ಜಗಳೂರು: ನರೇಗಾ ಯೋಜನೆಯಡಿ 30 ಲಕ್ಷ ರೂ. ಮೊತ್ತದ ಕಾಮಗಾರಿ ಬದಲಾಗಿ 10 ಲಕ್ಷ ರೂ. ಮೊತ್ತದ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ತಾಲೂಕಿನ ದೇವಿಕೆರೆ, ಆಸಗೋಡು, ದಿದ್ದಿಗಿ, ಪಲ್ಲಾಗಟೆ ಗ್ರಾಮ ಪಂಚಾಯಿತಿಗಳ ಸದಸ್ಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಇಓಗೆ ಮನವಿ ಸಲ್ಲಿಸಿದರು.
ಸೋಮವಾರ ತಾಲೂಕು ಪಂಚಾಯಿತಿ ಆವರಣಕ್ಕೆ ಆಗಮಿಸಿದ ನೂರಾರು ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಈ ವೇಳೆ ಆಸಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ತಾಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ 2019- 20 ನೇ ಸಾಲಿನಲ್ಲಿ ನರೇಗಾ ಕ್ರಿಯಾಯೋಜನೆಯಡಿ ಕಾಮಗಾರಿಗಳನ್ನು 30 ಲಕ್ಷಕ್ಕೆ ನಿಗದಿ ಪಡಿಸಿರುವುದರಿಂದ ಕಾಮಗಾರಿ ನಿರ್ವಹಿಸುಲು ತೊಂದರೆಯಾಗುತ್ತದೆ. ಆದ್ದರಿಂದ ಆದೇಶವನ್ನು ಮರು ಪರಿಶೀಲನೆ ನಡೆಸ ಬೇಕು ಎಂದು ಒತ್ತಾಯಿಸಿದರು.
ದೇವಿಕೆರೆ ಗ್ರಾಮ ಪಂಚಾಯಿತಿ ಸದಸ್ಯ ಬಸಪುರ ರವಿಕುಮಾರ್ ಮಾತನಾಡಿ, ತಾಲೂಕು ಮಟ್ಟದ ಅಧಿಕಾರಿಗಳಿಗೆ 10 ಲಕ್ಷ ರೂ. ಮೊತ್ತದ ಕಾಮಗಾರಿಗೆ ಅನುಮೋದನೆ ನೀಡುವ ಅಧಿಕಾರವಿದೆ. 30 ಲಕ್ಷ ರೂ. ಮೊತ್ತದ ಕಾಮಗಾರಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಹತ್ತಿರ ಅಲೆಯಬೇಕಾಗುತ್ತದೆ. ಹಿಂದುಳಿದ ಮತ್ತು ಬರಪೀಡಿತ ಪ್ರದೇಶವಾಗಿರುವ ತಾಲೂಕಿನಲ್ಲಿ ನರೇಗಾ ಯೋಜನೆಯಿಂದಲೇ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ 150 ದಿನಗಳ ಕೂಲಿ ಕೆಲಸ ದೊರೆಯುತ್ತಾದೆ.
5 ರಿಂದ 10 ಲಕ್ಷ ರೂ. ಮೊತ್ತದಲ್ಲಿ ಸಣ್ಣ ಕೆರೆ, ಗೋಕಟ್ಟೆ, ಚೆಕ್ ಡ್ಯಾಂಗಳಲ್ಲಿ ಹೂಳೆತ್ತಲು ಅವಕಾಶವಿದೆ. ಆದರೆ 30 ಲಕ್ಷ ರೂ. ಕಾಮಗಾರಿ ಮಾಡಲು ಸ್ಥಳಾವಕಾಶದ ಕೊರತೆಯೂ ಉಂಟಾಗುತ್ತದೆ. ಆದ್ದರಿಂದ ಅಧಿಕಾರಿಗಳು ಈ ನಿಯಮದ ಮರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜ್, ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ, ಮಲ್ಲೇಶ್, ಹುಚ್ಚೆಂಗಪ್ಪ, ಶಿವಣ್ಣ, ಬೈರೇಗೌಡ, ನಾಗರಾಜ್, ರಾಜಪ್ಪ, ಪರಸಪ್ಪ, ಸೇರಿದಂತೆ ಮತ್ತಿತರರು ಹಾಜರಿದ್ದರು.