Advertisement

ಪ್ರತಿ ಜಿಪಂ ಕ್ಷೇತ್ರಕ್ಕೆ 5 ಕೊಳವೆಬಾವಿ ಅವಕಾಶ ಕೊಡಿ

04:23 PM May 06, 2017 | |

ಕಲಬುರಗಿ: ಜಿಲ್ಲೆಯಲ್ಲಿ ಒಟ್ಟು 466 ಗ್ರಾಮಗಳಲ್ಲಿ ಕುಡಿಯವ ನೀರಿನ ಸಮಸ್ಯೆ ಇದೆ. ಜಿಲ್ಲಾ ಟಾಸ್ಕ್ಫೋರ್ಸ್‌ ಸಮಿತಿ ಅನುಮೋದನೆ ಪಡೆದು ನೀರು ಕೊಡಲು ಸಮಸ್ಯೆ ಉಲ್ಬಣಗೊಳ್ಳುತ್ತಿದ್ದರೆ ಕೂಡಲೇ ಜಿಲ್ಲಾಧಿಕಾರಿಗಳ ಅನುಮೋದನೆ ಪಡೆದು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಶುಕ್ರವಾರ ನಡೆದ 6ನೇ ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 

Advertisement

1210.73 ಕೋಟಿ ರೂ.ಗಳ 2017-18ನೇ ಸಾಲಿನ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಯೋಜನೆ ಮತ್ತು ಯೋಜನೇತರ ಶಿರ್ಷಿಕೆ ಅಡಿ ಕ್ರಿಯಾ ಯೋಜನೆಯಲ್ಲಿನ ಕಾಮಗಾರಿಗಳ ಕುರಿತು ಯೋಜನೆ ಸಿದ್ಧಪಡಿಸಲು ಸಿಇಒ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಟ್ಯಾಂಕರ್‌ ನೀರು: ಸಭೆಯ ನಿಲುವಳಿಯಂತೆ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಕುರಿತು ಗಂಭೀರ ಚರ್ಚೆ ನಡೆಯಿತು. ಕೆಲಸ ಮಾಡದೇ ಇರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸದಸ್ಯರು ಪ್ರಸ್ತಾಪಿಸಿದರು. 

ಎಲ್ಲ 466 ಗ್ರಾಮಗಳ ಕುಡಿವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಲಭ್ಯ ಇರುವ ಅನುದಾನ ಬಳಕೆ ಮಾಡಿ ತಕ್ಷಣ ಅನುಮೋದನೆ ಪಡೆದು ಕೆಲಸ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಒಂದು ವೇಳೆ ಈ ಸಂದರ್ಭದಲ್ಲಿ ಉಂಟಾಗುವ ವಿಳಂಬದಿಂದ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದರೆ ತುರ್ತಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಿ ಜನರ ನೆರವಿಗೆ ಬರಲು ತೀರ್ಮಾನಿಸಲಾಯಿತು. 

ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಸದಸ್ಯರಾದ ಸಿದ್ಧರಾಮ ಪ್ಯಾಟಿ, ಹರ್ಷಾನಂದ ಗುತ್ತೇದಾರ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ರಾಜೇಶ ಗುತ್ತೇದಾರ, ದಿಲೀಪ ಪಾಟೀಲ, ಶಿವಶರಣಪ್ಪ ಶಂಕರ ಧನಿ ಎತ್ತಿ, ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಸ್ಪಂದಿಸುವಂತೆ ಆಗ್ರಹಿಸಿದರು.

Advertisement

ಅವಕಾಶಕ್ಕೆ ಮನವಿ: ಜಿಪಂನ ಎಲ್ಲ ಸದಸ್ಯರು ತಮ್ಮ ಪ್ರತಿಯೊಂದು ಕ್ಷೇತ್ರದಲ್ಲಿ ಅವಶ್ಯಕತೆಗೆ ಅನುಗುಣವಾಗಿ ತಲಾ ಐದು ಕೊಳವೆ ಬಾವಿ ಕೊರೆಯಲು ಅನುಮತಿ ಹಾಗೂ ಅನುದಾನ ನೀಡಬೇಕೆಂದು ಮನವಿ ಸಲ್ಲಿಸಿದರು. ಸಿಇಒ ಹೆಬ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ, ನಮಗೆ ಈ ರೀತಿ ಅವಕಾಶ ಇಲ್ಲ, ಆದರೆ, ಎಚ್‌ಕೆಆರ್‌ಡಿಬಿಗೆ ನಾವು ಮನವಿ ಮಾಡ್ತೇವೆ. ಅವರು ಹಣದ ನೆರವು ನೀಡಿದರೆ ಅಗತ್ಯವಾಗಿ ಬೇಡಿಕೆ ಈಡೇರಿಸಲಾಗುವುದು ಎಂದರು.  

40 ಲಕ್ಷ ರೂ. ಇದೆ: ಈಗಾಗಲೇ ಪ್ರತಿ ಟಾಸ್ಕ್ಫೋರ್ಸ್‌ ಸಮಿತಿ ಬಳಿಯಲ್ಲಿ 40 ಲಕ್ಷ ರೂ. ಇದೆ. ಸಮಸ್ಯೆ ಇದ್ದ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಈ ಹಣವನ್ನು ಜಿಲ್ಲಾಧಿಕಾರಿ ಅನುಮತಿ ಪಡೆದು ಬಳಕೆ ಮಾಡಿಕೊಳ್ಳಬಹುದು. ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆ ನೀಗಿಸಲು ಹಣದ ಕೊರತೆ ಇಲ್ಲ. ಕೂಡಲೇ ಹಳ್ಳಿಗಳನ್ನು ಗುರುತಿಸಿ ನೆರವಿಗೆ ಧಾವಿಸಬೇಕು ಎಂದು ಸಿಇಒ ಹೇಳಿದರು. 

ವಾರದಲ್ಲಿ ತನಿಖೆ: ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ವಾರದಲ್ಲಿ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಸಿಇಒಗೆ ಸೂಚಿಸಿದರು. ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಅರವಿಂದ ಚವ್ಹಾಣ ಈ ಕುರಿತು ಗಮನ ಸೆಳೆದರು.

ಅಚ್ಚರಿ ಎಂದರೆ ಈ ಪಂಚಾಯಿತಿ ವ್ಯಾಪ್ತಿಯ ಕಂದಮ್ಮಗಳು, ವಿದ್ಯಾರ್ಥಿಗಳು, ಬಸ್‌ ಕಂಡಕ್ಟರ್‌ ಹೆಸರಿನಲ್ಲಿ ಎನ್‌ ಎಂಆರ್‌ ನಿರ್ಮಾಣ ಮಾಡಿ ಅವರ ಖಾತೆಗಳಿಗೆ ಕೂಲಿ ಜಮಾ ಮಾಡಲಾಗಿದೆ. ಇದರ ಸಂಪೂರ್ಣ ಮಾಹಿತಿಯನ್ನು 4-5ನೇ ಸಭೆಯಲ್ಲಿ ನೀಡಿದರೂ ನೀವು ಅಧಿಕಾರಿಗಳ ರಕ್ಷಣೆ ಮಾಡುತ್ತಿದ್ದಿರಿ ಎಂದು ಆಪಾದಿಸಿದರು. ಸಿಇಒ ಹೆಪ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ, ಈ ಕುರಿತು ಪ್ರಾದೇಶಿಕ ಆಯುಕ್ತರಿಂದ ಸೂಚನೆ ಬಂದಿದೆ.

ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳಿದಾಗ ಎಲ್ಲ ಸದಸ್ಯರು ಅಪಸ್ವರ ಎಳೆದರು. ಈ ವೇಳೆ ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಸುವರ್ಣಾ ಮಲಾಜಿ, ಈ ಕುರಿತು ವಾರದೊಳಗೆ ತನಿಖೆ ಮಾಡಿ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಇದಕ್ಕೆ  ಕೋರ್ಲಪಾಟಿ ಒಪ್ಪಿಗೆ ನೀಡಿದರು. ಯೋಜನಾಧಿಕಾರಿ ಪ್ರವೀಣ ಪ್ರಿಯಾ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next