ದೇವನಹಳ್ಳಿ: ಪ್ರತಿ ಇಲಾಖೆಗಳಿಂದ ದೊರೆಯುವ ಸರ್ಕಾರದ ಸೌಲಭ್ಯ ಗಳನ್ನು ಫಲಾನುಭವಿಗಳಿಗೆ ತಲುಪಿಸುವ ಜವಬ್ದಾರಿ ಅಧಿಕಾರಿಗಳದ್ದಾಗಿದ್ದು, ಸರಿಯಾಗಿ ಮಾಹಿತಿ ನೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಗ್ರಾಪಂ ಅಧ್ಯಕ್ಷ ರಾಮಮೂರ್ತಿ ಸೂಚಿಸಿದರು.
ಕುಂದಾಣ ಹೋಬಳಿಯ ವಿಶ್ವನಾಥಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ 2020ನೇ ಸಾಲಿನ ಮೊದಲ ಹಂತದ ಕೆಡಿಪಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪಿಡಿಒ ಉಷಾ ಮಾತನಾಡಿ, ಗ್ರಾಪಂ ನಲ್ಲಿ ಸಿಗುವ ಸೌಲಭ್ಯಗಳನ್ನು ಗ್ರಾಮಗಳ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಪ್ರಯತ್ನಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ವಿಶ್ವನಾಥಪುರ, ಸೀಕಾಯನಹಳ್ಳಿ, ಶೆಟ್ಟೇರಗಳಲ್ಲಿ ಗ್ರಾಮಗಳಿಗೆ ಹೊಸ ಬೋರ್‌ವೆಲ್ ಕೊರೆಸಲು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಗ್ರಾಮಸ್ಥರ ಮನವಿಗಳಿಗೆ ಸ್ಪಂದಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಆರೋಗ್ಯ ಇಲಾಖೆಯಲ್ಲಿ ಗ್ರೂಪ್ ಡಿ ನೌಕರರ ಕೊರತೆ ಇದೆ ಎಂದು ಆರೋಗ್ಯ ಇಲಾಖೆ ವತಿಯಿಂದ ಬಂದಿದ್ದ ಸಹಾಯಕ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಪಶು ಇಲಾಖೆಯಿಂದ ಪ್ರತಿ ಮನೆಗೆ ಭೇಟಿ ನೀಡಿ ರಾಸುಗಳಿಗೆ ವ್ಯಾಕ್ಸಿನ್ ಸೇರಿದಂತೆ ನಿರ್ವಹಣೆ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ, ಶಿಕ್ಷಣ ಇಲಾಖೆ, ಕುಡಿಯುವ ನೀರು ಮತ್ತು ಗ್ರಾಮೀಣಾಭಿವೃದ್ಧಿಇಲಾಖೆ, ಆರೋಗ್ಯ ಇಲಾಖೆ, ಕೋ-ಅಪರೇಟಿವ್ ಸೊಸೆ„ಟಿ, ರೇಷ್ಮೇ ಇಲಾಖೆ, ಪಶುಪಾಲನಾ ಇಲಾಖೆಯ ಅಧಿಕಾರಿಗಳು, ಗ್ರಾಪಂ ಉಪಾಧ್ಯಕ್ಷೆ ರಮಾದೇವಿ, ಸ್ಥಾಯಿಸಮಿತಿ ಅಧ್ಯಕ್ಷರು, ಗ್ರಾಪಂ ಕಾರ್ಯದರ್ಶಿ ಡಿ.ಎನ್. ಮಂಜುನಾಥ್, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.