Advertisement

ಜನಸೇವೆಗೆ ಇದೊಂದು ಬಾರಿ ಅವಕಾಶ ಕೊಡಿ

12:16 PM May 10, 2022 | Team Udayavani |

ಕಾಗವಾಡ: ಶಾಸಕ, ಸಂಸದ, ಸಚಿವ, ವಿಧಾನ ಪರಿಷತ್‌ ಸದಸ್ಯನಾಗಿ ಕಳೆದ 35 ವರ್ಷಗಳಿಂದ ಜನಸೇವೆ ಮಾಡುತ್ತಾ ಬಂದಿದ್ದೇನೆ. ರಾಜ್ಯದ ಶಿಕ್ಷಕರ ಸಮಸ್ಯೆಗಳು ಏನೆಂಬುದನ್ನು ನಾನು ಚೆನ್ನಾಗಿ ಅರಿತಿದ್ದು, ತಮ್ಮ ಸೇವೆ ಮಾಡಲು ಇದೊಂದು ಬಾರಿಗೆ ಆಶೀರ್ವಾದ ಮಾಡುವಂತೆ ಮಾಜಿ ಸಚಿವ ಹಾಗೂ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮನವಿ ಮಾಡಿಕೊಂಡರು.

Advertisement

ಸೋಮವಾರ ಉಗಾರ ಖುರ್ದ ಪಟ್ಟಣದ ಅಲಗೌಡ ಕಾಗೆ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ-ಪದವೀಧರರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ನನ್ನನ್ನು ಶಿಕ್ಷಕರ ಸಂಘದ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ತಮ್ಮೆಲ್ಲರ ಅಭಿಪ್ರಾಯ ಕೇಳಲು ಬಂದಿದ್ದೇನೆ. ತಾವೆಲ್ಲ ಶಿಕ್ಷಕ ಬಂಧುಗಳು ಇಷ್ಟೊಂದು ಹುರುಪಿನಿಂದ ನೂರಾರು ಜನ ಸೇರಿರುವುದನ್ನು ಕಂಡರೆ ಚನ್ನರಾಜ ಹಟ್ಟಿಹೊಳಿ ಅವರ ಹಾಗೆ ಬಹುಮತದಿಂದ ಗೆಲ್ಲುತ್ತೇನೆ ಎಂದು ಪ್ರಕಾಶ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದರು.

ಕಾಗವಾಡ ಮಾಜಿ ಶಾಸಕ ರಾಜು ಕಾಗೆ ಮಾತನಾಡಿ, ಪ್ರಕಾಶ ಹುಕ್ಕೇರಿಯವರು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು, ಶಿಕ್ಷಕರು ನನಗೆ ಕರೆ ಮಾಡಿ, ಪ್ರಕಾಶ ಹುಕ್ಕೇರಿ ಒಬ್ಬ ಕೆಲಸಗಾರ. ಅವರನ್ನು ನಾವು ಪಕ್ಷಾತೀತವಾಗಿ ಬೆಂಬಲಿಸುತ್ತೇವೆಂದು ಹೇಳುತ್ತಿರುವುದನ್ನು ಕಂಡರೆ ರಾಜ್ಯದಲ್ಲಿಯೇ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆಂಬ ವಿಶ್ವಾಸ ನನಗಿದೆ ಎಂದು ರಾಜು ಕಾಗೆ ಹೇಳಿದರು.

ಪ್ರೊ. ಮುರಗೇಶ ಪಾಟೀಲ ಮಾತನಾಡಿ, ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸುವಲ್ಲಿ ಅರುಣ ಶಹಾಪುರ ಮತ್ತು ಹಣಮಂತ ನಿರಾಣಿಯವರು ಭಾರಿ ಅನ್ಯಾಯ ಮಾಡಿದ್ದಾರೆ. 14 ಸಾವಿರ ಅತಿಥಿ ಉಪನ್ಯಾಸಕರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ಹಣಮಂತ ನಿರಾಣಿ ಹಾಗೂ ಅರುಣ ಶಹಾಪೂರ ಅವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಹೇಳಿದರು.

Advertisement

ಬಿಜೆಪಿ ಪಕ್ಷದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಇಂಥ 40 ಪರ್ಸೆಂಟ್‌ ಸರಕಾರಕ್ಕೆ ಪದವೀಧರರು ಮತ್ತು ಶಿಕ್ಷಕರು ತಕ್ಕ ಪಾಠ ಕಲಿಸುತ್ತೇವೆ ಎಂದು ಖಾರವಾಗಿ ನುಡಿದರು. ಈ ವೇಳೆ ಪ್ರಕಾಶ ಹುಕ್ಕೇರಿ ಹಾಗೂ ಅಥಣಿ ನ್ಯಾಯವಾದಿ ಸುನೀಲ ಸಂಕ ಅವರು ಶಿಕ್ಷಕ ಹಾಗೂ ಪದವೀಧರರ ಕುಂದು ಕೊರತೆ ಆಲಿಸಿದರು.

ವೇದಿಕೆಯ ಮೇಲೆ ಮಾಜಿ ಶಾಸಕ ಮೋಹನ ಶಹಾ, ಐನಾಪುರ ಪಟ್ಟಣ ಪಂಚಾಯತ್‌ ಸದಸ್ಯರಾದ ಪ್ರವೀಣ(ಪುಟ್ಟು) ಗಾಣಿಗೇರ, ನ್ಯಾಯವಾದಿ ಸಂಜಯ ಕುಚನೂರೆ, ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಗುಳಪ್ಪ ಜತ್ತಿ, ಸೌರಭ ಪಾಟೀಲ, ಮುಖಂಡರಾದ ಶಿದ್ದಗೌಡ ಕಾಗೆ, ಗಜಾನನ ಯರಂಡೋಲಿ, ಅನಂತಪುರ ಘಟಕದ ಬ್ಲಾಕ್‌ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಕಾಗವಾಡ ಪಿಕೆಪಿಎಸ್‌ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ, ಅಪ್ಪಾಸಾಬ ಮಳಮಳಸಿ, ಅರುಣ ಗಾಣಿಗೇರ, ರಾಜು ಮದನೆ, ಉಮೇಶಗೌಡ ಪಾಟೀಲ, ಸಂಜಯ ಕುಸನಾಳೆ, ನೂರಾರು ಶಿಕ್ಷಕರು, ಹಾಗೂ ಪಧವೀಧರರು ಇದ್ದರು. ಕಾಂಗ್ರೆಸ್‌ ಪಕ್ಷದ ಕಾಗವಾಡ ಬ್ಲಾಕ್‌ ಅಧ್ಯಕ್ಷ ವಿಜಯಕುಮಾರ ಅಕಿವಾಟೆ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next