Advertisement

ಗುಜರಾತ್‌-ಮಹಾರಾಷ್ಟ್ರ ಮಾದರಿ ಪರಿಹಾರ ಕೊಡಿ

11:33 AM Feb 22, 2019 | |

ತರೀಕೆರೆ: ತಾಲೂಕಿನ ಬೆಟ್ಟದಹಳ್ಳಿ, ತರೀಕೆರೆ ಪಟ್ಟಣ ಮತ್ತು ಎಂ.ಸಿ.ಹಳ್ಳಿ ಗ್ರಾಮದಲ್ಲಿ ಹಾದು ಹೋಗಲಿರುವ ಹೆದ್ದಾರಿ 206ರ ಬೈಪಾಸ್‌ ರಸ್ತೆಗಾಗಿ ರೈತರು ಬೆಳೆದು ನಿಂತಿರುವ ತೋಟ ಮತ್ತು ಜಮೀನು ಕಳೆದುಕೊಳ್ಳಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭೂಮಿಗೆ ಕಡಿಮೆ ಪರಿಹಾರ ನೀಡುತ್ತಿರುವುದನ್ನು ಖಂಡಿಸಿ ಹೋರಾಟ ನಡೆಸಲು ರೈತ ಸಂತ್ರಸ್ಥರ ಹೋರಾಟ ಸಮಿತಿ ತೀರ್ಮಾನಿಸಿದೆ.

Advertisement

ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯಲ್ಲಿ ರೈತರು ಪಟ್ಟಣದಲ್ಲಿ ಫೆ.27ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಟಿ.ಎಚ್‌.ಶಿವಶಂಕರಪ್ಪ, ತಾಲೂಕಿನಲ್ಲಿ ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯಿಂದ ಸಾಕಷ್ಟು ರೈತರು ಭೂಮಿ ಕಳೆದುಕೊಂಡಿದ್ದಾರೆ. ಅವರಿಗೆ ಇಲ್ಲಿಯವರೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಪಟ್ಟಣದ ರಸ್ತೆಯನ್ನು ಅಗಲೀಕರಣಗೊಳಿಸಿ 11 ವರ್ಷಗಳಾಗಿವೆ.  ಆದರೆ ರಸ್ತೆ ಅಭಿವೃದ್ಧಿ ಇನ್ನೂ ನಡೆದಿಲ್ಲ. ಇದೇ ರಸ್ತೆ ಅಗಲೀಕರಣ ಸಮಯದಲ್ಲಿ ಹಲವಾರು ಕಟ್ಟಡಗಳ ಮಾಲೀಕರು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಕಟ್ಟಡ ತೆರವುಗೊಳಿಸಿದ್ದರು. ಆದರೆ ಅವರಿಗೆ ಸರಕಾರ ಪರಿಹಾರ ನೀಡಲಿಲ್ಲ. ಈಗ ಹೆದ್ದಾರಿಗಾಗಿ ಬೈಪಾಸ್‌ ನಿರ್ಮಿಸಲು ಜಮೀನನ್ನು ತನ್ನ ವಶಕ್ಕೆ ಪಡೆಯಲು ಹೊರಟಿದೆ. ಜಮೀನು ಕಳೆದುಕೊಳ್ಳಲಿರುವ ರೈತರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಟಿಸ್‌ ನೀಡಿದೆ.
ಜೊತೆಗೆ ಕಡಿಮೆ ಪರಿಹಾರ ನಿಗದಿಪಡಿಸಿದೆ ಎಂದು ಆರೋಪಿಸಿದರು.

ಭೂಮಿ ಕಳೆದುಕೊಳ್ಳುವ ರೈತರಿಗೆ 2014ರಲ್ಲಿ ನಿಗದಿಪಡಿಸಿರುವ ದರಗಳಿಗೆ ಅನ್ವಯವಾಗುವಂತೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಅವರು ನೀಡುವ ಪರಿಹಾರ ಫಲವತ್ತಾದ ಭೂಮಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಕೂಡಲೇ ಅಧಿಕಾರಿಗಳು ರೈತರಿಗೆ 2019ರ ದರ ನಿಗದಿ ಪಡಿಸಬೇಕು. ಗುಜರಾತ್‌ ಮತ್ತು ಮಹಾರಾಷ್ಟ್ರಗಳಲ್ಲಿ ರೈತರಿಗೆ ನೀಡಿರುವ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಟಿ.ಎನ್‌.ಗೋಪಿನಾಥ್‌ ಮಾತನಾಡಿ, ಈ ಹಿಂದೆ ನಡೆದ ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳು ರೈತರ ಮೂಗಿಗೆ ತುಪ್ಪ ಸವರಿ ಹೋಗಿದ್ದರು. ಅವರ ನಿಜವಾದ ಬಣ್ಣ ಈಗ ಬಯಲಾಗಿದೆ. ಅಧಿಕಾರಿಗಳು ರೈತರಿಗೆ ಮೋಸ ಮಾಡಿದ್ದಾರೆ. ಹೆದ್ದಾರಿ ಅಭಿವೃದ್ಧಿ ನೆಪದಲ್ಲಿ ರೈತರಿಗೆ ನೋಟಿಸ್‌ ನೀಡಲಾಗುತ್ತಿದೆ. ರೈತರು ಯಾವುದೇ ನೋಟಿಸ್‌ ಸ್ವೀಕಾರ ಮಾಡಬಾರದು. ಒಂದು ವೇಳೆ ಸರಕಾರ ಬಲವಂತವಾಗಿ ಜಮೀನನ್ನು ಕಬಳಿಸಲು ಪ್ರಯತ್ನಿಸಿದರೆ ರೈತರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡುತ್ತಾರೆ. ಜೀವ ಪಣಕ್ಕಿಟ್ಟು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಾಧಿಕಾರಿ ನಿಗದಿಪಡಿಸಿರುವ ಪರಿಹಾರ ರೈತರಿಗೆ ಬೀಕ್ಷೆ ನೀಡಿದಂತಿದೆ. ಬೈಪಾಸ್‌ ನಿರ್ಮಾಣದ ಅಗತ್ಯವಿಲ್ಲ. ಶೇ.70ರಷ್ಟು ರೈತರು ಭೂಮಿ ನೀಡಲು ಒಪ್ಪಿಗೆ ನೀಡಿದರೆ ಮಾತ್ರ ಜಮೀನನ್ನು ಪಡೆದುಕೊಳ್ಳಬಹುದು ಎಂದು ನ್ಯಾಯಾಲಯದ ಆದೇಶವಿದೆ. ಒಂದು ವೇಳೆ ಪರಿಹಾರ ನೀಡುವುದಾದರೆ ರೈತರು ನಿಗದಿಪಡಿಸುವ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪುರಸಭೆ ಸದಸ್ಯ ಟಿ.ಎಸ್‌.ರಮೇಶ್‌ ಬೈಟು, ಟಿ.ಎಸ್‌.ಧರ್ಮರಾಜ್‌, ಆನಂದ್‌, ಶೇಖರ್‌.ಟಿ.ಕೆ. ಗಿರಿರಾಜ್‌, ಟಿ.ಕೆ.ಪುಟ್ಟಣ್ಣ, ವಜೀರ್‌ಅಹಮದ್‌ ಖಾನ್‌, ಮಂಜುನಾಥ್‌, ಕೃಷ್ಣಮೂರ್ತಿ, ರವಿ, ಚಂದ್ರಪ್ಪ, ಡಿ.ಎನ್‌.ಶಿವರಾಜ್‌ ಸೇರಿದಂತೆ ರೈತರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next