Advertisement

ಶೆಟ್ಟರ ಅಂಗಡಿಯ ಗರಿಗರಿ ಗಿರ್ಮಿಟ್‌

07:34 PM Mar 01, 2020 | Sriram |

ಗಿರ್ಮಿಟ್‌, ಮಂಡಕ್ಕಿ ಎಂದ ತಕ್ಷಣ ನೆನೆಪಿಗೆ ಬರುವುದು ಉತ್ತರ ಕರ್ನಾಟಕ. ಏಕೆಂದರೆ, ಇದು ಅಲ್ಲಿನ ವಿಶೇಷ ತಿಂಡಿ. ನಾವೀಗ ಹೇಳಲು ಹೊರಟಿರೋದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಸ್ಪೆಷಲ್‌ ಗಿರ್ಮಿಟ್‌ ಬಗ್ಗೆ.

Advertisement

ಉತ್ತರ ಕರ್ನಾಟಕದಲ್ಲಿ ಸಾಮಾನ್ಯವಾಗಿ ಗಿರ್ಮಿಟ್‌ ಅನ್ನು ಮಂಡಕ್ಕಿ (ಕಡಲೆಪುರಿ), ಶೇಂಗಾ, ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಅರಿಶಿಣ ಪುಡಿ, ಹಸಿ ಮೆಣಸಿನ ಪೇಸ್ಟ್‌, ಈರುಳ್ಳಿ, ನಿಂಬೆರಸ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಮಾಡ್ತಾರೆ. ಆದರೆ, ಯಲ್ಲಾಪುರದಲ್ಲಿ ಹಸಿಕೊಬ್ಬರಿ, ಎಣ್ಣೆ, ಮನೆಯಲ್ಲೇ ತಯಾರಿಸಿದ ಮಸಾಲಪುಡಿ, ನಿಂಬೆರಸ, ಈರುಳ್ಳಿ, ಟೊಮೆಟೋ ಹಾಕಿ ಮಾಡ್ತಾರೆ. ಇದು ಯಲ್ಲಾಪುರದ ಸ್ಪೆಷಲ್‌. ಗರಿಗರಿಯಾದ ಈ ಗಿರ್ಮಿಟ್‌ ಜೊತೆಗೆ ಉಪ್ಪಿನಲ್ಲಿ ಬೇಯಿಸಿದ ಮೆಣಸಿನಕಾಯಿ ತಿಂದರೆ, ಆ ಖುಷಿಯೇ ಬೇರೆ.

ಅಂಕೋಲ ರಸ್ತೆಯಲ್ಲಿ ಬರುವ ರಾಮಗುಳಿಯಲ್ಲಿ ಅಂಗಡಿ, ಹೋಟೆಲ್‌ ಇಟ್ಟುಕೊಂಡಿದ್ದ ನಾಗಪ್ಪ ಶೆಟ್ಟರು ಈ ಗರ್ಮಿಟ್‌ ಅಂಗಡಿ ಮಾಲೀಕರು. 33 ವರ್ಷಗಳ ಹಿಂದೆ ಯಲ್ಲಾಪುರಕ್ಕೆ ಬಂದ ನಾಗಪ್ಪ ಶೆಟ್ಟರು, ಬಸ್‌ ನಿಲ್ದಾಣದ ಬಳಿ ಮಾದರಿ ಶಾಲೆಯ ಪಕ್ಕದಲ್ಲಿ ಚಿಕ್ಕದಾದ ಅಂಗಡಿ ಇಟ್ಟುಕೊಂಡು ಟೀ ಕಾಫಿ, ಒಗ್ಗರಣೆ ಅವಲಕ್ಕಿ, ಚಕ್ಕುಲಿ, ಶಂಕರ ಪೋಳೆ, ಬನ್ಸ್‌, ಖಾರಾ, ಮಂಡಕ್ಕಿ ಹೀಗೆ ಕೆಲವು ತಿಂಡಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಗಿರ್ಮಿಟ್‌ ಫೇಮಸ್ಸು:
ನಾಗಪ್ಪ ಶೆಟ್ಟರು ನಾಲ್ಕೈದು ತಿಂಡಿ ಮಾಡುತ್ತಿದ್ದರೂ ಅದರಲ್ಲಿ ಜನಪ್ರಿಯವಾಗಿದ್ದು ಗಿರ್ಮಿಟ್‌. ಜನ ಈಗಲೂ “ನಾಗಪ್ಪ ಶೆಟ್ಟರ ಅಂಗಡಿ ಗಿರ್ಮಿಟ್‌’ ಅನ್ನು ಹೆಚ್ಚು ಇಷ್ಟ ಪಡುತ್ತಾರೆ. ನಾಗಪ್ಪರ ಪತ್ನಿ ಸುಧಾ ಮನೆಯಲ್ಲಿ ತಯಾರು ಮಾಡಿಕೊಂಡುತ್ತಿದ್ದ ಮಸಾಲೆ, ಗಿರ್ಮಿಟ್‌ನ ರುಚಿ ಹೆಚ್ಚಲು ಕಾರಣವಾಯಿತು.

ಅಂಗಡಿ ತೆರವು:
22 ವರ್ಷ ಬಸ್‌ ನಿಲ್ದಾಣದ ಸಮೀಪವೇ ವ್ಯಾಪಾರ ಮಾಡಿಕೊಂಡಿದ್ದ ಶೆಟ್ಟರ ಅಂಗಡಿಯನ್ನು ರಸ್ತೆ ವಿಸ್ತರಣೆಗಾಗಿ 11 ವರ್ಷಗಳ ಹಿಂದೆ ತೆರವು ಮಾಡಲಾಯಿತು. ನಂತರ ಬೆಲ್‌ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಕಾಂಪ್ಲೆಕ್ಸ್‌ನಲ್ಲಿ ಅಂಗಡಿ ಮುಂದುವರಿಸಲಾಗಿದೆ.

Advertisement

ಇದೀಗ ನಾಗಪ್ಪ ಶೆಟ್ಟರಿಗೆ ವಯಸ್ಸಾಗಿದ್ದು, ಇವರ ಪುತ್ರ ಸುಭಾಷ್‌ ಶೆಟ್ಟರು ಈಗ ಅಂಗಡಿ ನೋಡಿಕೊಳ್ಳುತ್ತಿದ್ದಾರೆ. ಅಂಗಡಿಯನ್ನು ಮತ್ತಷ್ಟು ವಿಸ್ತಾರ ಮಾಡಬೇಕೆಂಬ ಹಂಬಲವಿದ್ದರೂ ಕಾರ್ಮಿಕರ ಸಮಸ್ಯೆ ಇರುವ ಕಾರಣ, ಗಿರ್ಮಿಟ್‌, ಆಮ್ಲೆಟ್‌, ಜ್ಯೂಸ್‌, ತಂಪು ಪಾನೀಯ ಮಾರುತ್ತಾ ಅಂಗಡಿಯನ್ನು ಮುಂದುವರಿಸಿದ್ದಾರೆ ಸುಭಾಷ್‌.

ಸಿಗುವ ತಿಂಡಿ:
ಇಲ್ಲಿ ಮುಖ್ಯವಾದ ತಿಂಡಿ ಗಿರ್ಮಿಟ್‌ (ದರ 20 ರೂ.), ಕಜ್ಜಾಯ, ಟೀ, ಕಾಫಿ (ತಲಾ 10 ರೂ.) ಶರಬತ್ತು, ಲಿಂಬುಸೋಡ, ತಂಪು ಪಾನೀಯವನ್ನು ಮಾರಾಟ ಮಾಡಲಾಗುತ್ತದೆ.

ಅಂಗಡಿ ಸಮಯ:
ಬೆಳಗ್ಗೆ 11 ರಿಂದ ಮಧ್ಯಾಹ್ನ ಎರಡೂವರೆ, ಸಂಜೆ 4 ಗಂಟೆಯಿಂದ 8.30ವರೆಗೆ. ವಾರದ ರಜೆ ಇಲ್ಲ.

ಅಂಗಡಿ ವಿಳಾಸ:
ಬೆಲ್‌ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಕಾಂಪ್ಲೆಕ್ಸ್‌. ಯಲ್ಲಾಪುರ ಪಟ್ಟಣ.

– ಭೋಗೇಶ ಆರ್‌.ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next