Advertisement

Karnataka: ವಾರದೊಳಗೆ ಬೆಳೆ ನಷ್ಟ ಪರಿಹಾರ ಕೊಡಿ: ಅಶೋಕ್‌

01:04 AM Oct 28, 2024 | Team Udayavani |

ಬೆಂಗಳೂರು: ತಂತ್ರಾಂಶದಲ್ಲಿ ತೊಂದರೆ ಇದೆ, ಆಧಾರ್‌ ವಿಲೀನ ಆಗಿಲ್ಲ ಎಂಬ ಕುಂಟು ನೆಪವೊಡ್ಡದೆ ಅತಿವೃಷ್ಟಿಯಿಂದಾಗಿರುವ ಬೆಳೆ ನಷ್ಟ ಪರಿಹಾರವನ್ನು ಒಂದು ವಾರದೊಳಗೆ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸಿರುವ ವಿಧಾನಸಭೆ ವಿಪಕ್ಷದ ನಾಯಕ ಆರ್‌. ಅಶೋಕ್‌, ರೈತರು ನೆಮ್ಮದಿಯಿಂದ ದೀಪಾವಳಿ ಹಬ್ಬವನ್ನಾದರೂ ಆಚರಿಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

Advertisement

ರವಿವಾರ ಈ ಕುರಿತು ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿ, ಹಿಂಗಾರು ಅವಧಿಯಲ್ಲಿ ಸುರಿದಿರುವ ಅತಿವೃಷ್ಟಿಯಿಂದ ಅಪಾರ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನು ವಿಪಕ್ಷಗಳು ಗಮನಕ್ಕೆ ತಂದ ಬಳಿಕ ಗಾಢ ನಿದ್ರೆಯಿಂದ ಎಚ್ಚೆತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ, ಜಿಲ್ಲಾಡಳಿತಗಳೊಂದಿಗೆ ವೀಡಿಯೋ ಸಂವಾದ ನಡೆಸಿದೆ ಎಂದರು.

ಕಳೆದ ವರ್ಷ ಬರ ಪರಿಹಾರ ವಿತರಣೆ ವೇಳೆ, ಈ ವರ್ಷ ಮುಂಗಾರು ಬೆಳೆ ಹಾನಿ ಪರಿಹಾರ ವಿತರಣೆ ವೇಳೆ ಉಂಟಾದ ಎಡವಟ್ಟುಗಳು ಮರುಕಳಿಸದಂತೆ ಸರಕಾರ ಈ ಬಾರಿಯಾದರೂ ಎಚ್ಚರ ವಹಿಸಬೇಕು. ಬೆಳೆ ಹಾನಿ ಸಮೀಕ್ಷೆಯನ್ನು ಸಮರೋಪಾದಿಯಲ್ಲಿ ನಡೆಸಿ, ಒಂದು ವಾರದೊಳಗೆ ಪರಿಹಾರದ ಹಣ ರೈತರ ಕೈಸೇರುವಂತೆ ಕ್ರಮ ಕೈಗೊಳ್ಳಬೇಕು. ಫ್ರೂಟ್ಸ್‌ ತಂತ್ರಾಂಶದಲ್ಲಿ ಸಮಸ್ಯೆ ಇದೆ, ಆಧಾರ್‌ ಲಿಂಕ್‌ ಆಗಿಲ್ಲ ಎಂದು ಕುಂಟು ನೆಪವೊಡ್ಡಿ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡದೆ ಈಗಲೇ ಪೂರ್ವಸಿದ್ಧತೆ ಮಾಡಿಕೊಂಡು, ಸಮೀಕ್ಷೆ ವರದಿ ಕೈಸೇರುತ್ತಿದ್ದಂತೆ ಡಿಬಿಟಿ ಮೂಲಕ ರೈತರ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಬೇಕು. ಕಳೆದ 2 ವರ್ಷದಿಂದ ಸತತವಾಗಿ ಬರ, ನೆರೆ ಹಾವಳಿಯಿಂದ ಹೈರಾಣಾಗಿರುವ ರೈತರು ವಾರದೊಳಗೆ ಪರಿಹಾರ ಹಣ ಕೈಸೇರಿದರೆ ದೀಪಾವಳಿ ಹಬ್ಬವನ್ನಾದರೂ ನೆಮ್ಮದಿಯಿಂದ ಆಚರಿಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next