ಚಿತ್ರದುರ್ಗ: ಕೆರೆ ಅಭಿವೃದ್ಧಿಯಿಂದ ಅಂತರ್ಜಲ ಹೆಚ್ಚಾಗಿ ರೈತರು ಸೇರಿದಂತೆ ಎಲ್ಲರಿಗೂ ಅನುಕೂಲವಾಗಲಿದೆ. ರೈತರ ಹಿತದೃಷ್ಟಿಯಿಂದ ಕೆರೆಗಳ ಅಭಿವೃದ್ಧಿಯಾಗಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಧಿಧೀಶ ಬನ್ನಿಕಟ್ಟೆ ಹನುಮಂತಪ್ಪ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿ ಕಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಮಟ್ಟದ ಕೆರೆ ಸಂರಕ್ಷಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಹಾಗೂ ಉಚ್ಚ ನ್ಯಾಯಾಲಯದ ಆದೇಶಗಳನ್ವಯ ಜಿಲ್ಲೆಯ ಜಲ ಮೂಲಗಳ ಸಂರಕ್ಷಣೆಗೆ ಕೆರೆ ಬಳಕೆದಾರರ ಸಂಘ, ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಯಾವ ರೀತಿಯಲ್ಲಿ ಲಭಿಸುವಂತೆ ಮಾಡಬೇಕು ಎನ್ನುವ ಕುರಿತು ಅನ್ವೇಷಣೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮಾಡಿ ಕಾರ್ಯೋನ್ಮುಖರಾಗಬೇಕು. ಗ್ರಾಮೀಣ ಪ್ರದೇಶದಲ್ಲಿ ರೈತರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾ ಬೆಳೆಯುವ ಬೆಳೆಗಳಿಂದ ರಾಷ್ಟ್ರ ಮತ್ತು ರಾಜ್ಯದ ವಿವಿಧ ಇಲಾಖೆಗಳು ಅಸ್ತಿತ್ವದಲ್ಲಿವೆ. ಸಾಧ್ಯವಾದಷ್ಟು ರೈತರ ಸಮಸ್ಯೆ ಬಗೆಹರಿಸಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಕೆರೆ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಎಲ್ಲಾ ರೈತರು ಮನದಟ್ಟು ಮಾಡಿಕೊಳ್ಳಬೇಕು. ಜಲಮಾಲಿನ್ಯ ಆಗದಂತೆ ಕೆರೆಗಳನ್ನು ಸಂರಕ್ಷಣೆ ಮಾಡಬೇಕು. ಕೆರೆ ಸಂರಕ್ಷಣೆಗಾಗಿ ಅಧಿ ಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಕೆರೆ ಬಳಕೆದಾರರ ಸಂಘದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು. ಕೆರೆಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ದೊಡ್ಡ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ತಿಳಿಸಿದರು.
ತುಮಕೂರು ಜಿಪಂ ಕಾರ್ಯನಿರ್ವಾಹಣಾಧಿಕಾರಿ ವೆಂಕಟರಾಮು ಮಾತನಾಡಿ, ಇಂದು ಕೆರೆಗಳು ಯಾಕೆ ನಶಿಸಿ ಹೋಗುತ್ತಿವೆ ಎಂದು ಮೊದಲು ನಾವು ತಿಳಿದುಕೊಳ್ಳಬೇಕು. ಕೆರೆ ಸಂರಕ್ಷಣೆ ಅಭಿವೃದ್ಧಿ ಕಾಯ್ದೆ 2014ರಲ್ಲಿ ಜಾರಿಯಾಗಿದ್ದು, ಅದನ್ನು 2018ರಲ್ಲಿ ತಿದ್ದಪಡಿ ಮಾಡುವುದರ ಮೂಲಕ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಅಭಿವೃದ್ಧಿಗೆ ಅವಕಾಶ ನೀಡಲಾಗಿದೆ. ಜನರು ಕೆರೆಗಳಿಗೆ ಪ್ಲಾಸ್ಟಿಕ್, ಮಣ್ಣು, ಕಸ, ಕಲ್ಲು ಹಾಕುವುದರಿಂದ ಕೆರೆಗಳು ಅಳಿವಿನಂಚಿನಲ್ಲಿವೆ. ನಗರೀಕರಣದಿಂದ ಕೆರೆ ಹಾಗೂ ರಾಜಕಾಲುವೆಗಳು ಒತ್ತುವರಿಯಾಗಿವೆ. ರಾಜಕಾಲುವೆ ಒತ್ತುವರಿಯಿಂದ ಕೆರೆಗಳಿಗೆ ನೀರು ಸರಿಯಾಗಿ ಬರುತ್ತಿಲ್ಲ. ರಾಜ್ಯದಲ್ಲಿ 39,179 ಕೆರೆಗಳಲ್ಲಿ 17,009 ಕೆರೆಗಳನ್ನು ಸರ್ವೇ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧಿಧೀಶ ಹಾಗೂ ಜಿಲ್ಲಾಮಟ್ಟದ ಕೆರೆ ಸಂರಕ್ಷಣಾ ಸಮಿತಿ ಸದಸ್ಯ ಕಾರ್ಯದರ್ಶಿ ಗಿರೀಶ ಬಿ.ಕೆ. ಮಾತನಾಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾ ಧಿಕಾರದ ಸಹಾಯಕ ಅಭಿಯಂತರ ಟಿ. ಮಲ್ಲಿಕಾರ್ಜುನ್, ಟ್ರಸ್ಟಿ ಹಾಗೂ ಎನ್ವಿರಾನ್ಮೆಂಟ್ ಗ್ರೂಪ್ ಸಂಯೋಜಕ ಲಿಯೋ ಎಫ್. ಸಾಲ್ಡಾನಾ, ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಬಿ. ನಾಗರಾಜಯ್ಯ ಮತ್ತಿತರರು ಭಾಗವಹಿಸಿದ್ದರು.
ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಕೆರೆಗಳು ಸಾರ್ವಜನಿಕರ ಅವಿಭಾಜ್ಯ ಅಂಗ. ಜಲಮೂಲಗಳಾದ ನದಿ, ಕೆರೆ, ಕಾಲುವೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರದ ಮಾರ್ಗದರ್ಶನದಂತೆ ಕೆರೆಗಳ ಒತ್ತುವರಿ ತೆರವು, ಅಭಿವೃದ್ಧಿ ಕಾರ್ಯಗಳಿಗೆ ಸಂಬಂದಂತೆ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಲಾಗುವುದು.
-ಇ. ಬಾಲಕೃಷ್ಣಪ್ಪ, ಅಪರ ಜಿಲ್ಲಾಧಿಕಾರಿ