Advertisement

ಕೆ.ಆರ್‌.ಪೇಟೆಗೂ ಮೆಡಿಕಲ್‌ ಕಾಲೇಜು ಕೊಡಿ

12:05 AM Nov 10, 2019 | Team Udayavani |

ಮಂಡ್ಯ: ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್‌ ಕಾಲೇಜು ಮಂಜೂರು ಮಾಡಿದ ಮಾದರಿಯಲ್ಲೇ ಕೆ.ಆರ್‌.ಪೇಟೆಗೂ ಮೆಡಿಕಲ್‌ ಕಾಲೇಜು ಮಂಜೂರು ಮಾಡುವಂತೆ ಕೆ.ಆರ್‌.ಪೇಟೆ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಎದುರು ಬೇಡಿಕೆ ಇಟ್ಟಿದ್ದಾರೆ.

Advertisement

ಕೆ.ಆರ್‌.ಪೇಟೆಯಲ್ಲಿ ಆರೋಗ್ಯ ಇಲಾಖೆ ಮತ್ತು ನಾರಾಯಣಗೌಡ ಅಭಿಮಾನಿಗಳ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್‌ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಂಡ್ಯದ ಮಣ್ಣಿನಲ್ಲಿ ಹುಟ್ಟಿ, ಶಿವಮೊಗ್ಗದಲ್ಲಿ ಬೆಳೆದ ಯಡಿಯೂರಪ್ಪನವರು, ರಾಜ್ಯದ ಸಿಎಂ ಆಗಿದ್ದಾರೆ. ಅವರ ತಂದೆಯವರ ಹೆಸರಿನಲ್ಲಿ ಮೆಡಿಕಲ್‌ ಕಾಲೇಜು ನೀಡಿದರೆ ತವರು ಜಿಲ್ಲೆಗೆ ಕೊಡುಗೆ ನೀಡಿದಂತಾಗುವುದು ಎಂದು ಹೇಳಿದರು.

“ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಾನು ಯಡಿಯೂರಪ್ಪನವರ ಮನೆಗೆ ಹೋಗಿದ್ದೆ. 700 ಕೋಟಿ ರೂ.ಅನುದಾನವನ್ನು ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಕೇಳಿದ್ದೆ. ಆದರೆ, ಅವರು ಕೊಡಲಿಲ್ಲ ಎಂದು ಹೇಳಿಕೊಂಡೆ. ನನ್ನ ಮಾತನ್ನು ಕೇಳಿದ ಯಡಿಯೂರಪ್ಪನವರು, ಕೆ.ಆರ್‌.ಪೇಟೆಗೆ ಸಾವಿರ ಕೋಟಿ ರೂ.ಅನುದಾನ ಕೊಡುತ್ತೇನೆ ಎಂದಾಗ ನನಗೆ ಬಹಳ ಖುಷಿಯಾಯಿತು.

ಅದಕ್ಕಾಗಿ ಅವರ ಬೆಂಬಲಕ್ಕೆ ನಿಂತೆ. ಈಗಾಗಲೇ ಕ್ಷೇತ್ರಕ್ಕೆ 212 ಕೋಟಿ ರೂ.ಅನುದಾನ ನೀಡಿದ್ದಾರೆ. ಅದೇ ರೀತಿ ಮೆಡಿಕಲ್‌ ಕಾಲೇಜನ್ನು ನೀಡಿದರೆ ಹೆಚ್ಚು ಅನುಕೂಲವಾಗಲಿದೆ. ಯಡಿಯೂರಪ್ಪನವರು ಮುಂದಿನ ಮೂರೂವರೆ ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಅವರು ನಮ್ಮ ತಾಲೂಕಿನ ಮುಖ್ಯಮಂತ್ರಿಯೂ ಆಗಿರುವುದರಿಂದ ನಮಗೆ ಯಾವುದೇ ಭಯ ಇಲ್ಲ’ ಎಂದರು.

ಕಾರ್ಯಕ್ರಮದಲ್ಲಿ ನಾರಾಯಣಗೌಡರು, ಯಡಿಯೂರಪ್ಪ ಅವರಿಗೆ ಕಾಮಧೇನುವಿನ ಪ್ರತಿಮೆ ನೀಡಿ, ಕೈಗೆ ಬೆಳ್ಳಿಯ ಖಡ್ಗ ನೀಡಿ, ಸನ್ಮಾನಿಸಿದರು. ಉಪ ಮುಖ್ಯಮಂತ್ರಿ ಡಾ.ಅಶ್ವಥ ನಾರಾಯಣ, ಸಚಿವ ಆರ್‌.ಅಶೋಕ್‌, ಸಂಸದೆ ಸುಮಲತಾ ಅಂಬರೀಶ್‌ ವೇದಿಕೆಯಲ್ಲಿದ್ದರು. ನಾರಾಯಣಗೌಡರ ಪತ್ನಿ ದೇವಕಿಯವರು ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಯಿತು.

Advertisement

ನಾರಾಯಣಗೌಡ ಬಿಜೆಪಿ ಅಭ್ಯರ್ಥಿ?: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ನಾರಾಯಣಗೌಡರು ಒಬ್ಬ ಅಪರೂಪದ ಸಜ್ಜನ ರಾಜಕಾರಣಿ. ಇಂತಹ ವ್ಯಕ್ತಿಯನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಿರಿ. ಆದರೆ, ಬೇರೆ, ಬೇರೆ ಕಾರಣಗಳಿಂದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು. ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಅವರಿಗೆ ನೀವು ಮತ್ತೆ ಆಶೀರ್ವಾದ ಮಾಡಬೇಕು ಎನ್ನುವ ಮೂಲಕ ಕೆ.ಆರ್‌.ಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಬ ಗುಟ್ಟನ್ನು ಪರೋಕ್ಷವಾಗಿ ಬಿಚ್ಚಿಟ್ಟರು.

ಮಂಡ್ಯ ಜಿಲ್ಲೆಯಲ್ಲಿ ಎರಡು ಪ್ರಮುಖ ಕಾರ್ಖಾನೆಗಳು ಸ್ಥಗಿತವಾಗಿರುವುದರಿಂದ ಕಾರ್ಯ ನಿರ್ವಹಿಸುತ್ತಿರುವ ಇತರ ಕಾರ್ಖಾನೆಗಳಿಗೆ ರೈತರ ಕಬ್ಬನ್ನು ಕಟಾವು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಆದರೂ ಕಬ್ಬು ಉಳಿದು ಕೊಂಡರೆ ಪಕ್ಕದ ರಾಜ್ಯಗಳಲ್ಲಿರುವ ಕಾರ್ಖಾನೆಗಳೊಂದಿಗೆ ಮಾತನಾಡಿ, ನಮ್ಮ ಜಿಲ್ಲೆಯ ಕಬ್ಬನ್ನು ಹೊರ ರಾಜ್ಯಕ್ಕೆ ಸಾಗಣೆ ಮಾಡಿಸುವ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ.
-ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next