ಪುರಿ(ಉತ್ತರಾಖಂಡ್): ನಾಲ್ಕು ವರ್ಷದ ಸಹೋದರನ ಜತೆ ಆಡವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಚಿರತೆಯೊಂದು ದಾಳಿ ನಡೆಸಿದ ಸಂದರ್ಭದಲ್ಲಿ 11 ವರ್ಷದ ಬಾಲಕಿ ದಿಟ್ಟತನದಿಂದ ಸಹೋದರನನ್ನು ರಕ್ಷಿಸಿದ ಘಟನೆ ಉತ್ತರಾಖಂಡ್ ನ ದೇವ್ ಕುಂಡೈ ಟಾಲ್ಲಿ ಗ್ರಾಮದಲ್ಲಿ ನಡೆದಿದೆ.
ಅಕ್ಟೋಬರ್ 4ರಂದು ರಾಖಿ ಎಂಬ 11 ವರ್ಷದ ಬಾಲಕಿ ನಾಲ್ಕು ವರ್ಷದ ಸಹೋದರನ ಜತೆ ಆಡುವಾಡುತ್ತಿದ್ದ ವೇಳೆ ಚಿರತೆ ದಾಳಿ ನಡೆಸಿ ಎತ್ತಿಕೊಂಡು ಹೋಗುತ್ತಿದ್ದಾಗ, ಧೈರ್ಯದಿಂದ ಚಿರತೆಯನ್ನು ಅಡ್ಡಗಟ್ಟಿ ಸೆಣಸಾಡಿದ್ದಳು!. ಬಳಿಕ ತಮ್ಮನ ರಕ್ಷಣೆಗಾಗಿ ಕೂಗಿಕೊಂಡಾಗ ಗ್ರಾಮಸ್ಥರು ಒಟ್ಟಾಗಿ ಬಂದ ಪರಿಣಾಮ ಚಿರತೆ ಮಗುವನ್ನು ಬಿಟ್ಟು ಓಡಿಹೋಗಿರುವುದಾಗಿ ವರದಿ ತಿಳಿಸಿದೆ.
ಏತನ್ಮಧ್ಯೆ ಮಗುವಿನ ಕುತ್ತಿಗೆಗೆ ಆಳವಾದ ಗಾಯವಾಗಿರುವುದಾಗಿ ಮಧು ದೇವಿ (ಮಗುವಿನ ಚಿಕ್ಕಮ್ಮ) ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ತಮ್ಮನನ್ನು ರಕ್ಷಿಸಲು ಹೋದ ರಾಖಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಹೋಗಿದ್ದರು.
ಆದರೆ ವೈದ್ಯರು ದೆಹಲಿ ಆಸ್ಪತ್ರೆಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಬಳಿಕ ಬಾಲಕಿಯನ್ನು ದೆಹಲಿ ಸರಕಾರಿ ಆಸ್ಪತ್ರೆಗೆ ಕರೆತಂದಾಗ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಕೊನೆಗೆ ಉತ್ತರಾಖಂಡ್ ಪ್ರವಾಸೋದ್ಯಮ ಸಚಿವ, ಸ್ಥಳೀಯ ಶಾಸಕ ಸತ್ಪಾಲ್ ಮಹಾರಾಜ್ ಮಧ್ಯಪ್ರವೇಶಿಸುವ ಮೂಲಕ ಅಕ್ಟೋಬರ್ 7ರಂದು ರಾಮ್ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆಯ ನಂತರ ಬಾಲಕಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿ ವಿವರಿಸಿದೆ.
ಸಚಿವ ಮಹಾರಾಜ್ ಬಾಲಕಿಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದ್ದು, ಇನ್ನುಳಿದ ವೈದ್ಯಕೀಯ ಖರ್ಚು, ವೆಚ್ಚ ಭರಿಸುವ ಭರವಸೆ ನೀಡಿರುವುದಾಗಿ ಪಿಟಿಐ ವರದಿ ಮಾಡಿದೆ.
ಚಿರತೆ ಜತೆ ಸೆಣಸಾಡಿ ತಮ್ಮನನ್ನು ರಕ್ಷಿಸಿದ ಬಾಲಕಿಯ ಧೈರ್ಯವನ್ನು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡ ದೂರವಾಣಿ ಕರೆ ಮಾಡಿ ಶ್ಲಾಘಿಸಿದ್ದಾರೆ. ಅಲ್ಲದೇ ರಾಖಿ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ಪುರಿ ಜಿಲ್ಲಾಧಿಕಾರಿ ಡಿಎಸ್ ಗಾರ್ಬಾಯಾಲ್ ತಿಳಿಸಿದ್ದಾರೆ.