮರ್ಪಕ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ 103 ಕಾಮಗಾರಿಗಳ ಪೈಕಿ ಕೇವಲ 12 ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಕುಡಿಯುವ ನೀರಿನ ವಿಚಾರದಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು, ಮುಂದಿನ 20 ದಿನಗಳಲ್ಲಿ ಉಳಿದ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಅರ್ಹರನ್ನು ಆಯ್ಕೆ ಮಾಡಿ: ಡಿ.ದೇವರಾಜ ಅರಸು, ತಾಂಡ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳ ಯೋಜನೆಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲವಾಗಿವೆ. ಇದರಿಂದ ಅರ್ಹ ಫಲಾನುಭವಿಗಳು ಸೂಕ್ತ ಕಾರ್ಯಕ್ಕೆ ಸರಕಾರದ ಯೋಜನೆ ದೊರೆಯದೆ ಪರದಾಡುವಂತಾಗುತ್ತದೆ. ಫಲಾನುಭವಿಗಳ ಆಯ್ಕೆಯೊಂದಿಗೆ ಆ ಯೋಜನೆಯನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತಾನೆ ಎಂಬುವುದರ ಕುರಿತು ಪರಿಶೀಲಿಸಬೇಕು ಎಂದರು.
ನಗರದ ರಸ್ತೆ ಅಭಿವೃದ್ಧಿ ಕಾರ್ಯ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ನಡೆಯುತ್ತಿದ್ದು, ಕೆಲವೆಡೆ ಭೂ ಸ್ವಾಧೀನ ಅಗತ್ಯವಿದೆ. ಇದರಿಂದ ಯೋಜನೆಗೆ ಕೈಗೆತ್ತಿಕೊಳ್ಳಲು ಸಾಕಷ್ಟು ಹಿನ್ನಡೆಯಾಗಿದೆ. ಭೂಸ್ವಾಧೀನ ಮಾಡಿಕೊಟ್ಟರೆ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಗೌರವಗುಪ್ತಾ, ಆದಷ್ಟು ಬೇಗ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಕಾರ್ಯ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.