ನವದೆಹಲಿ: ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ,ಅದು ತತ್ವಶಾಸ್ತ್ರದ ಪುಸ್ತಕವಾಗಿದೆ ಎಂದು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಕಾರ್ಯಾಧ್ಯಕ್ಷೆ ಸೈಯದ್ ಶಹೆಜಾದಿ ಶುಕ್ರವಾರ ಹೇಳಿದ್ದಾರೆ.
ಗುಜರಾತ್ ಸರ್ಕಾರವು 2022-23ರ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ 6 ರಿಂದ 12 ನೇ ತರಗತಿಗಳಿಗೆ ಭಗವದ್ಗೀತೆ ಶಾಲಾ ಪಠ್ಯಕ್ರಮದ ಭಾಗವಾಗಿ ಘೋಷಿಸಿದ ಕೆಲವು ದಿನಗಳ ನಂತರ ಶಹೆಜಾದಿ ಈ ಹೇಳಿಕೆ ನೀಡಿದ್ದಾರೆ.
ಗುಜರಾತ್ ಸರ್ಕಾರದ ಕ್ರಮ ಮತ್ತು ಇತರ ರಾಜ್ಯಗಳು ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಪರಿಚಯಿಸುವ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಕೇಳಿದಾಗ, ಶಾಹೆಜಾದಿ ತಮ್ಮ ವೈಯಕ್ತಿಕ ಅಭಿಪ್ರಾಯದಲ್ಲಿ, ತತ್ತ್ವಶಾಸ್ತ್ರದ ದೃಷ್ಟಿಕೋನದಿಂದ ಇದನ್ನು ನೋಡಬಹುದು. ವಿದೇಶಗಳಲ್ಲೂ ಇದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಲಾ ಪಠ್ಯಕ್ರಮದಲ್ಲಿ ಕುರಾನ್ ಅಥವಾ ಇತರ ಧಾರ್ಮಿಕ ಪಠ್ಯಗಳನ್ನು ಪರಿಚಯಿಸಲು ಏಕೆ ಪ್ರಸ್ತಾಪಿಸುತ್ತಿಲ್ಲ ಎಂದು ಕೇಳಿದಾಗ, “ನಾವು ಯಾರನ್ನೂ ತಡೆಯುವುದಿಲ್ಲ. ಪರಸ್ಪರರ ಧರ್ಮದ ಬಗ್ಗೆ ಗೌರವ ಹೆಚ್ಚಬೇಕು ಎಂದು ಬಯಸುತ್ತೇವೆ. ಎಲ್ಲಾ ಧರ್ಮಗಳ ಪುಸ್ತಕಗಳು ಲಭ್ಯವಾಗಬೇಕೆಂದು ನಾವು ಬಯಸುತ್ತೇವೆ. ನಾವು ಶಿಕ್ಷಣ ಸಚಿವಾಲಯಕ್ಕೆ ಹಲವು ಶಿಫಾರಸುಗಳನ್ನು ಮಾಡಿದ್ದೇವೆ ಎಂದರು.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಪರಿಚಯಿಸುವುದರಿಂದ ನೈತಿಕ ಮೌಲ್ಯಗಳನ್ನು ನೀಡಬಹುದಾಗಿದೆ. ಈ ಬಗ್ಗೆ ಚರ್ಚೆಯ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.