ಹುಬ್ಬಳ್ಳಿ: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರಿಗೆ ನೈತಿಕ ಬೆಂಬಲ ತೋರಿ ಅವರಿಗೆ ಧೈರ್ಯ ತುಂಬುವ ಕೆಲಸ ಆಗಬೇಕು ಎಂದು ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಹೇಳಿದರು.
ಸೋಮವಾರ ವಿಶ್ವ ಕ್ಯಾನ್ಸರ್ ದಿನ ಪ್ರಯುಕ್ತ ದೇಸಾಯಿ ವೃತ್ತ ಹಾಗೂ ರೈಲ್ವೆ ನಿಲ್ದಾಣದಲ್ಲಿ ಕ್ಯಾನ್ಸರ್ ಕುರಿತು ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್, ಸ್ವರ್ಣ ಗ್ರುಪ್ ಹಾಗೂ ನೈಋತ್ಯ ರೈಲ್ವೆ ವಲಯ ವತಿಯಿಂದ ಆಯೋಜಿಸಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಹಾಗೂ ಕಿತ್ತಳೆ-ನೀಲಿ ಬಣ್ಣದ ವಿದ್ಯುತ್ ದೀಪಗಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ಯಾನ್ಸರ್ ಕಾಯಿಲೆಯು ರೋಗಿಯ ಜೊತೆಗೆ ಅವರ ಕುಟುಂಬವನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಈ ಕಾಯಿಲೆಯಿಂದ ಪಾರಾಗಲು ಇಡೀ ಆಸ್ತಿಯನ್ನು ಕಳೆದುಕೊಂಡು ಕೊನೆಗೆ ಸಾವನ್ನಪ್ಪುವ ಘಟನೆಗಳನ್ನು ನೋಡಿದ್ದೇವೆ. ಹೀಗಾಗಿ ಈ ಕಾಯಿಲೆ ಬಗ್ಗೆ ಉದಾಸೀನ ಮಾಡದೆ ಸಕಾಲಕ್ಕೆ ಚಿಕಿತ್ಸೆ ಪಡೆದು ಆರಂಭದ ಹಂತದಲ್ಲೇ ಗುಣಮುಖರಾಗಬೇಕು. ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ರೋಗದ ಕುರಿತು ಮಾಹಿತಿ ಪಡೆದು ಜಾಗೃತರಾಗಬೇಕು ಎಂದು ಹೇಳಿದರು.
ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಸಿಒಒ ಡಾ| ಜೈಕಿಶನ್ ಅಗಿವಾಲ ಮಾತನಾಡಿ, ವಿಶ್ವ ಕ್ಯಾನ್ಸರ್ ದಿನ ಪ್ರಯುಕ್ತ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಗರದಲ್ಲಿ ಮೊದಲನೆಯದಾಗಿದೆ. ಪ್ರತಿವರ್ಷ ಸುಮಾರು 18 ಲಕ್ಷ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಮುಂಜಾಗ್ರತೆ ಅಥವಾ ಮೊದಲ ಹಂತದಲ್ಲೇ ಚಿಕಿತ್ಸೆ ಪಡೆಯದ ಕಾರಣ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ದೇಸಾಯಿ ವೃತ್ತದಲ್ಲಿ ಕಿತ್ತಳೆ ಹಾಗೂ ನೀಲಿ ಬಣ್ಣದ ವಿದ್ಯುತ್‌ದೀಪಗಳನ್ನು ಕಾಯಂ ಉಳಿಸಲಾಗುವುದು ಎಂದರು.
ಸ್ವರ್ಣ ಗ್ರುಪ್‌ನ ಡಾ| ವಿಎಸ್‌ವಿ ಪ್ರಸಾದ ಮಾತನಾಡಿ, ಕಾಯಿಲೆ ಬಾರದಂತೆ ಎಚ್ಚರ ವಹಿಸುವುದು ಉತ್ತಮ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಲಯನ್ಸ್ ಕ್ಲಬ್, ಲಯನ್ಸ್ ಪರಿವಾರ ಹಾಗೂ ರೋಟರಿ ಕ್ಲಬ್ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಎಜಿಎಂ ಪಿ.ಕೆ. ಮಿಶ್ರಾ, ಡಾ| ಸಂಜಯ ಮಿಶ್ರಾ, ಡಾ| ರುದ್ರೇಶ ತಬಾಲಿ ಇನ್ನಿತರರಿದ್ದರು.