ಮೊನ್ನೆ, ನಮ್ಮನೆಗೆ ಆಡಲು ಬರುವ ಐದು ವರ್ಷದ ಹುಡುಗಿಗೆ ಒಂದು ಫ್ರಾಕ್ ಅನ್ನು ಅವಳ ಮೈಗೆ ಹಿಡಿದು ಅಳತೆ ಸರಿಯಾಗುತ್ತದೆಯೇ ಎಂದು ಪರೀಕ್ಷಿಸು ತ್ತಿದ್ದೆ. ಕೂಡಲೇಕಣ್ಣರಳಿಸಿ, “ಆಂಟಿ, ಈ ಅಂಗಿ ನನಗಾ?’ ಅಂದಳು. “ಹೌದು, ಸರಿ ಹೊಂದಿದರೆ ನಿನಗೇ’ ಅಂದದ್ದನ್ನು ಕೇಳಿ ಇನ್ನಷ್ಟು ನೆಗೆದಾಡಿದಳು. ಮನೆಗೆ ಹೋಗುವಾಗ ಅಂಗಿಯಿರುವ ಚೀಲವನ್ನು ಅತ್ಯಂತ ಜೋಪಾನದಿಂದ ಹಿಡಿದು ಕೊಂಡು ಹೋಗಿ-“ಅಮ್ಮಾ, ಆಂಟಿ ಹೊಸ ಅಂಗಿ ಕೊಟ್ಟರು’ಎಂದು ಕೂಗುತ್ತಾ ಒಳಹೋದಳು. ಅವಳ ಸಡಗರ ನೋಡಿ ನನಗಾದ ಖುಷಿ ಅಷ್ಟಿಷ್ಟಲ್ಲ!
ಆಗ ನೆನಪಾಗಿದ್ದು ನನ್ನ ಬಾಲ್ಯ. ನನಗೂ ಹೀಗೆ ಯಾರಾದರೂ ಸಣ್ಣ ಉಡುಗೊರೆ ಕೊಟ್ಟರೆ ಮುಖಮೊರದಗಲ ಅರಳುತ್ತಿತ್ತು. ಆಗೆಲ್ಲಾಮಕ್ಕಳನ್ನು ವಿಶೇಷವಾಗಿ ಆದರಿಸುವವಿಚಾರವೇ ಇರಲಿಲ್ಲ ಬಿಡಿ, ಈಗಿನಂತೆ. ಬರ್ತ್‌ಡೇ, ಗಿಫ್ಟ್ ಗಳೆಲ್ಲಾ ಇನ್ನೂದೂರದ ಮಾತು. ಹುಟ್ಟು ಹಬ್ಬದ ದಿನಮನೆಯಲ್ಲಿ ಪಾಯಸ ಮಾಡಿದರೆ ಹೆಚ್ಚು! ಅಜ್ಜಿ ಯುಗಾದಿಗೆಂದು, ದೀಪಾವಳಿಗೆಂದು ಕೊಡುತ್ತಿದ್ದ 50, 100 ರೂಪಾಯಿಗಳು, ಕುಟುಂಬದಲ್ಲಿ ನಡೆಯುವ ಮದುವೆಗಳಲ್ಲಿ ಕೊಡುವ ಬಟ್ಟೆಯ ಉಡುಗೊರೆಯನ್ನುನಮಗೆಂದೇ ಕೊಟ್ಟಾಗ ಆಗುವ ಖುಷಿಗೆ ಪದಗಳು ಸಿಗುತ್ತಿರಲಿಲ್ಲ. ನವರಾತ್ರಿಯ ದಿನಗಳಲ್ಲಿ, ನಾಳೆ ಸೀರೆ ಉಟ್ಟರೆ ಐವತ್ತು ಪೈಸೆ ಜಾಸ್ತಿ ದಕ್ಷಿಣೆ ಎಂದು ದೊಡ್ಡಪ್ಪ ಆಸೆ ಹುಟ್ಟಿಸಿದ್ದರಿಂದ 3ನೇ ತರಗಗತಿಯಲ್ಲಿ ಮೊದಲ ಬಾರಿಗೆ ಸೀರೆ ತೊಟ್ಟಿದ್ದೆ. ನಿನ್ನೆ ಮೊನ್ನೆ ನಡೆದ ಸಂಗತಿಗಳನ್ನು ಮರೆಯುವ ನಾನು, ನನಗಾಗಿಯೇ ಕೊಟ್ಟಉಡುಗೊರೆಗಳನ್ನು ಮರೆತಿಲ್ಲ. ಯಾಕೆಂದರೆ, ಆ ಘಳಿಗೆಯಅನುಭೂತಿ ಅಂಥದ್ದು. ಮುಗ್ಧ ಮನಸ್ಸಿನ ಸಂತೋಷ ಹೆಚ್ಚಿಸಿದ ಆಕ್ಷಣಗಳು ಎಂದೂ ಮರೆಯಲಾಗದಂಥವು.
ಅದೇ ದೊಡ್ಡವರಿಗೆ ಏನಾದರೂ ಕೊಟ್ಟು ನೋಡಿ ದಾಕ್ಷಿಣ್ಯಕ್ಕೆ ಮೊದಲು ಬೇಡವೆನ್ನುತ್ತಾರೆ, ತೆಗೆದುಕೊಂಡನಂತರ ಬೆನ್ನ ಹಿಂದೆ “ಇದರ ಬಣ್ಣ ಚಂದ ಇಲ್ಲ. ಅವರಿಗೆಬೇಡವಾಗಿತ್ತೇನೋ, ಅದಕ್ಕೇಕೊಟ್ಟರು, “ಇದನ್ನು ಕೊಡುವಬದಲು ಸುಮ್ಮನೆ ಇರಬಹುದಿತ್ತು’ ಎಂದು ಕಾಮೆಂಟ್ ಮಾಡುತ್ತಾರೆ. ನೂರಾರು ಐಬುಗಳನ್ನು ಹುಡುಕುತ್ತಾರೆ. ಕೊಟ್ಟದ್ದನ್ನು ಒಳ್ಳೆಯ ಮನಸ್ಸಿನಿಂದ ಸ್ವೀಕರಿಸುವ ಗುಣವೇ ಅವರಿಗೆಇರುವುದಿಲ್ಲ. ಯಾವುದೇ ಕಲ್ಮಶಗಳಿಲ್ಲದ ಮಕ್ಕಳಿಗೆ ಎಲ್ಲವನ್ನೂ ಹಾರ್ದಿಕವಾಗಿ ಸ್ವೀಕರಿಸುವ ಗುಣವಿದೆ.
ಯಾರಿಗೆ ಕೊಡದಿದ್ದರೂ ತೊಂದರೆಯಿಲ್ಲ,ಮಕ್ಕಳಿಗೆ ಕೊಡಬೇಕು ಎನ್ನುವುದು ಇದೇ ಕಾರಣಕ್ಕೆ. ಅವುಗಳಿಗೆ ಸಾವಿರಾರು ರೂಪಾಯಿಗಳ ಕೊಡುಗೆ ಬೇಕಾಗಿಲ್ಲ. ಅವರಿಗೆ 50 ಪೈಸೆಯೂ ಒಂದೇ 5000 ರೂಪಾಯಿಯೂಒಂದೇ; ಹೀಗಾಗಿ ಮಕ್ಕಳಿರುವ ಮನೆಗೆ ಎಂದೂ ಬರಿಕೈಯಲ್ಲಿಹೋಗದ ಅಭ್ಯಾಸ ಮಾಡಿಕೊಳ್ಳಿ -ಯಾವ ಕಾಲಕ್ಕೂ ಮರೆಯುವುದಿಲ್ಲ ಎಂಬ ಕಾರಣಕ್ಕಲ್ಲ. ತನಗೆಂದು ದೊರೆತ ಉಡುಗೊರೆಯನ್ನು ಮಗುವೊಂದು ಪಡೆದಾಗ ಅದರ ಕಣ್ಣಲ್ಲೊಂದು ಮಿಂಚು ಹುಟ್ಟುತ್ತದೆಯಲ್ಲ, ಆ ಹೊಳಪಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಂತೆಯೇಮಕ್ಕಳ ಮನಸ್ಸಿಗೆ ನೋವಾಗುವಂತೆ, ಹಂಗಿಸುವಂತೆ ಮಾತನಾಡಿದರೂಅವು ಎಂದೂ ಮರೆಯುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.
– ಶ್ರೀರಂಜನಿ ಅಡಿಗ