Advertisement

ಹೊಟೇಲ್‌ ಉದ್ಯಮಕ್ಕೆ ಕೈಗಾರಿಕೆ ಸ್ಥಾನ ನೀಡಿ

10:09 PM Feb 26, 2023 | Team Udayavani |

ಬೆಂಗಳೂರು: ರಾಜ್ಯವ್ಯಾಪಿ ಸುಮಾರು 65 ಸಾವಿರ ನೋಂದಾಯಿತ ಹೊಟೇಲ್‌ಗ‌ಳಿವೆ. ಸಾವಿರಾರು ಸಂಖ್ಯೆಯಲ್ಲಿ ಈ ವಲಯ ಕಾರ್ಮಿಕರಿಗೆ ಉದ್ಯೋಗ ನೀಡಿದೆ.

Advertisement

ಇಂತಹ ವಲಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದೆ. ಕೈಗಾರಿಕೆ ಸ್ಥಾನಮಾನವನ್ನು ಈ ವಲಯಕ್ಕೆ ನೀಡಬೇಕು ಎಂಬ ದಶಕದ ಕೂಗು, ಕೂಗಾಗಿಯೇ ಉಳಿದುಕೊಂಡಿದೆ.

ಸ್ಕಿಲ್ಡ್‌ ಎಂಪ್ಲಾಯೀಸ್‌ಗಳ ಕೊರತೆ ಕೂಡ ಉದ್ಯಮವನ್ನು ಗಾಢವಾಗಿ ಕಾಡುತ್ತಿದೆ. ನುರಿತ ನೌಕರರನ್ನು ಸೃಷ್ಟಿಸುವ ಕಾರ್ಯವನ್ನು ಇಲ್ಲಿಯ ವರೆಗೂ ಸರಕಾರಗಳು ಮಾಡಿಲ್ಲ. ಈ ಬಗ್ಗೆ ಯೋಜನೆಗಳನ್ನು ಕೂಡ ರೂಪಿಸಲಿಲ್ಲ. ಆ ಹಿನ್ನೆಲೆಯಲ್ಲಿ ರಾಜ್ಯ ಹೊಟೇಲ್‌ ಉದ್ಯಮದ ಹಿತಕಾಯುವ ಅಂಶಗಳು ಈ ಬಾರಿಯ ಚುನಾವಣ ಪ್ರಣಾಳಿಕೆಯಲ್ಲಿ ಇರಲಿ ಎಂದು ಹೊಟೇಲ್‌ ವ್ಯಾಪಾರಿಗಳು ಮನವಿ ಮಾಡುತ್ತೇವೆ.

ಜತೆಗೆ ರಾಜ್ಯದ ಹೊಟೇಲ್‌ ಉದ್ಯಮದ ಅಭಿವೃದ್ದಿಯ ದೃಷ್ಟಿಯಿಂದ ಈ ಕೆಳಕಂಡ ನಮ್ಮ ವಲಯದ ಬೇಡಿಕೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಅಧಿಕಾರಕ್ಕೆ ಬಂದಾಗ ಜಾರಿಗೆ ತರುವಂತೆ ಆಗ್ರಹಿಸುತ್ತೇವೆ.

ಹೊಟೇಲ್‌ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಬೇಕು. ಇದು ಜಾರಿಯಾದರೆ ಅನಿಲ ಸಿಲಿಂಡರ್‌ಗಳು ಸಬ್ಸಿಡಿಯಲ್ಲಿ ದೊರೆಯಲಿದೆ. ಕೈಗಾರಿಕೆಗೆ ಸಂಬಂಧಪಟ್ಟ ಎಲ್ಲ ಕಾನೂನುಗಳು ನಮಗೆ ಅನ್ವಯ ಆಗಲಿವೆ. ಆದರೆ ಈವರೆಗೂ ಸರಕಾರ ಕೈಗಾರಿಕೆ ಸ್ಥಾನ ನೀಡಿಲ್ಲ. ಈ ನಿಟ್ಟಿನಲ್ಲಿ ಗಮನ ಹರಿಸಬೇಕು.

Advertisement

ಹೊಟೇಲ್‌ ಉದ್ಯಮ ಕ್ಷೇತ್ರದಲ್ಲಿ ಸ್ಕಿಲ್ಡ್‌ ಎಂಪ್ಲಾಯೀಸ್‌ಗೆ ಕೊರತೆ ಇದೆ. ಇದರಿಂದಾಗಿ ಗ್ರಾಹಕರು ಬಯಸಿದ ರೀತಿಯಲ್ಲಿ ಹೊಟೇಲ್‌ ಉದ್ಯಮದಲ್ಲಿ ಸೇವೆ ನೀಡಲು ಆಗುತ್ತಿಲ್ಲ. ಹೊಟೇಲ್‌ ಉದ್ಯಮದ ಅಭಿವೃದ್ಧಿಯ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ಕೌಶಲಯುತ ಉದ್ಯೋಗಿಗಳ ಸೃಷ್ಟಿಸುವ ನಿಟ್ಟಿನಲ್ಲಿ ಯೋಜನೆ ಮತ್ತು ತರಬೇತಿಗಳನ್ನು ರೂಪಿಸಲು ಆದ್ಯತೆ ಕೊಡಬೇಕು.

ಬೆಂಗಳೂರು ಹೊಟೇಲ್‌ ಮಾಲಕರ ಸಂಘಕ್ಕಾಗಿ ಸರಕಾರ ಈಗಾಗಲೇ ಹಾರೋಹ ಳ್ಳಿಯಲ್ಲಿ ಒಂದು ಎಕ್ರೆ ಜಮೀನನ್ನು ನೀಡಿದೆ. ಆದರೆ ಸರಕಾರ ಇಲ್ಲಿಯವರೆಗೂ ಸಂಘಕ್ಕೆ ಹಸ್ತಾಂತರ ಮಾಡಿಲ್ಲ. ಆ ಭೂಮಿಯನ್ನು ಸಂಘಕ್ಕೆ ಹಸ್ತಾಂತರಿಸಿ ಕಾರ್ಮಿಕರ ತರಬೇತಿ ಕೇಂದ್ರ ಸ್ಥಾಪಿಸಬೇಕು.

ಪ್ರತೀ ವರ್ಷ ಬಿಬಿಎಂಪಿ ಇಲ್ಲವೆ ಮುನ್ಸಿಪಲ್‌ ಸಂಸ್ಥೆಯಲ್ಲಿ ಹೊಟೇಲ್‌ ಪರವಾನಿಗೆ ಪ್ರತೀ ವರ್ಷ ನವೀಕರಣ ಮಾಡುವ ವ್ಯವಸ್ಥೆ ಇದೆ. ಈ ಪದ್ಧತಿಯನ್ನು ತೆಗೆದು ಹಾಕುವ ಕೆಲಸ ಆಗಬೇಕಾಗಿದೆ. ಒಂದು ಸಲ ಹೊಟೇಲ್‌ ಪರವಾನಿಗೆ ಪಡೆದರೆ ಅದು ನಿರಂತರವಾಗಿರಬೇಕು. ಹೊಟೇಲ್‌ ಉದ್ಯಮಿಗಳಿಗೆ ಕಿರಿಕಿರಿ ಉಂಟುಮಾಡುವ ನವೀಕರಣ ಪರವಾನಿಗೆ ವ್ಯವಸ್ಥೆಯನ್ನು ತೆಗೆದು ಹಾಕುವ ಭರವಸೆ ನೀಡಬೇಕು.

ಹೊಟೇಲ್‌ ಒಂದಕ್ಕೆ ದಿನದ 24 ಗಂಟೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಇದರ ಜತೆಗೆ ಮೆಟ್ರೋ, ಬಸ್‌ಗಳು ಕೂಡ ರಾತ್ರಿಯಿಡೀ ಸಂಚರಿಸಬೇಕು. ಮಾಲ್‌ಗ‌ಳು ಕೂಡ ತೆರೆದಿರಬೇಕು. ಈ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಬೇಕು.

-ಬಿ.ಚಂದ್ರಶೇಖರ ಹೆಬ್ಬಾರ್,
ರಾಜ್ಯ ಹೊಟೇಲ್‌ಗ‌ಳ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next