Advertisement

ಸದೃಢ ರಾಜ್ಯ ಕಟ್ಟಲು ಮತ್ತಷ್ಟು ಶಕ್ತಿ ಕೊಡಿ: ಸಿಎಂ ಬೊಮ್ಮಾಯಿ

09:57 PM Mar 04, 2023 | Team Udayavani |

ಚಿತ್ರದುರ್ಗ: ಯೋಜನೆಗಳನ್ನು ಮುಂದುವರಿಸಲು ಹಾಗೂ ರಾಜ್ಯವನ್ನು ಸದೃಢವಾಗಿ ಕಟ್ಟಲು ಮತ್ತಷ್ಟು ಶಕ್ತಿ ನೀಡುವಂತೆ ಜನ ಆಶೀರ್ವದಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೋರಿದರು.

Advertisement

ಶನಿವಾರ ನಡೆದ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಶ್ರೀಮಂತವಾದರೆ ಜನ ಕೂಡ ಶ್ರೀಮಂತರಾಗುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರ ಅಭ್ಯುದಯಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿ ಕಟ್ಟ ಕಡೆಯ ವ್ಯಕ್ತಿಯ ಕಲ್ಯಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.

ಜನಸಾಮಾನ್ಯರ, ದುಡಿಯುವ ವರ್ಗದಿಂದ ರಾಜ್ಯ ಕಟ್ಟಲು ಸಾಧ್ಯವೇ ವಿನಃ ಶ್ರೀಮಂತರಿಂದ ಅಲ್ಲ. ದುಡಿಯುವ ವರ್ಗದ ಬಳಿ ಹಣ ಇರಬೇಕು, ಈ ವರ್ಗ ಸಶಕ್ತವಾಗಿರಬೇಕೆಂಬ ಕಾರಣಕ್ಕೆ ಈ ಸಮಾವೇಶ ನಡೆಸಲಾಗುತ್ತಿದೆ. ಪ್ರತೀ ವ್ಯಕ್ತಿಗೂ ಆತ್ಮವಿಶ್ವಾಸ ಬಹಳ ಮುಖ್ಯ. ಈ ಸಮಾವೇಶ ದುಡಿಯುವ ವರ್ಗದಲ್ಲಿ ಆತ್ಮವಿಶ್ವಾಸ ಮೂಡಿಸಲಿದೆ ಎಂದರು.

ಸರಕಾರದ ಕೆಲಸ ಬದುಕು ಕಟ್ಟಿಕೊಡುವುದು. ಅಧಿಕಾರಿಗಳು ಆಡಳಿತ ಮಾಡುತ್ತಾರೆ. ಆಳುವುದು ಬೇರೆ, ಆಡಳಿತ ಬೇರೆ. ಆಡಳಿತಕ್ಕೆ ಆಡಳಿತ ಯಂತ್ರ ಇದೆ. ಆದರೆ ಜನರ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕೊಡುವುದು, ಜನಶಕ್ತಿಯಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಆಳುವವರು ಮಾಡಬೇಕಿದೆ ಎಂದರು.

ಜನಪರ ರಾಜಕಾರಣ ಅಗತ್ಯ
ಇಂದಿನ ಆವಶ್ಯಕತೆ ಪವರ್‌ ಪಾಲಿಟಿಕ್ಸ್‌ ಅಲ್ಲ, ಜನಪರ ರಾಜಕಾರಣ. ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್‌. ಯಡಿಯೂರಪ್ಪ ಜನಪರ ರಾಜಕಾರಣ ಮಾಡಿದ್ದರಿಂದ ಅನೇಕ ಕುಟುಂಬಗಳಲ್ಲಿ ಆತ್ಮವಿಶ್ವಾಸ ಮೂಡಿದೆ, ಸ್ವಾವಲಂಬನೆಯ ಬದುಕು ಸಿಕ್ಕಿದೆ.

Advertisement

ಜನಕಲ್ಯಾಣವೇ ಜನಪರ ನೀತಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದನ್ನೇ ಮಾಡುತ್ತಿವೆ. ಪ್ರಧಾನಿ ಕಿಸಾನ್‌ ಸಮ್ಮಾನ್‌ ಯೋಜನೆ ರೂಪಿಸಿ ರೈತರಿಗೆ ಬೀಜ, ಗೊಬ್ಬರಕ್ಕೆ ಹಣ ಸಿಗುವಂತೆ ಮಾಡಿದ್ದಾರೆ. ಹಿಂದಿನ ಯಾವ ಪ್ರಧಾನಿಗಳೂ ಈ ಆಲೋಚನೆ ಮಾಡಿರಲಿಲ್ಲ. 53.43 ಲಕ್ಷ ಕುಟುಂಬಗಳಿಗೆ 16 ಸಾವಿರ ಕೋಟಿ ರೂ.ಗಳು ಕಳೆದ ನಾಲ್ಕು ವರ್ಷಗಳಲ್ಲಿ ಖಾತೆಗೆ ಬಂದಿದೆ. ಬಡವರಿಗೆ 17 ಲಕ್ಷ ಮನೆ ಕೊಟ್ಟಿದ್ದಾರೆ. 12 ಲಕ್ಷಕ್ಕಿಂತ ಹೆಚ್ಚು ಶೌಚಾಲಯ ನಿರ್ಮಾಣ ಮಾಡಲಾಗಿದೆ ಎಂದರು.

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಬಿ.ಸಿ. ಪಾಟೀಲ್‌, ಹಾಲಪ್ಪ ಆಚಾರ್‌, ಆನಂದ್‌ ಸಿಂಗ್‌, ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್‌, ಗೂಳಿಹಟ್ಟಿ ಶೇಖರ್‌, ಪ್ರೊ| ಲಿಂಗಪ್ಪ, ಕೆ.ಎಸ್‌. ನವೀನ್‌, ಚಿದಾನಂದ ಗೌಡ ಉಪಸ್ಥಿತರಿದ್ದರು.

ಸೌಭಾಗ್ಯ ತಲುಪದೇ ದೌರ್ಭಾಗ್ಯ ಆಯ್ತು
ಎಲ್ಲ ಸೌಭಾಗ್ಯ ಕೊಡುತ್ತೇವೆಂದು ಜನರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭ್ರಮಾಲೋಕದಲ್ಲಿಟ್ಟಿದ್ದರು. ಆದರೆ ಜನರಿಗೆ ಯಾವ ಯೋಜನೆಗಳೂ ತಲುಪದೇ ದೌರ್ಭಾಗ್ಯ ಆಯ್ತು. ಎಸ್‌ಸಿ-ಎಸ್‌ಟಿ ಯೋಜನೆಗಳು, ಹಾಸ್ಟೆಲ್‌ ಮಕ್ಕಳ ಹಾಸಿಗೆ, ದಿಂಬಿನಲ್ಲಿ ಭ್ರಷ್ಟಾಚಾರ ಮಾಡಿದ್ದರು. ಗಂಗಾ ಕಲ್ಯಾಣ ಯೋಜನೆ, ಅಕ್ಕಿ ಕಳ್ಳ ಸಾಗಣೆ ಇವರ ಆಡಳಿತ ವೈಖರಿಯನ್ನು ತೋರಿಸುತ್ತದೆ. ಆದರೆ ನಮ್ಮ ಅವ ಧಿಯಲ್ಲಿ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ತಲುಪುತ್ತಿದೆ.

ಇದನ್ನು ಕಂಡು ಕಾಂಗ್ರೆಸ್‌ನವರು ದಿಗಿಲುಗೊಂಡಿದ್ದಾರೆ. ಮೀಸಲಾತಿ ಹೆಚ್ಚಳ ಸಾಧ್ಯವೇ ಇಲ್ಲ ಎನ್ನುತ್ತಿದ್ದರು. ಆದರೆ ಮೀಸಲಾತಿ ಹೆಚ್ಚಳ ಮಾಡುವ  ದಿಟ್ಟ ನಿರ್ಧಾರವನ್ನು ಬಿಜೆಪಿ ಸರಕಾರ ಮಾಡಿದೆ. ಯಾವುದೇ ಶಕ್ತಿ ಇದನ್ನು ತಡೆಯಲು ಸಾಧ್ಯವಿಲ್ಲ. ಕಾನೂನಾತ್ಮಕವಾಗಿ ನಾವೇ ಇದನ್ನು ಅನುಷ್ಠಾನಕ್ಕೆ ತರಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next