Advertisement

ಬದುಕಿನ ಸಂಧ್ಯಾಕಾಲದಲಿ…

08:51 AM Feb 20, 2020 | mahesh |

ವಯಸ್ಸಾದ ಮೇಲೆ ಮಕ್ಕಳ ಮನೆಯಲ್ಲಿದ್ದುಕೊಂಡು, ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ ಬದುಕಬೇಕೆಂಬುದು ಹೆಚ್ಚಿನವರ ಕನಸು. ಆದರೆ, ಅಂದುಕೊಂಡಂತೆಯೇ ಬಾಳುವ ಅದೃಷ್ಟ ಎಲ್ಲರಿಗೂ ಇರುವುದಿಲ್ಲ…

Advertisement

ಪ್ರಾಯ ಮಾಗುತ್ತಾ ಬರುತ್ತಿದ್ದಂತೆ ಹಿರಿಯರು ಕಾಣುವ ಕನಸು- “ಇನ್ನು ನಾವು ಮಕ್ಕಳು-ಮೊಮ್ಮಕ್ಕಳೊಂದಿಗೆ ಆರಾಮಾಗಿ ಇರಬಹುದು. ನಮ್ಮ ಜವಾಬ್ದಾರಿ ಮುಗಿಯಿತು. ಮಕ್ಕಳನ್ನು ಬೆಳೆಸಿ, ಓದಿಸಿ, ಅವರ ಕಾಲ ಮೇಲೆ ನಿಲ್ಲುವಂತೆ ಮಾಡಿದ್ದಾಯ್ತು. ಇನ್ನು ಯಾವ ಜವಾಬ್ದಾರಿಯೂ ಇಲ್ಲ. ಕಾಲನ ಕರೆ ಬರುವವರೆಗೆ ದಿನ ಸವೆಸಿದರಾಯಿತು’ ಅಂತ. ಆದರೆ, ಅವರ ಕನಸು ನನಸಾಗುತ್ತದೆಯಾ?

ನಮ್ಮ ಮನೆಯ ಹತ್ತಿರ ಒಂದು ದೇವಸ್ಥಾನವಿದೆ. ಅಲ್ಲಿ ವರ್ಷಪೂರ್ತಿ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಯಕ್ಷಗಾನ, ನವರಾತ್ರಿ ಆಚರಣೆ ಇತ್ಯಾದಿ. ನನ್ನ ಪರಿಚಯದ ಒಬ್ಬ ಆಂಟಿ ಇ¨ªಾರೆ. ದೇವಾಲಯಕ್ಕೆ ಹತ್ತಿರವೇ ಅವರ ಮನೆ. ಅವರು ಎಲ್ಲಿ ಸಿಕ್ಕರೂ ಒಂದೈದು ನಿಮಿಷ ನನ್ನನ್ನು ನಿಲ್ಲಿಸಿ ಮಾತನಾಡಿಸದೇ ಮುಂದೆ ಹೋಗುವವರಲ್ಲ.

ಆ ದಿನ ಅವರು ಸಿಕ್ಕಾಗ ಕೇಳಿದೆ, “ದೇವಸ್ಥಾನದ ಕಾರ್ಯಕ್ರಮಕ್ಕೆ ನೀವ್ಯಾಕೆ ಬರಲಿಲ್ಲ? ಎಲ್ಲರೂ ಬಂದಿದ್ದರು. ಸುತ್ತಮುತ್ತಲಿನ ಊರವರೂ ಬಂದಿದ್ದರು’ ಅಂತ. ಅವರ ಮುಖ ಸಣ್ಣದಾಯಿತು. “ಹೇಗೆ ಬರಲಿ ಮಾರಾಯ್ತಿ ಈ ಮಗುವನ್ನು ಬಿಟ್ಟು?’ ಅಂದರು. ಅವರ ಸಮಸ್ಯೆ ನನಗರ್ಥವಾಯಿತು. ಗಂಡ ತೀರಿಹೋಗಿ ಸುಮಾರು ವರ್ಷಗಳಾಗಿವೆ. ಇರುವುದು ಒಬ್ಬಳೇ ಮಗಳು. ಅವಳಿಗೂ ಮದುವೆಯಾಗಿದೆ. ಹಾಗಾಗಿ ಇವರು ಮಗಳು-ಅಳಿಯನೊಂದಿಗೆ ಇದ್ದಾರೆ. ಅವರಿಬ್ಬರೂ ಕೆಲಸಕ್ಕೆ ಹೋಗುವವರು. ಐದು ವರ್ಷದ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಇವರದ್ದು.

ಬೆಳಗ್ಗೆ ಬೇಗನೆ ಎದ್ದು ಮನೆಯ ಎಲ್ಲರಿಗಾಗಿ ತಿಂಡಿ ತಯಾರಿಸಬೇಕು, ಮಗಳು- ಅಳಿಯನಿಗೆ ಊಟದ ಬುತ್ತಿ ರೆಡಿ ಮಾಡಬೇಕು, ಅವರು ಕೆಲಸಕ್ಕೆ ಹೋದ ಮೇಲೆ ಮಗುವನ್ನೆಬ್ಬಿಸಿ ಅದರ ಬೇಕು ಬೇಡಗಳನ್ನು ನೋಡಿಕೊಳ್ಳಬೇಕು. ತಿಂಡಿ ತಿನ್ನಿಸಿ, ಸ್ನಾನ ಮಾಡಿಸಿ ಸ್ಕೂಲ್‌ಗೆ ಬಿಟ್ಟುಬರುವ, ವಾಪಸ್‌ ಕರೆದುಕೊಂಡು ಬರುವ ಕೆಲಸವೂ ಇವರ ಪಾಲಿಗೇ! ಮನೆಯ ಇತರರ ಟೈಮ್‌ ಟೇಬಲ್‌ಗೆ ಹೊಂದುವಂತೆ ಇವರ ದಿನಚರಿ. ಇನ್ನು ವೀಕೆಂಡ್‌ಗಳಲ್ಲಿ ಮಗಳು-ಅಳಿಯ ಹೊರಗೆ ಸುತ್ತಾಟಕ್ಕೆ, ಮಾಲ್‌ಗೆ ,ಶಾಪಿಂಗ್‌ಗೆ ಹೋಗುವಾಗಲೂ ಮನೆ, ಮೊಮ್ಮಗುವಿನ ಜವಾಬ್ದಾರಿ ಇವರದ್ದೇ. ಅವರು ಮಗುವನ್ನು ಜೊತೆಗೆ ಕರೆದುಕೊಂಡು ಹೋದರೆ ಇವರಿಗೆ ಸ್ವಲ್ಪ ಫ್ರೀ ಟೈಮ್‌. ಜೊತೆಗೆ, ತಾನು ಯಾರಿಗೂ ಬೇಡವಾದೆನಾ ಎಂದು ಕಾಡುವ ಒಂಟಿತನ ಬೇರೆ.

Advertisement

ಇದು ಆ ಆಂಟಿಯ ವಿಷಯವಾಯಿತು. ಇನ್ನು ಕೆಲವು ಮನೆಗಳಲ್ಲಿ, ಗಂಡ- ಹೆಂಡತಿ ಇಬ್ಬರೂ ಮಕ್ಕಳ ಮನೆಯಲ್ಲಿರುತ್ತಾರೆ. ಆಗ ಅವರು ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿರುತ್ತಾರೆ. ಮೊಮ್ಮಗುವನ್ನು ಸ್ಕೂಲ್‌ಗೆ ಬಿಡುವುದು- ಕರೆದುಕೊಂಡು ಬರುವುದು, ಹಣ್ಣು ತರಕಾರಿ ಕೊಳ್ಳುವ ಕೆಲಸವನ್ನು ಗಂಡ ನಿಭಾಯಿಸಿದರೆ, ಮನೆಯೊಳಗಿನ ಕೆಲಸವನ್ನು ಹೆಂಡತಿ ಮಾಡಬಹುದು. ಆಗ, ಕೆಲಸವೂ ಭಾರ ಎನಿಸುವುದಿಲ್ಲ. ಮಾನಸಿಕವಾಗಿಯೂ ಒಬ್ಬರಿಗೊಬ್ಬರು ನೆರವಾಗುವುದರಿಂದ, ಒಂಟಿತನ ಕಾಡುವುದಿಲ್ಲ.

ಇಂಥ ಸಂದರ್ಭದಲ್ಲಿ, ಮಗ-ಸೊಸೆ ಅಥವಾ ಮಗಳು-ಅಳಿಯ, ಹಿರಿಯರಿಗೆ ಜೊತೆಯಾಗಬೇಕು. ಅವರನ್ನು ಮನೆ ಕಾಯುವ, ಮಕ್ಕಳನ್ನು ನೋಡಿಕೊಳ್ಳುವ ಕೆಲಸದವರಂತೆ ಕಾಣದೆ, ಅವರ ಜೊತೆ ನಗುನಗುತ್ತಾ ಮಾತನಾಡಿ, ತಮ್ಮೊಂದಿಗೆ ಸುತ್ತಾಡಲು ಕರೆದುಕೊಂಡು ಹೋಗಬೇಕು. ಅವರ ಆರೋಗ್ಯ, ಇಷ್ಟಾನಿಷ್ಟಗಳನ್ನು ವಿಚಾರಿಸಿದರೆ ಚೆನ್ನ! ಆಗ, “ಮಕ್ಕಳಿಗೆ ನಾವು ಭಾರವಾದೆವಾ?’ ಎಂಬ ಚಿಂತೆ ಹಿರಿಯರನ್ನು ಕಾಡುವುದಿಲ್ಲ.

ಎಲ್ಲ ಹಿರಿಯರ ಪರಿಸ್ಥಿತಿಯೂ ಹೀಗೇ ಇರುತ್ತದೆ ಎನ್ನುವಂತಿಲ್ಲ. ಕೆಲವರು ಇಷ್ಟಪಟ್ಟು ಎಲ್ಲ ಕೆಲಸವನ್ನೂ ಮಾಡುತ್ತಿರುತ್ತಾರೆ. ಮಕ್ಕಳು ಕೂಡಾ ಹಿರಿಯರನ್ನು ತಮ್ಮೊಂದಿಗೆ ತಿರುಗಾಡಲು ಹೋಗುತ್ತಾರೆ. ಕೆಲಸದಿಂದ ಮನೆಗೆ ಬಂದ ಮೇಲೆ, ಅಪ್ಪ-ಅಮ್ಮನಿಗೆ ವಿರಾಮ ಕೊಡುವವರಿದ್ದಾರೆ. ಇನ್ನೂ ಕೆಲವರು, ಅವರ ಪ್ರಾಯದವರ ಜೊತೆಯಲ್ಲಿಯೇ ಯಾತ್ರೆ, ಟೂರ್‌ಗಳಿಗೂ ಕಳಿಸಿಕೊಡುವವರಿದ್ದಾರೆ. ಖುಷಿ ಖುಷಿಯಾಗಿ ತಮ್ಮವರೊಂದಿಗೆ ಕಾಲಕಳೆಯುವವರು ನಿಜವಾಗಿಯೂ ಭಾಗ್ಯವಂತರು.

-ಸವಿತಾ ಅರುಣ್‌ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next