Advertisement

ರಾಮರಾಜ್ಯ ನಿರ್ಮಿಸಲು ನನಗೊಂದು ಅವಕಾಶ ನೀಡಿ

01:00 PM Jan 09, 2018 | |

ಮೈಸೂರು: ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಐಎಎಸ್‌ ಅಧಿಕಾರಿಗಳು, ರಾಜಕಾರಣಿಗಳ ಸಲಹೆ ಬದಲಿಗೆ, ವಿವಿಧ ಕ್ಷೇತ್ರದ ತಜ್ಞರನ್ನು ತಿಂಗಳಲ್ಲಿ ನಾಲ್ಕೈದು ಬಾರಿ ಹಾಗೂ ಪ್ರಗತಿಪರ ರೈತರನ್ನು ತಿಂಗಳಲ್ಲಿ ಒಂದು ದಿನ ವಿಧಾನಸೌಧಕ್ಕೆ ಕರೆಸಿಕೊಂಡು ಅವರು ನೀಡುವ ಸಲಹೆಯಂತೆ ಆಡಳಿತ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ಮೈಸೂರಿನ ಕಲಾಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಬಲ್ಲವರೊಡನೆ ಬೌದ್ಧಿಕ ಚಿಂತನೆ ಶಿಕ್ಷಣ ಕ್ಷೇತ್ರದ ತಜ್ಞರ ಜತೆಗೆ ಸಂವಾದ ನಡೆಸಿ ಮಾತನಾಡಿದ ಅವರು, ನನ್ನ ಹೆಸರಿನ ಜತೆಗೆ ಮಾಜಿ ಮುಖ್ಯಮಂತ್ರಿ ಎಂಬುದು ಸಾಯುವವರೆಗೂ ಇರುತ್ತದೆ. ಆದರೆ, ರಾಜ್ಯದ ಆರೂವರೆ ಕೋಟಿ ಜನರ ಆರ್ಶೀವಾದದಿಂದ ನಾನು ಮುಖ್ಯಮಂತ್ರಿಯಾಗಲಿಲ್ಲ.

ಪಕ್ಷ ಉಳಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ಮೊದಲ ಬಾರಿಗೆ ಶಾಸಕನಾಗಿದ್ದ ನಾನು ಒತ್ತಡಕ್ಕೆ ಸಿಲುಕಿ ಮುಖ್ಯಮಂತ್ರಿ ಆಗಬೇಕಾಯಿತು. ಆ ಸಂದರ್ಭದಲ್ಲಿ ತಂದೆಯವರು ಹೇಳಿದ ಮಾತುಗಳನ್ನು ಸವಾಲಾಗಿ ಸ್ವೀಕರಿಸಿ 20 ತಿಂಗಳ ಕಾಲ ಜನ ಮೆಚ್ಚುವ ರೀತಿಯಲ್ಲಿ ಆಡಳಿತ ನೀಡಿದ್ದೇನೆ. ನನ್ನ ವೈಯಕ್ತಿಕ ಕಾರಣಕ್ಕೆ ನಾನು ಇನ್ನೊಮ್ಮೆ ಮುಖ್ಯಮಂತ್ರಿ ಆಗಬೇಕಾಗಿಲ್ಲ, ಹಣ, ಆಸ್ತಿಯನ್ನೂ ಮಾಡಬೇಕಾಗಿಲ್ಲ.

ನಿಮಗಾಗಿ 2ನೇ ಜನ್ಮ ತಾಳಿ ಬಂದಿದ್ದೇನೆ. ಇಸ್ರೇಲ್‌ ಪ್ರವಾಸದ ವೇಳೆ ಅಲ್ಲಿನ ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಪರಿಗಣಿಸಿ, ರಾಜ್ಯದಲ್ಲಿ ಅಳವಡಿಸುವ ಬಗ್ಗೆ ತನ್ನದೇ ಆದ ದೊಡ್ಡ ಮಟ್ಟದ ಕನಸು, ಆಸೆ ಇಟ್ಟುಕೊಂಡಿದ್ದೇನೆ. ಗಾಂಧಿಕಂಡ ರಾಮರಾಜ್ಯದ ಕನಸು ನನಸು ಮಾಡುತ್ತೇನೆ. ನನಗೊಮ್ಮೆ ಆಶೀರ್ವಾದ ಮಾಡಿ ಅಧಿಕಾರ ಕೊಡಿ ಎಂದು ಮನವಿ ಮಾಡಿದರು.

ಮಾಧ್ಯಮಗಳಿಗೂ ಮನವಿ: ಮಾಧ್ಯಮಗಳಲ್ಲಿ ಹಲವು ರೀತಿಯ ಸಮೀಕ್ಷೆಗಳು ಬರುತ್ತಿವೆ. ಒಬ್ಬರು ಜೆಡಿಎಸ್‌ಗೆ 40 ಸ್ಥಾನ ಎಂದರೆ, ಮತ್ತೂಬ್ಬರು 25 ಸ್ಥಾನ ಎನ್ನುತ್ತಿದ್ದಾರೆ. ಆದರೆ, ರಾಜ್ಯದ ಜನತೆ ನಮ್ಮ ಪರ ಇದ್ದಾರೆ. ಬಹುಮತದ ಸರ್ಕಾರ ಬರಲಿದೆ ಎಂಬ ವಿಶ್ವಾಸವಿದೆ. ಈ ರೀತಿಯ ಸಮೀಕ್ಷೆಗಳಿಂದ ರಾಜ್ಯದ ಜನತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಾಧ್ಯಮಗಳ ಸಮೀಕ್ಷೆಗಳನ್ನು ನೋಡಿ ರಾಜ್ಯದ ಜನತೆ ಸಮ್ಮಿಶ್ರ ಸರ್ಕಾರ ಎಂದು ನಿರ್ಧಾರ ಮಾಡಬೇಡಿ. ಜೆಡಿಎಸ್‌ 113ರ ಗುರಿ ತಲುಪಲು ಅವಕಾಶ ಮಾಡಿಕೊಡಿ. ಎಂತೆಂಥಾ ಅಪಾತ್ರರೆಲ್ಲ ರಾಜ್ಯದಲ್ಲಿ ಆಡಳಿತ ನಡೆಸಿದ್ದಾರೆ. ನನಗೊಂದು ಅವಕಾಶ ಕೊಡಿ ಎಂದರು.

Advertisement

ಭರಪೂರ ಭರವಸೆ: ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ 52 ಸಾವಿರ ಕೋಟಿ ರೂ. ಸಾಲಮನ್ನಾ, ಒಂದು ತಿಂಗಳಲ್ಲಿ ಡಾ.ಸ್ವಾಮಿನಾಥನ್‌ ವರದಿ ಜಾರಿ, ಜನರು ಯಾವುದೇ ಅಪಾಯಿಂಟ್‌ಮೆಂಟ್‌ ಇಲ್ಲದೆ ವಿಧಾನಸೌಧಕ್ಕೆ ಬಂದು ಮುಖ್ಯಮಂತ್ರಿಯನ್ನು ನೇರವಾಗಿ ಭೇಟಿ ಮಾಡಬಹುದಾದ ವ್ಯವಸ್ಥೆ ಜಾರಿ, ಸಣ್ಣಪುಟ್ಟ ಹಳ್ಳಿಗಳಿಗೂ ವೈಫೈ ಸೌಲಭ್ಯ, ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ 25 ಸಾವಿರ ಕೋಟಿ ಮೀಸಲು,

ಇಸ್ರೇಲ್‌ನ ರೈತರನ್ನು ರಾಜ್ಯಕ್ಕೆ ಕರೆಸಿ ನಮ್ಮ ರೈತರಿಗೆ ತಿಳುವಳಿಕೆ ಕೊಡಿಸಲು ಕ್ರಮ, ವೈಯಕ್ತಿಕ ನಿಂದನೆಗಿಳಿದಿರುವ ಸಾಮಾಜಿಕ ಜಾಲತಾಣಗಳ ನಿರ್ಬಂಧಕ್ಕೆ ಚಿಂತನೆ, ಅನುದಾನಕ್ಕಾಗಿ ಕೇಂದ್ರದ ಮುಂದೆ ಕೈಯೊಡ್ಡಿ ನಿಲ್ಲದೆ, ಬೇರೆ ಕಡೆಗೆ ಹೋಗುತ್ತಿರುವ ರಾಜ್ಯದ ಸಂಪತ್ತಿನ ಸದ್ಬಳಕೆಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ರಾಜ್ಯದ ಜನತೆಗೆ ಸೂರು, ಕುಡಿಯುವ ನೀರು, ಆರೋಗ್ಯ ಸೌಲಭ್ಯ, ಶಿಕ್ಷಣ ಒದಗಿಸಲು ಕ್ರಮವಹಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಹರಾಜು ಹಾಕುವ ಸ್ಥಿತಿ ಬಂದಿದೆ: ರಾಜ್ಯಪಾಲರಿಗೆ ಹಿಂದಿನಂತೆ ಈಗ ಘನತೆ ಉಳಿದಿಲ್ಲ. ರಾಜ್ಯಪಾಲರ ಕಚೇರಿಯಲ್ಲಿ ರಾಜಕೀಯ ನಡೆಯುತ್ತಿರುವುದರಿಂದ ಜನ ಬೀದಿ ಬೀದಿಯಲ್ಲಿ ರಾಜ್ಯಪಾಲರನ್ನು ಹರಾಜು ಹಾಕುವ ಸ್ಥಿತಿ ಬಂದಿದ್ದು, ರಾಜ್ಯಪಾಲರ ಘನತೆ ಕುಂದಿದೆ. ಈ ಪರಿಸ್ಥಿತಿ ಬದಲಾವಣೆಯಾಗಬೇಕು ಎಂದರು.

ಕುಲಪತಿಗಳ ಹುದ್ದೆ ಕೊಡಲು ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಸ್ಥಾಪಿಸಿ ಮೂಲಸೌಕರ್ಯ ಕೊಡದಿದ್ದರೆ ಪ್ರಯೋಜನವೇನು ಎಂದು ಪ್ರಶ್ನಿಸಿದ ಅವರು, ಉನ್ನತ ಶಿಕ್ಷಣ ಸಚಿವರೇ ಸಾರ್ವಜನಿಕವಾಗಿ ಕುಲಪತಿಗಳು ದರೋಡೆಕೋರರು ಎಂದ ಮೇಲೆ ವಿದ್ಯಾರ್ಥಿಗಳು, ಸಾರ್ವಜನಿಕರು ಯಾರನ್ನು ನಂಬಬೇಕು? ಕುಲಪತಿಗಳ ಆಯ್ಕೆಯಲ್ಲಿ ಮುಖ್ಯಮಂತ್ರಿ ಅಥವಾ ರಾಜಕೀಯ ಹಸ್ತಕ್ಷೇಪ ಇಲ್ಲದೆ ಅರ್ಹತೆ ಆಧಾರಮೇಲೆ ನೇಮಕ ನಡೆಯುವಂತಾಗಬೇಕು ಎಂದರು.

ಮೈಸೂರು ವಿಶ್ರಾಂತ ಕುಲಪತಿಪೊ›.ಎಸ್‌.ಎನ್‌.ಹೆಗ್ಡೆ, ಜೆಡಿಎಸ್‌ ಮುಖಂಡ ಪೊ›.ಕೆ.ಎಸ್‌.ರಂಗಪ್ಪವೇದಿಕೆಯಲ್ಲಿದ್ದರು. ಮಾಜಿ ಸಂಸದ ಎಚ್‌.ವಿಶ್ವನಾಥ್‌, ಶಾಸಕ ಜಿ.ಟಿ.ದೇವೇಗೌಡ, ವಿಧಾನಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌, ಸೇರಿದಂತೆ 15ಕ್ಕೂ ಹೆಚ್ಚು ವಿಶ್ರಾಂತ ಕುಲಪತಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

ಹೊಗಳುಭಟರು, ನೆಂಟರಿಸ್ಟರಿಂದ ಕುಮಾರಸ್ವಾಮಿ ಹಾಳಾದ ಎಂಬ ಅಪವಾದವಿದೆ. ನನಗೂ ಆ ಅನುಭವ ಆಗಿದೆ. ಮುಂದೆ ಆ ತಪ್ಪು ಮಾಡಲ್ಲ. ರಾಜಕೀಯ ಒತ್ತಡಗಳಿಗೆ ಒಳಗಾಗದೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ. ಮುಂದಿನ ವಾರ ಬೆಂಗಳೂರಿನಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರೊಂದಿಗೆ ಸಂವಾದ ನಡೆಸಿ ಸಲಹೆ ಪಡೆಯುತ್ತೇನೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next